ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬೆರಕೆ ಹಾಲಿನ ಮಾರಾಟ ಅವ್ಯಾಹತ: ಬೆಮುಲ್ ಅಧ್ಯಕ್ಷ ವಿವೇಕರಾವ ಪಾಟೀಲ ಆರೋಪ

ಖಾಸಗಿ ಕಂಪನಿಗಳ ವಿರುದ್ಧ ಆರೋಪ
Last Updated 22 ಡಿಸೆಂಬರ್ 2018, 13:16 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ ಖಾಸಗಿ ಕಂಪನಿಗಳು ಕಲಬೆರಕೆ ಹಾಲಿನ ಮಾರಾಟದಲ್ಲಿ ತೊಡಗಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಬೆಮುಲ್) ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ವಿವೇಕರಾವ ಪಾಟೀಲ ಒತ್ತಾಯಿಸಿದರು.

‘ವಿಶೇಷವಾಗಿ ಕೃಷ್ಣಾ ನದಿ ತೀರದಲ್ಲಿ ಹಾಲಿನ ಕಲಬೆರಕೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಅರ್ಧ ಲೀಟರ್ ಹಾಲನ್ನು ಕಲಬೆರಕೆ ಮೂಲಕ ಒಂದು ಒಂದು ಲೀಟರ್‌ ಮಾಡಿ ಗುಣಮಟ್ಟ ಹಾಳು ಮಾಡಲಾಗುತ್ತಿದೆ. ಇದನ್ನು ಸೇವಿಸುವವರ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ಹೀಗಾಗಿ, ಗುಣಮಟ್ಟಕ್ಕೆ ಹೆಸರುವಾಸಿಯಾದ ಒಕ್ಕೂಟದ ನಂದಿನಿ ಬ್ರಾಂಡ್‌ನ ಹಾಲನ್ನು ಗ್ರಾಹಕರು ಖರೀದಿಸಬೇಕು’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಉತ್ಕೃಷ್ಟವಾದ ಎಮ್ಮೆ ಹಾಲಿಗೆ ಪ್ರಸ್ತುತ ಬಹಳ ಬೇಡಿಕೆ ಇದೆ. ಹೀಗಾಗಿ, ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ನಂದಿನಿ ಎಮ್ಮೆ ಹಾಲನ್ನು ಮಾರುಕಟ್ಟೆಗೆ ಪರಿಚಯಿಸಿದ್ದೇವೆ. ಗೋವಾ, ಮಹಾರಾಷ್ಟ್ರಕ್ಕೂ ರವಾನಿಸಲಾಗುವುದು. ಒಕ್ಕೂಟಕ್ಕೆ ನಿತ್ಯ 1.85 ಲಕ್ಷ ಹಸುವಿನ ಹಾಲು ಹಾಗೂ 60 ಸಾವಿರ ಲೀಟರ್‌ ಎಮ್ಮೆ ಹಾಲು ಬರುತ್ತಿದೆ. ಜಮ್ಮು ಕಾಶ್ಮೀರಕ್ಕೆ ನಿತ್ಯ ಒಂದು ಲೋಡ್‌ ಹಾಲನ್ನು ರವಾನಿಸಲಾಗುತ್ತಿದೆ’ ಎಂದರು.

ಹಲವು ಅಭಿವೃದ್ಧಿ ಕಾರ್ಯ:

‘ಒಕ್ಕೂಟದಲ್ಲಿ 80ಸಾವಿರ ಲೀ. ಸಾಮರ್ಥ್ಯದ ಫ್ಲೆಕ್ಸಿ ಘಟಕವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ₹ 21 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಿ ಸ್ಥಾಪಿಸಲಾಗಿದೆ. ಒಕ್ಕೂಟಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚುವರಿ ಹಾಲು ಸಂಗ್ರಹವಾಗುವ ಸಾಧ್ಯತೆ ಇರುವುದರಿಂದ, ರಾಯಬಾಗ ಪಟ್ಟಣದಲ್ಲಿ 60ಸಾವಿರ ಲೀ. ಸಾಮರ್ಥ್ಯದ ಸಂಸ್ಕರಣಾ ಘಟಕದ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಇದಕ್ಕೆ ₹ 10 ಕೋಟಿ ವೆಚ್ಚವಾಗಲಿದೆ’ ಎಂದು ಮಾಹಿತಿ ನೀಡಿದರು.

‘ಕಿತ್ತೂರ ಹಾಗೂ ಬೈಲಹೊಂಗಲ ತಾಲ್ಲೂಕುಗಳ ಹಲವು ಹಾಲು ಉತ್ಪಾದಕ ಸಂಘಗಳು ಕೇಂದ್ರ ಡೈರಿಯಿಂದ 60ರಿಂದ 80 ಕಿ.ಮೀ. ದೂರದಲ್ಲಿದ್ದು, ಅವುಗಳಿಂದ ಸಂಗ್ರಹಿಸಿದ ಹಾಲನ್ನು ಸಾಗಣೆ ಮಾಡುವುದಕ್ಕೆ ವೆಚ್ಚ ಹೆಚ್ಚಾಗುತ್ತಿದೆ. ಅಲ್ಲದೇ, ಹಾಲಿನ ಗುಣಮಟ್ಟಕ್ಕೆ ತೊಂದರೆ ಆಗುವುದನ್ನು ತಪ್ಪಿಸಲು ಚನ್ನಮ್ಮನಕಿತ್ತೂರು ತಾಲ್ಲೂಕಿನ ಹುಲಿಕಟ್ಟಿಯಲ್ಲಿ 30ಸಾವಿರ ಲೀಟರ್ ಸಾಮರ್ಥ್ಯದ ಶೀಥಲೀಕರಣ ಕೇಂದ್ರವನ್ನು ₹ 1 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಶೀಥಲೀಕರಣ ಘಟಕಗಳ ನಿರ್ಮಾಣ:

‘ರಾಮದುರ್ಗ ತಾಲ್ಲೂಕಿನಲ್ಲಿ ಹಾಲು ಸಂಗ್ರಹಣೆ ಹೆಚ್ಚಾಗುತ್ತಿದೆ. ಹೆಚ್ಚುವರಿ ಹಾಲು ಸಂಸ್ಕರಿಸಲು ₹ 2 ಕೋಟಿ ವೆಚ್ಚದಲ್ಲಿ ₹ 30ಸಾವಿರ ಲೀಟರ್‌ ಸಾಮರ್ಥ್ಯದ ಶೀಥಲೀಕರಣ ಘಟಕವನ್ನು ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ. ಕೇಂದ್ರ ಡೈರಿಗೆ ಹೆಚ್ಚುವರಿಯಾಗಿ ಬರುವ ಹಾಲಿನ ಗುಣಮಟ್ಟ ಕಾಪಾಡಲು ₹ 3 ಕೋಟಿ ವೆಚ್ಚದಲ್ಲಿ ಶೀಥಲೀಕರಣ ಘಟಕ ನಿರ್ಮಿಸಲಾಗಿದೆ. ಹಾಲು ಶೇಖರಣೆಯ ಶೇಕಡಾವಾರು ಬೆಳವಣಿಗೆಯಲ್ಲಿ ಒಕ್ಕೂಟವು ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ (ಶೇ 26). ಒಕ್ಕೂಟದಿಂದ ಹಮ್ಮಿಕೊಂಡಿರುವ ಗ್ರಾಮೀಣ ಮಾರುಕಟ್ಟೆ ಕಾರ್ಯಕ್ರಮ ಯಶಸ್ವಿಯಾಗಿದ್ದು, ವರ್ಷಕ್ಕೆ ₹ 75 ಲಕ್ಷ ಲೀಟರ್‌ನಷ್ಟು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲಾಗಿದೆ’ ಎಂದರು.

ನಿರ್ದೇಶಕರಾದ ಸೋಮಲಿಂಗಪ್ಪ ಮುಗಳಿ, ಸಂಜಯಗೌಡ ಪಾಟೀಲ, ಬಿ.ಬಿ. ಗಲಗಲಿ, ಈಶ್ವರ ಉಳ್ಳಾಗಡ್ಡಿ, ಸುರೇಶ ಪಾಟೀಲ, ಸಂತೋಷ ಪಾಟೀಲ, ಅಮರ್‌ ನೇರ್ಲಿ, ಎಂ.ಬಿ. ಪಾಟೀಲ, ಬಸವರಾಜ ಪರಣ್ಣವರ, ವ್ಯವಸ್ಥಾಪಕ ನಿರ್ದೇಶಕ ಉಬೇದುಲ್ಲಾ ಖಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT