ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಕಾಮಗಾರಿ ಮಾಡಿದವರ ವಿರುದ್ಧ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ

Published 11 ಆಗಸ್ಟ್ 2023, 8:25 IST
Last Updated 11 ಆಗಸ್ಟ್ 2023, 8:39 IST
ಅಕ್ಷರ ಗಾತ್ರ

ಬೆಳಗಾವಿ: 'ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿ ಆಗಿರುವ ಕಾಮಗಾರಿಗಳ ಕುರಿತು ತನಿಖೆ ನಡೆಸುತ್ತೇವೆ. ಒಳ್ಳೆಯ ಕೆಲಸ ಮಾಡಿದವರಿಗೆ ನಾವು ತೊಂದರೆ ಕೊಡುವುದಿಲ್ಲ. ಆದರೆ, ಕಳಪೆ ಕಾಮಗಾರಿ ಮಾಡಿದವರ ವಿರುದ್ಧ ಕ್ರಮ ಕೈಗೊಳುತ್ತೇವೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

'ಆಗಸ್ಟ್ 31ರೊಳಗೆ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸಬೇಕು' ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಒತ್ತಾಯಿಸಿದ ಕುರಿತು, ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು.

'ಈಗ ಗುತ್ತಿಗೆದಾರರ ಬಿಲ್ ಬಾಕಿ ಉಳಿದಿರುವುದು ಯಾರ ಅಧಿಕಾರಾವಧಿಯಲ್ಲಿ ನಡೆದಿರುವ ಕಾಮಗಾರಿಗಳದ್ದು' ಎಂದು ಪ್ರಶ್ನಿಸಿದ ಅವರು, 'ಹಿಂದಿನ ಸರ್ಕಾರದವರು ಗುತ್ತಿಗೆದಾರರ ಬಿಲ್ ಬಾಕಿ ಉಳಿಸಿದ್ದಾರೆ. ಅವರು ಎರಡ್ಮೂರು ವರ್ಷ ಬಿಲ್ ಕೊಡದೆ ಏಕೆ ಹೋದರು?' ಎಂದು ಕೇಳಿದರು.

'ನಾವು ಅಧಿಕಾರಕ್ಕೆ ಬಂದು ಇನ್ನೂ ಮೂರು ತಿಂಗಳಾಗಿಲ್ಲ‌. ಶೇ.40 ಕಮಿಷನ್ ದಂಧೆ ಬಗ್ಗೆ ನಾವೇ ಆರೋಪಿಸಿದ್ದೆವು. ಈಗ ಕಾಮಗಾರಿ ಗುಣಮಟ್ಟದ ಬಗ್ಗೆ ತನಿಖೆ ನಡೆಸಬೇಕೇ ಅಥವಾ ಬೇಡವೇ?' ಎಂದ ಸಿ.ಎಂ, 'ಮೂರು ವರ್ಷ ಬಿಲ್ ಕೊಡದಿದ್ದಾಗ ಸುಮ್ಮನಿದ್ದ ಗುತ್ತಿಗೆದಾರರು ಹಾಗೂ ಬಿಜೆಪಿಯವರು ಈಗ ಹೋರಾಟ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಅವರಿಗೆ ನೈತಿಕತೆ ಇದೆಯೇ ಹೇಳಿ' ಎಂದು ಪ್ರಶ್ನಿಸಿದರು.

'ಗುತ್ತಿಗೆದಾರರು ಕೈಗೊಂಡ ಕಾಮಗಾರಿಗಳ ಕುರಿತು ನಾಲ್ಕು ತಂಡಗಳಿಂದ ತನಿಖೆ ನಡೆಸುತ್ತಿದ್ದೇವೆ. ಅವರು ನೀಡಿದ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ' ಎಂದು ಸ್ಪಷ್ಟಪಡಿಸಿದರು.

'ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದ ಕುರಿತು ಮರುತನಿಖೆ ನಡೆಸುವಂತೆ ಕುಟುಂಬಸ್ಥರು ಮನವಿ ಕೊಟ್ಟಿದ್ದಾರೆ. ಈ ಬಗ್ಗೆ ಕಾನೂನು ಇಲಾಖೆಯೊಂದಿಗೆ ಚರ್ಚಿಸುತ್ತೇವೆ' ಎಂದರು.

'ಬಿಜೆಪಿಯವರು ಈ ರಾಜ್ಯ ಹಾಳು ಮಾಡಿದ್ದಾರೆ. ಭ್ರಷ್ಟಾಚಾರ ಮತ್ತು ಧರ್ಮ ರಾಜಕಾರಣ ಮಾಡಿದ್ದಾರೆ' ಎಂದು ದೂರಿದರು.

'ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಿನ್ ಲಾಡೆನ್ ಸರ್ಕಾರ' ಎಂದು ಆರ್.ಅಶೋಕ ಆರೋಪಿಸಿದ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, 'ವಿಧಾನಸಭೆ ಚುನಾವಣೆಯಲ್ಲಿ ನಾವು 135 ಸ್ಥಾನ ಗೆದ್ದಿದ್ದಕ್ಕೆ ಬಿಜೆಪಿಯವರಿಗೆ ಭಯ ಶುರುವಾಗಿದೆ. ಅವರು ಹತಾಶರಾಗಿದ್ದಾರೆ. ಹಾಗಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ' ಎಂದು ತಿವಿದರು.

ಬೆಳಗಾವಿಯಲ್ಲಿ ಪೊಲೀಸರು ಅಂಗವಿಕಲನ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, 'ಹಲ್ಲೆ ನಡೆಸಿರುವುದು ತಪ್ಪು. ಈ ಬಗ್ಗೆ ತನಿಖೆ ನಡೆಸುವಂತೆ ಸೂಚಿಸುತ್ತೇವೆ‌. ತಪ್ಪು ಮಾಡಿದವರ ಮೇಲೆ ಶಿಸ್ತು ಕ್ರಮ ಜರುಗಿಸುತ್ತೇವೆ' ಎಂದರು.

'ಈ ಲೋಕಸಭಾ ಚುನಾವಣೆಯಲ್ಲಿ ನಾವು 20 ಸ್ಥಾನ ಗೆಲ್ಲುತ್ತೇವೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

'ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಕೊಡುತ್ತೇವೆ. ಕಾರ್ಯಕ್ರಮದ ದಿನಾಂಕ ಅಂತಿಮವಾಗಬೇಕಿದೆ' ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದ್ದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT