ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಹಾನಿಯ ಜಂಟಿ ಸಮೀಕ್ಷೆ ಶೀಘ್ರ ಪೂರ್ಣಗೊಳಿಸಿ: ಬಿ.ಸಿ. ಪಾಟೀಲ

ಬೆಳೆಹಾನಿ: ಪ್ರಗತಿ ಪರಿಶೀಲನಾ ಸಭೆ ನಡೆಸಿದ ಕೃಷಿ ಸಚಿವ ಬಿ.ಸಿ.ಪಾಟೀಲ ಸೂಚನೆ
Last Updated 3 ಸೆಪ್ಟೆಂಬರ್ 2022, 16:31 IST
ಅಕ್ಷರ ಗಾತ್ರ

ಬೆಳಗಾವಿ: ‘ಅತಿವೃಷ್ಟಿಯಿಂದ ಇತ್ತೀಚೆಗೆ ಆಗಿರುವ ಬೆಳೆ ಹಾನಿ ಕುರಿತ ಜಂಟಿ ಸಮೀಕ್ಷೆ ತ್ವರಿತವಾಗಿ ಪೂರ್ಣಗೊಳಿಸಬೇಕು. ಬಳಿಕ ಪೋರ್ಟಲ್‌ನಲ್ಲಿ ಮಾಹಿತಿ ಅಪ್‌ಲೋಡ್‌ ಮಾಡಿ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಶನಿವಾರ ನಡೆದ ಕೃಷಿ ಇಲಾಖೆ ಬೆಳಗಾವಿ ವಿಭಾಗೀಯ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಸಿಬ್ಬಂದಿ ಕೊರತೆ ಸೇರಿ ನಾನಾ ಕಾರಣ ಹೇಳಿ ಪರಿಹಾರ ವಿತರಣೆ ಪ್ರಕ್ರಿಯೆ ವಿಳಂಬ ಮಾಡಬಾರದು’ ಎಂದು ತಾಕೀತು ಮಾಡಿದರು.

‘ಕೃಷಿ ಇಲಾಖೆ ಅಭಿವೃದ್ಧಿಪಡಿಸಿದ ಆ್ಯಪ್‌ ಮೂಲಕ ಸ್ವತಃ ರೈತರೇ ಬೆಳೆ ಸಮೀಕ್ಷೆ ಕೈಗೊಳ್ಳಲು ಪ್ರೋತ್ಸಾಹಿ
ಸಬೇಕು. ಬೆಳೆ ವಿಮೆ ಪರಿಹಾರ ಕ್ಲೇಮು ಪ್ರಕರಣ ಇತ್ಯರ್ಥಗೊಳಿಸಬೇಕು. ವಿಮೆ ಕಂಪನಿ ಜೊತೆಗೆ ನಿರಂತರ ಸಂ‍ಪರ್ಕದಲ್ಲಿರಬೇಕು. ಎಲ್ಲ ತಾಂತ್ರಿಕ ಸಮಸ್ಯೆ ಬಗೆಹರಿಸಿ ಪರಿಹಾರ ಒದಗಿಸಬೇಕು’ ಎಂದು ತಿಳಿಸಿದರು.

ರಸಗೊಬ್ಬರ ಸಮರ್ಪಕ ವಿತರಿಸಿ: ‘ಅಗತ್ಯಕ್ಕೆ ತಕ್ಕಷ್ಟು ರಸಗೊಬ್ಬರ ದಾಸ್ತಾನು ಇದೆ. ನಿಗದಿತ ಅವಧಿಯಲ್ಲಿ ಪಿಒಎಸ್‌ ಮೂಲಕ ಅದನ್ನು ರೈತರಿಗೆ ಸರಬರಾಜು ಮಾಡಬೇಕು. ರಸಗೊಬ್ಬರ ಸಮರ್ಪಕವಾಗಿ ಸರಬರಾಜು ಮಾಡದವರ ವಿರುದ್ಧ ಕ್ರಮ ಜರುಗಿಸಬೇಕು. ವಿವಿಧ ಯೋಜನೆಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಶಿವಯೋಗಿ ಕಳಸದ, ‘ಬೆಳೆ ಹಾನಿ ಜಂಟಿ ಸಮೀಕ್ಷೆಗೆ ಆದ್ಯತೆ ನೀಡಬೇಕು. ನಾಲ್ಕೈದು ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಿ ಶೀಘ್ರ ರೈತರಿಗೆ ಪರಿಹಾರ ತಲುಪಿಸಬೇಕು. ಕಂದಾಯ, ಕೃಷಿ, ತೋಟಗಾರಿಕೆ ಸೇರಿದಂತೆ ಎಲ್ಲ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ಕೃಷಿ ಇಲಾಖೆಯ ನಿರ್ದೇಶಕಿ ನಂದಿನಿಕುಮಾರಿ, ‘ರಾಜ್ಯದಾದ್ಯಂತ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಇತ್ತೀಚೆಗೆ ಅತಿವೃಷ್ಟಿಯಿಂದ ರಾಜ್ಯದಲ್ಲಿ 5 ಲಕ್ಷಕ್ಕೂ ಅಧಿಕ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಬೆಳಗಾವಿ ವಿಭಾಗದ ಜಿಲ್ಲೆಗಳಲ್ಲಿ ಜಂಟಿ ಸಮೀಕ್ಷೆ ಬಹುತೇಕ ಪೂರ್ಣಗೊಂಡಿದೆ’ ಎಂದು ವಿವರಿಸಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್‌.ವಿ.ದರ್ಶನ್‌, ಕೃಷಿ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆಯಿಂದಾಗಿ ಸಮೀಕ್ಷೆ ಮತ್ತು ಪರಿಹಾರ ವಿತರಣೆ ಪ್ರಕ್ರಿಯೆ ವಿಳಂಬವಾಗುತ್ತಿದೆ. ಹಾಗಾಗಿ ತಳಹಂತದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ನೇಮಕಾತಿ ಮಾಡಬೇಕು ಎಂದು ಮನವಿ ಮಾಡಿದರು

ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಎಂ.ವಿ.ವೆಂಕಟೇಶ, ನಿರ್ದೇಶಕ ಬಿ.ವೈ.ಶ್ರೀನಿವಾಸ, ಕೃಷಿ ಇಲಾಖೆ ಹೆಚ್ಚುವರಿ ನಿರ್ದೇಶಕರಾದ ಎಂ. ಎನ್ ದಿವಾಕರ, ಡಾ. ವಿ.ಜಿ.ಪಾಟೀಲ, ಟಿ.ಜಿ.ಬಾಲರೆಡ್ಡಿ, ಜಿಲ್ಲಾ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಉಪಸ್ಥಿತರಿದ್ದರು.

ಪ್ರಗತಿ ಸಾಧಿಸವದರಿಗೆ ನೋಟಿಸ್‌ ಕೊಡಿ

‘ರಸಗೊಬ್ಬರ ಗುಣ ನಿಯಂತ್ರಣ, ಬೆಳೆಹಾನಿ ಸಮೀಕ್ಷೆ, ಪರಿಹಾರ ವಿತರಣೆ ಸೇರಿದಂತೆ ಬಹುತೇಕ ಕೆಲಸಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದ ಜಿಲ್ಲೆಯ ಅಧಿಕಾರಿಗಳಿಗೆ ನೋಟಿಸ್ ನೀಡಬೇಕು’ ಎಂದು ಬಿ.ಸಿ.ಪಾಟೀಲ ಸೂಚಿಸಿದರು.

‘ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಕುರಿತು ಅನೇಕ ಮಕ್ಕಳಿಗೆ ಮಾಹಿತಿಯೇ ಇಲ್ಲ. ಡಿಡಿಪಿಐಗಳ ಮೂಲಕ ಎಸ್ಎಸ್ ಪೋರ್ಟಲ್‌ನಲ್ಲಿ ಮಕ್ಕಳು ನೋಂದಣಿ ಮಾಡಿಕೊಳ್ಳಲು ಸೂಚನೆ ನೀಡಬೇಕು’ ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT