ಗುರುವಾರ , ಮೇ 6, 2021
22 °C
ಮಂಗಲಾ ಅಂಗಡಿ, ಸತೀಶ ಜಾರಕಿಹೊಳಿ ಭವಿಷ್ಯ ನಿರ್ಧಾರ ಇಂದು

ಉಪ ಚುನಾವಣೆ: ಮತದಾನಕ್ಕೆ ಕ್ಷಣಗಣನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ.

ಏ.17 (ಶನಿವಾರ) ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. 10 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪ್ರಮುಖ  ಅಭ್ಯರ್ಥಿಗಳಾದ ಬಿಜೆಪಿಯ ಮಂಗಲಾ ಸುರೇಶ ಅಂಗಡಿ ಮತ್ತು ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ ಅವರ ಭವಿಷ್ಯ ಬರೆಯಲು ಮತದಾರರು ಸಜ್ಜಾಗಿದ್ದಾರೆ. ಇವರೊಂದಿಗೆ ವಿವೇಕಾನಂದ ಬಾಬು ಘಂಟಿ (ಕರ್ನಾಟಕ ರಾಷ್ಟ್ರ ಸಮಿತಿ), ವೆಂಕಟೇಶ್ವರ ಸ್ವಾಮೀಜಿ (ಹಿಂದೂಸ್ತಾನ ಜನತಾ ಪಕ್ಷ), ಸುರೇಶ ಬಸಪ್ಪ ಮರಲಿಂಗಣ್ಣವರ (ಕರ್ನಾಟಕ ಕಾರ್ಮಿಕರ ಪಕ್ಷ) ಶುಭಂ ಶೆಳಕೆ, ಅಪ್ಪಾಸಾಹೇಬ ಕುರಣಿ, ಗೌತಮ ಕಾಂಬಳೆ, ನಾಗಪ್ಪ ಕಳಸನ್ನವರ ಹಾಗೂ ಶ್ರೀಕಾಂತ ಪಡಸಲಗಿ (ಎಲ್ಲರೂ ಪಕ್ಷೇತರರು) ಕಣದಲ್ಲಿದ್ದಾರೆ.

ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಆಯಾ ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಮಸ್ಟರಿಂಗ್ ಕೇಂದ್ರಗಳಿಂದ ಇ.ವಿ.ಎಂ., ವಿವಿ ಪ್ಯಾಟ್ ಹಾಗೂ ಇತರ ಚುನಾವಣಾ ಸಾಮಗ್ರಿಗಳೊಂದಿಗೆ ಮತಗಟ್ಟೆಗಳಿಗೆ ಶುಕ್ರವಾರ ಮಧ್ಯಾಹ್ನ ಸಾರಿಗೆ ಸಂಸ್ಥೆಯ ಬಸ್‌ಗಳ ಮೂಲಕ ತೆರಳಿದರು. ಇದಕ್ಕೂ ಮುನ್ನ ಅವರಿಗೆ ಯಂತ್ರಗಳ ಬಳಕೆಯ ಕುರಿತು ತರಬೇತಿ ನೀಡಲಾಯಿತು. ವ್ಯಾಪ್ತಿಯ ತಾಲ್ಲೂಕು ಕೇಂದ್ರಗಳಲ್ಲಿ ಈ ಪ್ರಕ್ರಿಯೆ ನಡೆಯಿತು.

ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, 9,11,033 ಪುರುಷರು ಹಾಗೂ 9,02,476 ಮಹಿಳೆಯರು, 58 ಮಂದಿ ಇತರರು ಸೇರಿ ಒಟ್ಟು 18,13,567 ಮತದಾರರಿದ್ದಾರೆ. 8,047 ಸೇವಾ ಮತದಾರರಿದ್ದಾರೆ. 25,327 ಯುವ ಮತದಾರರಿದ್ದಾರೆ. 2,566 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ 502 ಉಪ ಮತಗಟ್ಟೆಗಳಾಗಿವೆ. ರ‍್ಯಾಂಪ್, ಗಾಲಿಕುರ್ಚಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಒಟ್ಟು 12,440 ಅಂಗವಿಕಲ ಮತದಾರರಿದ್ದು, ಅವರ ಸಹಾಯಕ್ಕಾಗಿ 1,497 ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 16 ‘ಸಖಿ’ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ.

ಸಿಬ್ಬಂದಿ ನಿಯೋಜನೆ:

200 ಮಂದಿ ಸೂಕ್ಷ್ಮ ವೀಕ್ಷಕರನ್ನು ನೇಮಿಸಲಾಗಿದೆ. ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ಒಟ್ಟು 72 ಸಿಐಎಸ್‌ಎಫ್‌ ಸಿಬ್ಬಂದಿ, 132 ಎ.ಎಸ್.ಐ. ಸಿಬ್ಬಂದಿ ನಿಯೋಜಿಸಲಾಗಿದೆ. ಇದಲ್ಲದೇ, ಒಟ್ಟು 977 ಹೆಡ್ ಕಾನ್‌ಸ್ಟೆಬಲ್‌, 1,406 ಪೊಲೀಸ್ ಕಾನ್‌ಸ್ಟೆಬಲ್‌ಗಳು ಮತ್ತು 905 ಹೋಂ ಗಾರ್ಡ್‌ಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.

‘ಮತ ಚಲಾಯಿಸಲು ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಒಟ್ಟು 5,067 ವಿವಿಪ್ಯಾಟ್‌ಗಳನ್ನು ಪೂರೈಸಲಾಗಿದೆ. ಕ್ಷೇತ್ರದಲ್ಲಿ ಒಟ್ಟು 25,327 ಭಾವಚಿತ್ರವುಳ್ಳ ಗುರುತಿನ ಚೀಟಿಗಳನ್ನು ಹೊಸದಾಗಿ ವಿತರಿಸಲಾಗಿದೆ. ಮತದಾರರ ಮಾಹಿತಿ ಸ್ಲೀಪ್‌ಗಳನ್ನು ಪೂರೈಸಲಾಗಿದೆ. ಕೋವಿಡ್–19 ನಿಯಮಾವಳಿಯಂತೆ ಎಲ್ಲ ಮತಗಟ್ಟೆಗಳಲ್ಲಿ ಅಂತರ ಕಾಯ್ದುಕೊಳ್ಳುವಂತೆ ಎಲ್ಲ ಎ.ಆರ್.ಒ.ಗಳಿಗೆ ನಿರ್ದೇಶನ ನೀಡಲಾಗಿದೆ. ಚುನಾವಣಾ ಸಿಬ್ಬಂದಿಗೆ ಥರ್ಮಲ್ ಸ್ಸ್ಯಾನರ್, ಗ್ಲೌಸ್, ಮಾಸ್ಕ್, ಸಾನಿಟೈಜರ್‌ಗಳನ್ನು ಪೂರೈಸಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಎಪಿಕ್ ಕಾರ್ಡ್ ಇಲ್ಲದವರಿಗೆ ಪರ್ಯಾಯ ವ್ಯವಸ್ಥೆ

*ಎಪಿಕ್ ಕಾರ್ಡ್ ಹೊಂದಿಲ್ಲದ ಮತದಾರರು ಮತ ಚಲಾಯಿಸಲು ಪಾಸ್‌ಪೋರ್ಟ್‌ (ರಹದಾರಿ ಪರವಾನಗಿ)

* ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್)

* ಕೇಂದ್ರ/ರಾಜ್ಯ ಸರ್ಕಾರ ಅಥವಾ ಸಾರ್ವಜನಿಕ ವಲಯದ ಸೇವಾ ಸಂಸ್ಥೆಗಳು, ಸಾರ್ವಜನಿಕ ಸೀಮಿತ ಸಂಸ್ಥೆಗಳು ಉದ್ಯೋಗಿಗಳಿಗೆ ನೀಡಿರುವ ಭಾವಚಿತ್ರವುಳ್ಳ ಸೇವಾ ಗುರುತಿನ ಚೀಟಿಗಳು

* ಬ್ಯಾಂಕ್ ಅಥವಾ ಅಂಚೆ ಕಚೇರಿಯ ಭಾವಚಿತ್ರದೊಂದಿಗಿನ ಪಾಸ್‌ಬುಕ್‌ಗಳು

* ಪಾನ್‌ ಕಾರ್ಡ್‌

* ಆಧಾರ್‌ ಕಾರ್ಡ್‌

* ನರೇಗಾ ಉದ್ಯೋಗ ಚೀಟಿ

* ಚುನಾವಣಾ ಆಯೋಗವು ನೀಡಿರುವ ಅಧೀಕೃತ ವೋಟರ್ ಸ್ಲೀಪ್‌

***

ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ

- ಡಾ ಕೆ. ಹರೀಶ್ ಕುಮಾರ್, ಜಿಲ್ಲಾ ಚುನಾವಣಾಧಿಕಾರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.