ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಯೂಟದಲ್ಲಿ ಹಲ್ಲಿ ಬಿದ್ದ ಪ್ರಕರಣ: 82 ಮಕ್ಕಳು ಅಸ್ವಸ್ಥ, ಚಿಕಿತ್ಸೆ

Last Updated 16 ಜುಲೈ 2019, 15:27 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ಹೊಸವಂಟಮೂರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಮಧ್ಯಾಹ್ನ ಹಲ್ಲಿ ಬಿದ್ದಿದ್ದ ಬಿಸಿಯೂಟ ಸೇವಿಸಿದ ಪರಿಣಾಮ ಅಸ್ವಸ್ಥಗೊಂಡಿದ್ದ 82 ಮಕ್ಕಳಿಗೆ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಬಿಡುಗಡೆ ಮಾಡಲಾಗಿದೆ.

‘ಅಡುಗೆ ತಯಾರಿಸುವಾಗ ಅನ್ನದಲ್ಲಿ ಹಲ್ಲಿ ಬಿದ್ದಿತ್ತು ಎಂದು ತಿಳಿದುಬಂದಿದೆ. ಕೆಲವು ಮಕ್ಕಳು ವಾಂತಿ ಮಾಡಿದ್ದಾರೆ. ಬಳಿಕ, ಅನ್ನದಲ್ಲಿ ಹಲ್ಲಿ ಬಿದ್ದಿತ್ತೆನ್ನುವ ವಿಷಯ ತಿಳಿದ ಉಳಿದ ಮಕ್ಕಳಲ್ಲಿ ಬಹುತೇಕರು ಆತಂಕದಿಂದ ವಾಂತಿ ಮಾಡಿದ್ದಾರೆ. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ಎಲ್ಲ ಮಕ್ಕಳನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಯಾರಿಗೂ ಪ್ರಾಣಾಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ’ ಎಂದು ಡಿಡಿಪಿಐ ಎ.ಬಿ. ಪುಂಡಲೀಕ ‘ಪ್ರಜಾವಾಣಿ’ಗೆ ತಿಳಿಸಿದರು.

ಎನ್‌ಜಿಒ ಈ ಶಾಲೆಗೆ ಮಧ್ಯಾಹ್ನದ ಬಿಸಿಯೂಟ ಪೂರೈಸುತ್ತಿದೆ. ಮಕ್ಕಳು ವಾಂತಿ ಮಾಡಿದ್ದನ್ನು ಗಮನಿಸಿದ ಬಳಿಕವಷ್ಟೇ ಅನ್ನದಲ್ಲಿ ಹಲ್ಲಿ ಬಿದ್ದಿದ್ದ ವಿಷಯ ಗೊತ್ತಾಗಿದೆ ಎನ್ನಲಾಗಿದೆ. ಆತಂಕಗೊಂಡ ಶಿಕ್ಷಕರು ಹಾಗೂ ಪೋಷಕರು ಮಕ್ಕಳನ್ನು ಕೂಡಲೇ ಆಸ್ಪತ್ರೆಗೆ ಕರೆತಂದಿದ್ದರು.

‘1ರಿಂದ 3ನೇ ತರಗತಿ ಮಕ್ಕಳಿಗೆ ಮೊದಲಿಗೆ ಊಟ ಬಡಿಸಲಾಗಿತ್ತು. ಕೆಲವರು ವಾಂತಿ ಮಾಡಿದ್ದರಿಂದ, ತಕ್ಷಣ ಊಟ ವಿತರಣೆ ಸ್ಥಗಿತಗೊಳಿಸಲಾಗಿದೆ. ಗ್ರಾಮದಲ್ಲಿರುವ ಪಿಎಚ್‌ಸಿಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಪೋಷಕರು ಹಾಗೂ ಸ್ಥಳೀಯರ ಆತಂಕ ನಿವಾರಣೆಗಾಗಿ ಎಲ್ಲರನ್ನೂ ಆಸ್ಪತ್ರೆಗೆ ಕರೆತರಲಾಗಿದೆ’ ಎಂದು ಬಿಇಒ ಲೀಲಾವತಿ ಹಿರೇಮಠ ತಿಳಿಸಿದರು.

ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ಡಿಡಿಪಿಐ ಎ.ಬಿ. ಪುಂಡಲೀಕ, ಎಸಿಪಿ ಬಿ.ಎಸ್. ಬಾಲಚಂದ್ರ, ಕಾಕತಿ ಠಾಣೆ ಪಿಎಸ್‌ಐ ಮಂಜುನಾಥ ಭಜಂತ್ರಿ, ಸಿಬ್ಬಂದಿ ಸಂತೋಷ ಚಿನ್ನಣ್ಣವರ, ಮಲ್ಲುಕಾರ್ಜುನ ತಳವಾರ, ಬಿ.ಎಸ್. ನಾಗಣ್ಣವರ ಭೇಟಿ ನೀಡಿದ್ದರು.

‘ಬಿಸಿಯೂಟ ಪೂರೈಸುವಲ್ಲಿ ನಿರ್ಲಕ್ಷ್ಯ ವಹಿಸಿದ ಎನ್‌ಜಿಒಗೆ ನೋಟಿಸ್ ನೀಡಲಾಗುವುದು’ ಎಂದು ಡಿಡಿಪಿಐ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT