ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ| ತಹಶೀಲ್ದಾರ್‌ ಹುದ್ದೆಗೇರಿದ ಬಡತನ ಕುಟುಂಬದ ಅನಿಲ

Last Updated 24 ಡಿಸೆಂಬರ್ 2019, 12:22 IST
ಅಕ್ಷರ ಗಾತ್ರ

ಬೆಳಗಾವಿ: ಮನೆಯಲ್ಲಿ ತುಂಬು ಬಡತನ... ತಂದೆ– ತಾಯಿ ಅನಕ್ಷರಸ್ಥರು... ಬಡಿಗತನದಿಂದ ಬದುಕು ನಿರ್ವಹಿಸುವಲ್ಲಿ ಕಷ್ಟಪಡುತ್ತಿದ್ದ ಕುಟುಂಬದಿಂದ ಬಂದ ಅನಿಲ ಕಲ್ಲಪ್ಪ ಬಡಿಗೇರ ಅವರು ತಹಶೀಲ್ದಾರ್‌ ಗ್ರೇಡ್‌– 2ಹುದ್ದೆಗೆ ಆಯ್ಕೆಯಾಗಿದ್ದಾರೆ. ಪ್ರಾಥಮಿಕ ಶಾಲೆಯಿಂದ ಹಿಡಿದು ಕೆಪಿಎಸ್ಸಿ ಪರೀಕ್ಷೆಯವರೆಗೆ ಕನ್ನಡ ಮಾಧ್ಯಮದಲ್ಲಿಯೇ ಬರೆದಿರುವುದು ಅನಿಲ ಅವರ ಹೆಗ್ಗಳಿಕೆ.

ಇಲ್ಲಿನ ಬಸವನಕುಡಚಿಯ ಅನಿಲ ಅವರ ತಂದೆ ಕಲ್ಲಪ್ಪ ಅವರು ಬಡಿಗತನ ಮಾಡುತ್ತಿದ್ದಾರೆ. ತಾಯಿ ಗೃಹಿಣಿ. ಇವರಿಬ್ಬರೂ ಅನಕ್ಷರಸ್ಥರು. ಅನಿಲ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಗ್ರಾಮದಲ್ಲಿಯೇ ಪಡೆದರು. ಪ್ರೌಢಶಾಲೆಯ ಶಿಕ್ಷಣವನ್ನು ಬೆಳಗಾವಿಯ ಕೆ.ಎಲ್‌.ಇ ಸಂಸ್ಥೆಯ ಜಿ.ಎ. ಹೈಸ್ಕೂಲ್‌ನಲ್ಲಿ ಪೂರೈಸಿದರು.

ಮನೆಯ ಆರ್ಥಿಕ ಸ್ಥಿತಿ ತೀರ ನಾಜೂಕಾಗಿದ್ದರಿಂದ ಅನಿಲ ಉದ್ಯೋಗ ಮಾಡಲೇಬೇಕಾದ ಅನಿವಾರ್ಯತೆ ಇತ್ತು. ಹೀಗಾಗಿ ಡಿ.ಇಡ್‌ ಮಾಡಿ 2010ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕಗೊಂಡರು. ಬೆಳಗಾವಿಯ ಆಂಜನೇಯ ನಗರದ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.

ಓದಿನ ಹಸಿವಿನ ಕಾರಣ ಬಿ.ಎ. ಪದವಿಯನ್ನು (ಸಮಾಜಶಾಸ್ತ್ರ, ಇತಿಹಾಸ, ಕನ್ನಡ) ದೂರಶಿಕ್ಷಣದ ಮೂಲಕ ಪಡೆದರು. 2013ರಲ್ಲಿ ಪದವಿ ಗಿಟ್ಟಿಸಿಕೊಂಡರು. ಮೊದಲ ಬಾರಿಗೆ 2014ರಲ್ಲಿ ಕೆಪಿಎಸ್ಸಿ ಬರೆದರು. ಪ್ರಾರಂಭಿಕ ಜ್ಞಾನ ಪಡೆಯಲು ಬೆಂಗಳೂರಿನಲ್ಲಿ ಕೋಚಿಂಗ್‌ ಕೂಡ ಪಡೆದುಕೊಂಡರು. ಪ್ರಿಲಿಮಿನರಿ ಪರೀಕ್ಷೆ ಪಾಸ್‌ ಮಾಡಿದರು. ಮುಖ್ಯ ಪರೀಕ್ಷೆ ಪಾಸ್‌ ಮಾಡಲು ಸಾಧ್ಯವಾಗಲಿಲ್ಲ.

ಇದರಿಂದ ಧೃತಿಗೆಡದೆ ಅವರು, ತಮ್ಮ ಪ್ರಯತ್ನವನ್ನು ಕೈಬಿಡಲಿಲ್ಲ. ಸತತ ಪರಿಶ್ರಮ ಹಾಕಿ, ಅಧ್ಯಯನ ಮುಂದುವರಿಸಿದರು. 2015ರಲ್ಲಿ ಕೆಪಿಎಸ್ಸಿ ಪಾಸ್‌ ಮಾಡಿದರು. ತಹಶೀಲ್ದಾರ್‌ ಗ್ರೇಡ್‌–2 ಹುದ್ದೆಗೆ ಆಯ್ಕೆಯಾಗಿದ್ದಾರೆ. ಪರೀಕ್ಷೆ ಫಲಿತಾಂಶ ತಮಗೆ ಖುಷಿ ತಂದುಕೊಟ್ಟಿದ್ದು, ಹುದ್ದೆಗೆ ಸೇರಿಕೊಳ್ಳುತ್ತೇನೆ ಎಂದು ಅನಿಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಪಿಎಸ್ಸಿ ಪರೀಕ್ಷೆಗೆ ನಿರಂತರ ಓದು ಹಾಗೂ ಸತತ ಪರಿಶ್ರಮ ಮುಖ್ಯ. ಶಾಲಾ ಹಂತದಲ್ಲಿ ಜಾಣರಾಗಿರಬೇಕು ಅಥವಾ ಇಂಗ್ಲಿಷ್‌ ಮಾಧ್ಯಮ ಮುಖ್ಯ ಎನ್ನುವುದೆಲ್ಲ ಮಿಥ್ಯ. ನಾವು ಎಷ್ಟು ಪರಿಶ್ರಮ ಪಡುತ್ತೇವ ಎನ್ನುವುದರ ಮೇಲೆ ಫಲಿತಾಂಶ ಅವಲಂಬನೆಯಾಗಿರುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT