ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಮ್ಮಾಜೇಶ್ವರಿ’ಯಿಂದ ಶೇ 95ರಷ್ಟು ನೀರಾವರಿ

ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Published 7 ಮಾರ್ಚ್ 2024, 6:32 IST
Last Updated 7 ಮಾರ್ಚ್ 2024, 6:32 IST
ಅಕ್ಷರ ಗಾತ್ರ

ಕೊಟ್ಟಲಗಿ (ಬೆಳಗಾವಿ ಜಿಲ್ಲೆ): ‘ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯಿಂದ ಅಥಣಿ ತಾಲ್ಲೂಕಿನ ಶೇ 95ರಷ್ಟು ಪ್ರದೇಶ ನೀರಾವರಿಯಾಗಲಿದೆ. ಇಷ್ಟುದೊಡ್ಡ ಯೋಜನೆ‌ ನಿಮಗೆ ಕೊಟ್ಟಿದ್ದೇನೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿಯಿಂದ ನಮ್ಮ ಅಭ್ಯರ್ಥಿ ಯಾರೇ ಆದರೂ, ಒಂದು ಲಕ್ಷ ಮತಗಳ ಮುನ್ನಡೆ ಕೊಡಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ಅಥಣಿ ತಾಲ್ಲೂಕಿನ ಕೊಟ್ಟಲಗಿಯಲ್ಲಿ ₹1,486 ಕೋಟಿ ವೆಚ್ಚದ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ಬುಧವಾರ ಚಾಲನೆ‌ ನೀಡಿ ಅವರು ಮಾತನಾಡಿದರು.

‘ಈ ಯೋಜನೆ ಪೂರ್ಣಗೊಂಡರೆ ಅಥಣಿ‌ ತಾಲ್ಲೂಕಿನ 50 ಸಾವಿರ ಎಕರೆ ನೀರಾವರಿಯಾಗಲಿದೆ. ಕೃಷ್ಣಾ ನದಿಯಿಂದ ಮೂರು ಟಿಎಂಸಿ ಅಡಿ‌ ನೀರನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಹಲವು ಗ್ರಾಮಗಳ ಕೆರೆಗಳಿಗೆ ನೀರು‌ ತುಂಬಿಸಿ ಅಂತರ್ಜಲ ಹೆಚ್ಚಲು ಅನುಕೂಲವಾಗಲಿದೆ’ ಎಂದರು.

‘ಬಿಜೆಪಿ ಸರ್ಕಾರ 600 ಭರವಸೆ ನೀಡಿ 60 ಈಡೇರಿಸಿದೆ. ನಾನು‌ ಹಿಂದೆ 160 ಭರವಸೆ ನೀಡಿದ್ದೆ. ಅದರಲ್ಲಿ 158 ಬೇಡಿಕೆ ಈಡೇರಿಸಿದ್ದೇನೆ. ಯಾರನ್ನು ಅಯ್ಕೆ ಮಾಡಬೇಕು ಎಂದು‌ ನೀವು ನಿರ್ಧರಿಸಿ’ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ‌ಹೆಬ್ಬಾಳಕರ, ‘ಸಿದ್ದರಾಮಯ್ಯ ಅವರೇ ರಾಜ್ಯದ ಎಲ್ಲ ಹೆಣ್ಣು ಮಕ್ಕಳನ್ನು‌ ಮನೆಯ ಯಜಮಾನಿ‌ ಮಾಡಿದರು. ಯುಗಾದಿ, ಪಂಚಮಿ, ಜಾತ್ರೆಗೆ ರೇಷ್ಮೆ ಸೀರೆ ಖರೀದಿಸುವ ಸಾಮರ್ಥ್ಯ ನೀಡಿದರು. 1.20 ಕೋಟಿ ಮಹಿಳೆಯರಿಗೆ ಪ್ರತಿ‌ ತಿಂಗಳು ₹2 ಸಾವಿರ ನೀಡಿದರು. ಮಹಿಳಾ ಸಬಲೀಕರಣಕ್ಕೆ ಇದು ರಹದಾರಿ’ ಎಂದು ತಿಳಿಸಿದರು.

‘ನಾನು ಕೂಡ ರಾಮನ ಭಕ್ತೆ. ಅಯೋಧ್ಯೆಯಲ್ಲಿ ₹5 ಸಾವಿರ‌ ಕೋಟಿ‌ ವ್ಯಯಿಸಿ, ದೇವಸ್ಥಾನ ಕಟ್ಟಿದರು. ನಮಗೂ ಸಂತೋಷ. ಆದರೆ ಸಿದ್ದರಾಮಯ್ಯ ಅವರು‌ ತಿಂಗಳಿಗೆ ₹5 ಸಾವಿರ ಕೋಟಿ‌ ನೀಡಿ ಕರ್ನಾಟಕವನ್ನು ರಾಮರಾಜ್ಯ ಮಾಡಲು‌ ಮುಂದಾದರು’ ಎಂದರು.

ಸಚಿವರಾದ ಎಂ.ಬಿ.ಪಾಟೀಲ, ಸತೀಶ ಜಾರಕಿಹೊಳಿ, ಆರ್.ಬಿ.ತಿಮ್ಮಾಪುರ, ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಾಸಕ ಮಹೇಂದ್ರ ತಮ್ಮಣ್ಣವರ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ ಸಿಂಗ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಬೆಳಗಾವಿ ಉತ್ತರ ವಲಯ ಪೊಲೀಸ್‌ ಮಹಾನಿರೀಕ್ಷಕ ವಿಕಾಶಕುಮಾರ ವಿಕಾಶ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಕೊಟ್ಟಲಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲವ್ವ ತೇಲಿ ಪಾಲ್ಗೊಂಡರು.

ನುಡಿದಂತೆ ನಡೆದ ಸರ್ಕಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

‘ನಮ್ಮದು ನುಡಿದಂತೆ ನಡೆದ ಸರ್ಕಾರ. ಬಸವಣ್ಣನ ನಾಡಲ್ಲಿ ನಿಂತು ಬಸವಣ್ಣ ಬಸವಾದಿ ಶರಣರ ತತ್ವ ಪಾಲಿಸಿದ್ದೇವೆ‌. ಐದು ಗ್ಯಾರಂಟಿಗಳ ಮೂಲಕ ಸಾಮಾಜಿಕ‌ ನ್ಯಾಯ ಕೊಟ್ಟಿದ್ದೇವೆ’ ಎಂದರು. ‘ಶಾಸಕ‌ ಲಕ್ಷ್ಮಣ ಸವದಿ ಅವರು ಮಂತ್ರಿ ಸ್ಥಾನ ಬೇಡ; ಏತ ನೀರಾವರಿ ಯೋಜನೆ ಕೊಡಿ ಎಂದು ಕೇಳಿದ್ದರು. ಅವರ ಪ್ರಯತ್ನಕ್ಕೆ ಈಗ ಫಲ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಅವರಿಗೆ ಸಚಿವ ಸ್ಥಾನವೂ ಸಿಗಲಿದೆ. ಆದರೆ ಬೆಳಗಾವಿಯ ಎರಡೂ ಲೋಕಸಭಾ ಕ್ಣೇತ್ರಗಳಲ್ಲಿ ನೀವು ನಮ್ಮ ಅಭ್ಯರ್ಥಿ ಗೆಲ್ಲಿಸಬೇಕು’ ಎಂದರು. ‘ತೆನೆ ಹೊಲದಲ್ಲಿದ್ದರೆ ಚೆಂದ. ಕಮಲ‌ ಕೆರೆಯಲ್ಲಿದ್ದರೆ ಚೆಂದ. ದಾನ ಮಾಡುವ‌ ಕೈ ಅಧಿಕಾರದಲ್ಲಿದ್ದರೆ‌ ಚೆಂದ. ಹಾಗಾಗಿ ಕಾಂಗ್ರೆಸ್‌ಗೆ ಜನ ಅಧಿಕಾರ ಕೊಟ್ಟಿದ್ದಾರೆ’ ಎಂದ ಅವರು ‘ತೆನೆ ಬಿಸಾಕಿದ ಕುಮಾರಸ್ವಾಮಿ ಕಮಲ‌ ಹಿಡಿದುಕೊಂಡು ಹೊರಟಿದ್ದಾರೆ. ತಮ್ಮ ಶಾಸಕರು ಪಕ್ಷ ಬಿಟ್ಟು ‌ಹೋಗುತ್ತಾರೆ ಎಂದು ಬಿಜೆಪಿ‌ ತಬ್ಬಿಕೊಳ್ಳುತ್ತಿದ್ದಾರೆ. ಈ ತಬ್ಬಿಕೊಳ್ಳುವ ಆಟ ಚುನಾವಣೆ ಬಳಿಕ ಗೊತ್ತಾಗಲಿದೆ’ ಎಂದು ಹೇಳಿದರು.

ನಿಮ್ಮ ಋಣ ಮರೆಯುವುದಿಲ್ಲ’

‘ಅಮ್ಮಾಜೇಶ್ವರಿ ನೀರಾವರಿ ಯೋಜನೆ ಜಾರಿಗೊಳಿಸಿದ್ದರಿಂದ ಈ ಭಾಗದ ಜನ ನಿಮ್ಮ (ಸರ್ಕಾರ) ಋಣ ಮರೆಯುವುದಿಲ್ಲ’ ಎಂದು ಲಕ್ಷ್ಮಣ ಸವದಿ ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ನಮ್ಮ ರೈತರ ಮಕ್ಕಳಿಗೆ ಒಂದು ಕೃಷಿ ಕಾಲೇಜು ಮಂಜೂರು ಮಾಡಬೇಕು’ ಎಂದು ಕೋರಿದರು. ‘ಗಡಿಭಾಗದ 900 ಹಳ್ಳಿಗಳಲ್ಲಿ‌ ಕುಡಿಯುವ ನೀರಿನ ಸಮಸ್ಯೆ ಇದೆ. ಆಲಮಟ್ಟಿ ಅಣೆಕಟ್ಟೆಯಿಂದ 38 ಕಿ.ಮೀ ಪೈಪ್‌ಲೈನ್‌ ಮಾಡಿದರೆ ಎಲ್ಲರಿಗೂ ನೀರು‌ ಸಿಗಲಿದೆ. ಇದಕ್ಕಾಗಿ ₹400 ಕೋಟಿ ಸಾಕು’ ಎಂದರು.

ಮಹಾರಾಷ್ಟ್ರಕ್ಕೂ ನೀರು ಪೂರೈಸಿ ‘

ನಮ್ಮನ್ನು ಕರ್ನಾಟಕಕ್ಕೆ ಸೇರಿಸಬೇಕು. ಶಿಕ್ಷಣ ಉದ್ಯೋಗದಲ್ಲಿ ಮಹಾರಾಷ್ಟ್ರದ ಗಡಿ ಕನ್ನಡಿಗರಿಗೆ ಮೀಸಲಾತಿ ನೀಡಬೇಕು’ ಎಂದು‌ ಕೋರಿ ಜತ್ತ ‌ಹಾಗೂ ಅಕ್ಕಲಕೋಟೆ‌ ತಾಲ್ಲೂಕಿನ ಕೆಲವು ಕನ್ನಡಿಗರು ಮುಖ್ಯಮಂತ್ರಿ ‌ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಹಾರಾಷ್ಟ್ರ ಶಾಸಕರಾದ ವಿಶ್ವಜೀತ ಕದಮ್ ಹಾಗೂ ವಿಕ್ರಮಸಿಂಗ್ ಸಾವಂತ್ ಅವರು ‘ಅಮ್ಮಾಜೇಶ್ವರಿ ‌ನೀರಾವರಿ ಮೂಲಕ‌ ಮಹಾರಾಷ್ಟ್ರದ ಗಡಿಭಾಗದ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಬೇಕು. ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಹೆಚ್ಚಿನ ನೀರು ಹರಿಸಲು ನಾವು ಸಹಕಾರ‌ ನೀಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT