ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕೋಡಿ: ಏಕವೀರಿ ಕೆರೆಗೆ ಅತಿಕ್ರಮಣದ ಕಪ್ಪುಚುಕ್ಕೆ

ನುಂಗಣ್ಣರ ಪಾಲಾದ ಮೂರು ಎಕರೆ ಜಾಗ: ಕೆರೆ ರಕ್ಷಣೆಗೆ ಏಕವೀರಿ ಫೌಂಡೇಷನ್ ಹರಸಾಹಸ
ಚಂದ್ರಶೇಖರ ಎಸ್ ಚಿನಕೇಕರ
Published 26 ಮೇ 2024, 4:09 IST
Last Updated 26 ಮೇ 2024, 4:09 IST
ಅಕ್ಷರ ಗಾತ್ರ

ಚಿಕ್ಕೋಡಿ: ತಾಲ್ಲೂಕಿನ ಸದಲಗಾ ಪಟ್ಟಣದ ಹೃದಯ ಭಾಗದಲ್ಲಿರುವ ಐತಿಹಾಸಿಕ ಏಕವೀರಿ ಕೆರೆ ಏಳೂವರೆ ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ.

ಸುತ್ತಲೂ ಮರ ಗಿಡಗಳನ್ನು ನೆಟ್ಟಿದ್ದರಿಂದ ಎಲ್ಲೆಲ್ಲೂ ಹಸಿರು ಕಾಣುತ್ತದೆ. ಆಲ, ಹುಣಸೆ, ಜಾಂಬಳಿ, ಬೇವು, ಬಿಲ್ವ ಸೇರಿದಂತೆ ವಿವಿಧ ಮರ, ಗಿಡಗಳಿಂದ ಕೆರೆಯು ಸೊಗಸಾಗಿ ಕಂಗೊಳಿಸುತ್ತದೆ. ಕಳೆದ ಎರಡು ದಶಕಗಳಿಂದ ಮೂರು ಎಕರೆಯಷ್ಟು ಕೆರೆಯು ನುಂಗಣ್ಣರ ಪಾಲಾಗಿದ್ದು, ಇದೀಗ ಕೇವಲ ನಾಲ್ಕೂವರೆ ಎಕರೆ ಮಾತ್ರ ಉಳಿದುಕೊಂಡಿದೆ.

ಸದಲಗಾ ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಪಟ್ಟಣದ ಮಧ್ಯ ಭಾಗದಲ್ಲಿ ಕೆರೆ ಇರುವುದರಿಂದ ಸುತ್ತಮುತ್ತಲಿನ ಜನರು ಕೆರೆಯನ್ನು ಅತಿಕ್ರಮಣ ಮಾಡಿಕೊಂಡು ಕಟ್ಟಡ ಕಟ್ಟಿಕೊಂಡಿದ್ದಾರೆ. ಪುರಸಭೆಯು  ಅನಧಿಕೃತವಾಗಿ ಕೆರೆಯ ಜಾಗದಲ್ಲಿ ಏಳು ನಿವೇಶನಗಳನ್ನು ಮಾರ್ಪಡಿಸಿ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದೆ. ಹೀಗಿದ್ದರೂ ಕೆರೆಯ ಅತಿಕ್ರಮಣವನ್ನು ತೆರವುಗೊಳಿಸಲು ಈ ಹಿಂದಿನ ಉಪ ವಿಭಾಗಾಧಿಕಾರಿ ಮಾಧವ ಗಿತ್ತೆ ಮುಂದಾಗಿದ್ದರು. ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಎರಡೇ ತಿಂಗಳಲ್ಲಿ ಇಲ್ಲಿಂದ ಬೇರೆಡೆ ವರ್ಗಾವಣೆಗೊಂಡರು. ಹೀಗಾಗಿ ಕೆರೆಯ ಅತಿಕ್ರಮಣ ತೆರವು ಕಾರ್ಯ ಹಾಗೇ ಉಳಿದುಕೊಂಡಿದೆ.

ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಉಳ್ಳವರು ಕೆರೆಯ ಜಾಗವನ್ನು ಒತ್ತುವರಿ ಮಾಡಿದ್ದರಿಂದ ಕೆರೆಯ ಅತಿಕ್ರಮಣ ತೆರವುಗೊಳಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಕೆರೆ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಸೇರಿದಂತೆ ಹಲವರಿಗೆ ಆಗಾಗ ಮನವಿ ನೀಡಲಾಗುತ್ತಿದೆ. ಹೀಗಿದ್ದರೂ ಅತಿಕ್ರಮಣ ತೆರವು ಮಾಡಿ ಕೆರೆಯನ್ನು ಉಳಿಸುವ ಪ್ರಯತ್ನ ಮಾತ್ರ ನಡೆಯುತ್ತಲೇ ಇಲ್ಲ’ ಎಂಬುದು ಏಕವೀರಿ ಫೌಂಡೇಷನ್ ಅಳಲು.

ಕಳೆದ ಏಳೆಂಟು ವರ್ಷಗಳ ಹಿಂದೆ ಏಕವೀರಿ ಫೌಂಡೇಷನ್ ವತಿಯಿಂದ ಕೆರೆಯ ಸುತ್ತಲೂ 150ಕ್ಕೂ ಹೆಚ್ಚು ಗಿಡ,  ಮರಗಳನ್ನು ಬೆಳೆಸಲಾಗುತ್ತಿದೆ. ಒಂದು ಎಕರೆ ಪ್ರದೇಶದಲ್ಲಿ ಆಲ, ಬೇವು, ನೀಲ, ಬಿಲ್ಪತ್ತೆ ಮರಗಳು ಸೇರಿದಂತೆ ದೀರ್ಘಕಾಲಿಕ ಮರಗಳನ್ನೇ ಇಲ್ಲಿ ನೆಡಲಾಗಿದ್ದರಿಂದ ನೆರಳಾಗುತ್ತಿದೆ. ಪಕ್ಷಿ ಸಂಕುಲಕ್ಕೂ ಆಶ್ರಯವಾಗಿದೆ. ಕೆರೆಯ ಸುತ್ತಲೂ ಗಿಡ, ಮರಗಳನ್ನು ಬೆಳೆಸಿದ್ದರಿಂದ ಇದೀಗ ಒತ್ತುವರೆಯಾಗುವುದು ನಿಂತು ಹೋಗಿದೆ. ಆದರೆ, ಈ ಹಿಂದೆ ಒತ್ತುವರೆಯಾಗಿದ್ದ ಮೂರು ಎಕರೆ ಪ್ರದೇಶವನ್ನು ಕೆರೆಗೆ ಮರಳಿ ಪಡೆಯಬೇಕೆಂದು ಏಕವೀರಿ ಫೌಂಡೇಷನ್ ನಿರಂತರ ಹೋರಾಟ ಮಾಡುತ್ತಿದೆ.

ಸದಲಗಾ ಪಟ್ಟಣದ ಏಕವೀರಿ ಕೆರೆಯ ಸಮಗ್ರ ನೋಟ
ಸದಲಗಾ ಪಟ್ಟಣದ ಏಕವೀರಿ ಕೆರೆಯ ಸಮಗ್ರ ನೋಟ
ಏಳೂವರೆ ಎಕರೆಯಷ್ಟಿದ್ದ ಕೆರೆಯು ಅತಿಕ್ರಮಣಗೊಂಡು ಇದೀಗ ನಾಲ್ಕೂವರೆ ಎಕರೆಯಷ್ಟು ಮಾತ್ರ ಉಳಿದಿದೆ. ಇದನ್ನು ತಡೆಯಲು ಕೆರೆ ಸುತ್ತಲು ನೂರಾರು ಗಿಡ ಮರಗಳನ್ನು ಬೆಳೆಸಿ ಪೋಷಿಸಲಾಗುತ್ತಿದೆ
ರಾಜಕುಮಾರ ಢಾಂಗೆ ಅಧ್ಯಕ್ಷ ಏಕವೀರಿ ಫೌಂಡೇಷನ್ ಸದಲಗಾ
ಏಕವೀರಿ ಕೆರೆ ಅತಿಕ್ರಮಣ ಕುರಿತು ಸರ್ವೆ ಮಾಡಲು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು
ಚಿದಂಬರ ಕುಲಕರ್ಣಿ ತಹಶೀಲ್ದಾರ್ ಚಿಕ್ಕೋಡಿ

ಕೆರೆ ಅಭಿವೃದ್ಧಿಗೆ ಸಂಕಲ್ಪ

ಏಕವೀರಿ ಕೆರೆಯು ಸದಲಗಾ ಪಟ್ಟಣದ ಬಹುತೇಕ ಕೊಳವೆ ಬಾವಿ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕಾರಣವಾಗಿದೆ. ಕೆರೆಯು ಅತಿಕ್ರಮಣದಿಂದ ವರ್ಷದಿಂದ ವರ್ಷಕ್ಕೆ ಸೊರಗುತ್ತಿದ್ದರಿಂದ ಅಂತರ್ಜಲ ಮಟ್ಟ ಕುಸಿಯುತ್ತಿದ್ದು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಗೊಳ್ಳಲು ಕಾರಣವಾಗಿದೆ. ಕೆರೆಯ ಜಾಗದಲ್ಲಿ  ವಾಕಿಂಗ್ ಟ್ರ್ಯಾಕ್ ಬೋಟಿಂಗ್ ವ್ಯವಸ್ಥೆ ಕಾರಂಜಿ ಸುತ್ತಲೂ ತಡೆಗೋಡೆ ಎರಡು ಕಡೆಗೆ ಗೇಟ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ ಕೆರೆ ಅಭಿವೃದ್ಧಿ ಮಾಡುವ ಯೋಜನೆ ಏಕವೀರಿ ಕೆರೆ ಫೌಂಡೇಷನ್‍ದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT