ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಕ್ಕಿ ಕಲೆಯಲ್ಲಿ ‘ಅಪೂರ್ವ’ ಸಾಧನೆ: ಎಂಜಿನಿಯರಿಂಗ್ ಪದವೀಧರೆಯ ವಿಶೇಷ ಆಸಕ್ತಿ

Last Updated 31 ಜುಲೈ 2021, 15:50 IST
ಅಕ್ಷರ ಗಾತ್ರ

ಮೂಡಲಗಿ (ಬೆಳಗಾವಿ): ಇಲ್ಲಿನ ಅಪೂರ್ವಾ ಹಣಮಂತ ಪ್ಯಾಟಿಗೌಡರ ಚುಕ್ಕಿ ಮತ್ತು ಮಂಡಲ ಚಿತ್ರ ಕಲಾಪ್ರಕಾರದಲ್ಲಿ ಕಲಾಕೃತಿಗಳನ್ನು ರಚಿಸುವ ಮೂಲಕ ಚಿತ್ರಕಲಾ ಕ್ಷೇತ್ರದಲ್ಲಿ ಗಮನಸೆಳೆದಿದ್ದಾರೆ.

ಬಿಇ ಪದವೀಧರೆಯಾದ ಅವರು ಬಾಲ್ಯದಲ್ಲಿಯೇ ಚಿತ್ರ ಕಲೆಯಿಂದ ಆಕರ್ಷಿತರಾದವರು. ಪಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿದ್ದಾಗ ಹಲವಾರು ಚಿತ್ರಗಳನ್ನು ಬಿಡಿಸಿ ಶಾಲಾ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಅಸಂಖ್ಯಾತ ಚುಕ್ಕಿಗಳನ್ನು ಉಪಯೋಗಿಸಿ ಚಿತ್ರಗಳನ್ನು ಸೃಷ್ಟಿಸುವುದು ಚುಕ್ಕಿ ಚಿತ್ರ ಕಲೆಯ ವೈಶಿಷ್ಟ್ಯವಾಗಿದ್ದು, ಇದನ್ನು ಸ್ಟಿಪ್ಲಿಂಗ್ ಆರ್ಟ್‌ ಎಂದೂ ಕರೆಯುತ್ತಾರೆ. ಲಕ್ಷ, ಕೋಟಿಗಳಷ್ಟು ಚುಕ್ಕಿಗಳನ್ನು ಕ್ಯಾನ್‌ವಾಸ್‌ (ಹಾಳೆ) ಮೇಲೆ ಇಟ್ಟು ಅವುಗಳನ್ನು ಸೇರಿಸಿ ಸುಂದರ ಕಲಾಕೃತಿಯನ್ನು ಸೃಷ್ಟಿಸುವ ಕಲಾ ಕೌಶಲಕ್ಕೆ ತಲೆದೂಗದವರಿಲ್ಲ.

ಬುದ್ಧನ ಚುಕ್ಕಿ ಕಲಾಕೃತಿಯು ಅವರ ಕಲಾ ನೈಪುಣ್ಯಕ್ಕೆ ಸಾಕ್ಷಿಯಾಗಿದೆ. ಗಣಪತಿ, ಸರಸ್ವತಿ, ಕೃಷ್ಣ, ವೆಂಕಟೇಶ ಹೀಗೆ ವಿವಿಧ ದೇವರ ಚಿತ್ರಗಳು, ಪ್ರಾಣಿ, ಪಕ್ಷಿ ಮತ್ತು ಪರಿಸರ ಬಿಂಬಿಸುವ ಹಲವಾರು ವೈವಿಧ್ಯ ಕಲಾಕೃತಿಗಳು ಗಮನಸೆಳೆಯುತ್ತವೆ.

ವೃತ್ತಗಳಲ್ಲಿ ರೇಖೆಗಳ ಮೂಲಕ ರಚಿಸುವ ದೇಸಿ ಚಿತ್ರ ಕಲೆಯಾಗಿರುವ ‘ಮಂಡಲ ಚಿತ್ರ’ ಮತ್ತು ಪ್ರಕೃತಿಯ ಸೌಂದರ್ಯ ಆರಾಧಿಸುವ ಬುಡಕಟ್ಟು ಜನರ ಜಾನಪದೀಯ ಚಿತ್ರ ಕಲೆ ‘ಗೊಂಡ ಚಿತ್ರ’ಗಳನ್ನು ರಚಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.

‘ಶಾಂತಚಿತ್ತಗೊಳಿಸುವ ಮಂಡಲ ಕಲಾ ಕೃತಿಗಳನ್ನು ಬಿಡಿಸುವುದಕ್ಕೆ ಏಕಾಗ್ರತೆ ಬೇಕು. ಒಂದು ರೀತಿಯ ಇದೊಂದು ಧ್ಯಾನಾಸಕ್ತಿಯ ಕಲೆಯಾಗಿದೆ’ ಎನ್ನುತ್ತಾರೆ ಅಪೂರ್ವಾ. ‘ಮನೆಯ ಅಲಂಕಾರದ ಜೊತೆಗೆ ಅಲ್ಲಿರುವವರ ಶಾಂತಿ, ನೆಮ್ಮದಿಗಾಗಿ ಮಂಡಲ ಚಿತ್ರಕಲೆಗಳನ್ನು ಹೆಚ್ಚಾಗಿ ಬಳಸುತ್ತಾರೆ’ ಎಂದು ಹೇಳಿದರು.

‘ಚುಕ್ಕಿ ಮತ್ತು ಮಂಡಲ ಕಲಾಕೃತಿಯನ್ನು ಚಿತ್ತ ಕೊಟ್ಟು ಬಿಡಿಸಿದರೆ ಒಂದು ದಿನ, ಕೆಲವೊಮ್ಮೆ ಎರಡು ದಿನ ಬೇಕಾಗುತ್ತದೆ’ ಎನ್ನುವರು.

ಕ್ಯಾನ್‌ವಾಸ್ ಪೇಪರ್‌ ಮತ್ತು ಬಟ್ಟೆ ಮತ್ತು ಮೈಕ್ರೋಪೆನ್‌, ಬಣ್ಣಗಳನ್ನು ಅವರು ಬಳಕೆ ಮಾಡುತ್ತಾರೆ. ‘ಕೋವಿಡ್‌ ಲಾಕ್‌ಡೌನ್‌ ಅವಧಿಯನ್ನು ವ್ಯರ್ಥ ಮಾಡಿಕೊಳ್ಳದೆ ಚಿತ್ರಗಳನ್ನು ಬಿಡಿಸಿರುವೆ’ ಎಂದು ಖುಷಿ ವ್ಯಕ್ತಪಡಿಸಿದರು. ಶಾಲೆ–ಕಾಲೇಜು ಮುಖ್ಯಸ್ಥರ ಕೋಣೆಗಳನ್ನು, ಪ್ರಮುಖ ವ್ಯಕ್ತಿಗಳ ಮನೆಗಳ ಗೋಡೆಗಳಲ್ಲಿ ಅವರ ಕಲಾಕೃತಿಗಳು ಸ್ಥಾನ ಪಡೆದಿವೆ;ಮೆಚ್ಚುಗೆಯನ್ನೂ ಗಳಿಸಿವೆ.

ಚಿತ್ರಕಲೆಯ ಯಾವ ಕೋರ್ಸನ್ನೂ ಮಾಡದೆ ಆಸಕ್ತಿ ಮತ್ತು ಹವ್ಯಾಸಕ್ಕಾಗಿ ಚಿತ್ರ ಬಿಡಿಸುವುದನ್ನು ರೂಢಿಸಿಕೊಂಡು ಬಂದಿರುವ ಅವರು, ಕಲೆಯಲ್ಲಿ ಪರಿಣತಿ ಸಾಧಿಸಿದ್ದು ವಿಶೇಷವಾಗಿದೆ. ನೂರಾರು ಕಲಾಕೃತಿಗಳನ್ನು ರಚಿಸಿ ಚಿತ್ರ ಕಲಾ ಪ್ರಿಯರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ಅನ್‌ಲೈನ್‌ನಲ್ಲಿ ನಡೆಯುವ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ, ಮೆಚ್ಚುಗೆ ಪಡೆದುಕೊಂಡಿದ್ದಾರೆ.

‘ತಂದೆ–ತಾಯಿ ಪ್ರೋತ್ಸಾಹ ನೀಡುತ್ತಿರುವುದರಿಂದ ಚಿತ್ರಕಲೆಯಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ’ ಎನ್ನುತ್ತಾರೆ ಅಪೂರ್ವಾ. ಸಂಪರ್ಕಕ್ಕೆ ಮೊ.ಸಂಖ್ಯೆ: 9448636220.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT