ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ: ಜಿಲ್ಲೆಗೆ 200 ಹೊಸ ಅಂಗನವಾಡಿ ಕಟ್ಟಡ

ಸೌಕರ್ಯ ವಿತರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ
Published 28 ಜೂನ್ 2024, 15:40 IST
Last Updated 28 ಜೂನ್ 2024, 15:40 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ ಈ ವರ್ಷ 200 ಅಂಗನವಾಡಿ ಕಟ್ಟಡಗಳು ನಿರ್ಮಾಣವಾಗಲಿವೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಟ್ಟಡ ಮಂಜೂರಾಗಿರುವುದು ಇದೇ ಮೊದಲು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ನಗರದಲ್ಲಿ ಶುಕ್ರವಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್, ಸೀರೆ, ಔಷಧ ಕಿಟ್, ತೂಕದ ಯಂತ್ರಗಳನ್ನು ವಿತರಿಸಿ ಅವರು ಮಾತನಾಡಿದರು.

‘ಇಡೀ ದೇಶವೇ ತಿರುಗಿ ನೋಡುವಂತೆ ಅಂಗನವಾಡಿಗಳಲ್ಲಿ ಕೆಲಸ ನಡೆಯುತ್ತಿದೆ. ನೀವೆಲ್ಲ ಯಶೋದೆ ಇದ್ದಂತೆ. ದೇವಕಿ ಶ್ರೀಕೃಷ್ಣನನ್ನು ಹೆತ್ತರೂ ಯಶೋದೆ ಅತ್ಯಂತ ಮುತುವರ್ಜಿಯಿಂದ ಸಲಹಿದಳು. ಅಂತೆಯೇ ನೀವು ಮಕ್ಕಳನ್ನು ಬೆಳೆಸುತ್ತೀರಿ’ ಎಂದರು.

‘ನಿಮ್ಮಲ್ಲಿ ಇನ್ನಷ್ಟು ಉತ್ಸಾಹ ತುಂಬಲು, ಶಕ್ತಿ ತುಂಬಲು ತಲಾ ₹13 ಸಾವಿರ ಮೌಲ್ಯದ ಆಧುನಿಕ ಮೊಬೈಲ್ ಫೋನ್ ನೀಡಲಾಗುತ್ತಿದೆ. ರಾಜ್ಯದಾದ್ಯಂತ ಏಕರೂಪದ ಸಮವಸ್ತ್ರ ವಿತರಿಸಲಾಗುತ್ತಿದೆ. ಔಷಧ ಕಿಟ್, ತೂಕದ ಯಂತ್ರ ನೀಡಲಾಗುತ್ತಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಈ ಕಾರ್ಯಕ್ರಮದೊಂದಿಗೆ ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಇಲಾಖೆಯಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಬೇಕೆನ್ನುವ ಕನಸನ್ನು ಹೊತ್ತು ನಾನು ಇಲಾಖೆಯ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ನೀವು ಸರಿಯಾಗಿ ಕೆಲಸ ಮಾಡದಿದ್ದರೆ ನನಗೆ ಕೆಟ್ಟ ಹೆಸರು ಬರುತ್ತದೆ. ನೀವೆಲ್ಲ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು. ನೀವೇ ನನಗೆ ಶಕ್ತಿ’ ಎಂದು ಸಚಿವೆ ಹೇಳಿದರು.

‘ವೈರಿಗಳ ಕಡೆಯ ಅಸ್ತ್ರ ಆರೋಪ ಮಾಡುವುದು. ಅದಕ್ಕೆಲ್ಲ ಉತ್ತರ ಕೊಡುತ್ತ ಹೋದರೆ ಕೆಲಸ ಮಾಡಲು ಆಗುವುದಿಲ್ಲ. ನಾವು ಶ್ರದ್ಧೆ, ಭಕ್ತಿಯಿಂದ ಕೆಲಸ ಮಾಡೋಣ. ಇಲಾಖೆಯನ್ನು ಮಾದರಿಯನ್ನಾಗಿ ಮಾಡಲು ನಾನು ಕಂಕಣ ಬದ್ಧವಾಗಿದ್ದೇನೆ’ ಎಂದರು.

ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ದೊಡ್ಡವ್ವ ಪೂಜೇರಿ ಮಾತನಾಡಿ, ‘ಉತ್ತಮ ಮೊಬೈಲ್ ಕೊಡಿಸುವಂತೆ 10 ವರ್ಷಗಳಿಂದ ಹೋರಾಟ ಮಾಡುತ್ತಿದ್ದೆವು. ಈಗ ಸಚಿವೆ ಈಡೇರಿಸಿದ್ದಾರೆ. ನಮಗೂ ಗೌರವ ಸಿಗುವಂತೆ ಮಾಡಿದ್ದಾರೆ’ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಮರಡ್ಡಿ ಪಾಟೀಲ, ಸಿಡಿಪಿಒ ಸುಮಿತ್ರಾ, ಇಲಾಖೆಯ ಉಪನಿರ್ದೇಶಕ ನಾಗರಾಜ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಬಸವರಾಜ ಅಡವಿಮಠ ಮಾತನಾಡಿದರು.

ಬೆಳಗಾವಿಯಲ್ಲಿ ಶುಕ್ರವಾರ ನಡೆದ ವಿವಿಧ ಸೌಕರ್ಯ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡ ಅಂಗನವಾಡಿ ಕಾರ್ಯರ್ತೆಯರು
ಬೆಳಗಾವಿಯಲ್ಲಿ ಶುಕ್ರವಾರ ನಡೆದ ವಿವಿಧ ಸೌಕರ್ಯ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡ ಅಂಗನವಾಡಿ ಕಾರ್ಯರ್ತೆಯರು

ಚುನಾವಣೆ ವಿಷಯ ಪ್ರಸ್ತಾಪ

‘ನಾನು ಸೋಲು– ಗೆಲುವನ್ನು ಸಮಾನವಾಗಿ ಸ್ವೀಕರಿಸುತ್ತೇನೆ. ಆದರೆ ಒಬ್ಬ ತಾಯಿಯಾಗಿ ಮಗನ ಸೋಲಾದಾಗ ಸಂಕಟವಾಯಿತು. ಇದು ಎಲ್ಲ ತಾಯಂದಿರಿಗೆ ಸಹಜವಾದ ನೋವು. ಮಗನಿಗೆ ಇನ್ನೂ ಸಾಕಷ್ಟು ಭವಿಷ್ಯವಿದೆ. ಬಿದ್ದವನು ಎದ್ದು ನಿಲ್ಲುತ್ತಾನೆ’ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಸರ್ಕಾರಿ ಕಾರ್ಯಕ್ರಮದಲ್ಲಿ ಚುನಾವಣೆಯ ವಿಷಯ ಎತ್ತಿದರು.

‘ಚುನಾವಣೆ ವೇಳೆ ನಾನು ಅಂಗನವಾಡಿ ಕಾರ್ಯಕರ್ತೆಯರಿಂದ ತಲಾ ₹1ಲಕ್ಷ ಸಂಗ್ರಹಿಸಿದ್ದೇನೆ ಎಂದು ನಿಮ್ಮ ಶಾಪದಿಂದಲೇ ನನ್ನ ಮಗನಿಗೆ ಸೋಲಾಗಿದೆ ಎಂದೂ ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ನಾನು ಯಾರಿಂದಾದರೂ ಹಣ ಪಡೆದಿದ್ದೇನಾ?’ ಎಂದು ಸಚಿವರು ಪ್ರಶ್ನಿಸಿದರು. ಈ ಮಾತಿಗೆ ‘ನಮ್ಮ ಮುಂದೆ ಬಂದು ಅವರು ಹೇಳಲಿ. ತಕ್ಕ ಉತ್ತರ ಕೊಡುತ್ತೇವೆ’ ಎಂದು ಕೆಲ ಕಾರ್ಯಕರ್ತೆಯರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT