ಶನಿವಾರ, ಜನವರಿ 23, 2021
21 °C
ಪರ್ಯಾಯಕ್ಕೆ ಮುಂದಾದ ಪ್ರತಿಭೆಗಳು!

ಕೋವಿಡ್‌ನಿಂದಾಗಿ ಸಂಕಷ್ಟ: ‘ಲಯ’ ತಪ್ಪಿದ ಕಲಾವಿದರ ಬದುಕು

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಜಿಲ್ಲೆಯ ಕಲಾವಿದರನ್ನು ‘ಕೋವಿಡ್–19 ಪರಿಸ್ಥಿತಿ’ಯು ಬಹುವಾಗಿ ಬಾಧಿಸಿದ್ದು, ಅವರು ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ.

ಬಯಲಾಟ, ದೊಡ್ಡಾಟ, ಸಣ್ಣಾಟ, ಲಾವಣಿ, ಗೀಗಿಪದ, ಸೋಬಾನೆ ಪದ, ರಿವಾಯತ್‌, ಕರಡಿ ಮೇಳ, ಸಂಗ್ಯಾ ಬಾಳ್ಯಾ, ರಾಧಾನಾಟ, ಕೃಷ್ಣ ಪಾರಿಜಾತ, ದೇಸಿ, ಚೌಡಿಕೆ ಪದ, ಭಜನಾ ಪದ, ದತ್ತಿ ಕುಣಿತ, ಮಂಗಳವಾದ್ಯ, ಡೊಳ್ಳು ಕುಣಿತ ಹೀಗೆ... ಜಾನಪದೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕಲಾವಿದರು ಮತ್ತು ಆರ್ಕೆಸ್ಟ್ರಾ, ಸುಗಮ ಸಂಗೀತ, ಬ್ರಾಸ್ ಬ್ಯಾಂಡ್, ಗಾಯಕರು, ಬೀದಿನಾಟಕ, ರಂಗಕಲೆಗಳನ್ನು ನಂಬಿದ್ದವರ ಬದುಕು ಲಾಕ್‌ಡೌನಿಂದ ‘ಲಯ’ ತಪ್ಪಿದೆ. ಆಗ ಬಿದ್ದ ಹೊಡೆತದಿಂದ ಅವರು ಸುಧಾರಿಸಿಕೊಂಡಿಲ್ಲ.

ಕೆಲಸವಿಲ್ಲದೆ ಶುಭ ಸಮಾರಂಭಗಳಲ್ಲಿ ಸಂಗೀತ ಕಾರ್ಯಕ್ರಮ ನೀಡುವ ಆರ್ಕೆಸ್ಟ್ರಾ ಕಲಾವಿದರ ಬದುಕು ಬೀದಿಗೆ ಬಿದ್ದಿದೆ. ಲಾಕ್‌ಡೌನ್‌ನಿಂದ ವಿನಾಯಿತಿ ಸಿಕ್ಕಿದೆಯಾದರೂ, ಜನಜೀವನ ಸಂಪೂರ್ಣ ಸಹಜ ಸ್ಥಿತಿಗೆ ಬಾರದೆ ಬಹುತೇಕರಿಗೆ ಕೆಲಸ ಇಲ್ಲವಾಗಿದೆ.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಜಾನಪದ ಪ್ರಾಕಾರದ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತಲಾ ₹ 2ಸಾವಿರ ಆರ್ಥಿಕ ನೆರವನ್ನು ಸರ್ಕಾರ  ಪ್ರಕಟಿಸಿತ್ತು. ಆದರೆ, ಅರ್ಜಿ ಹಾಕಿದವರನ್ನೆಲ್ಲಾ ಆಯ್ಕೆ ಮಾಡಿಲ್ಲ.

ಇಲಾಖೆಯಿಂದ ಪ್ರಾಯೋಜಕತ್ವದ ಹಣ ಪಡೆಯಲು ಜಿಪಿಎಸ್ ಆಧಾರಿತ ವರದಿ ಸಲ್ಲಿಸಬೇಕು ಎಂಬ ಹೊಸ ನಿಯಮ ಮಾಡಲಾಗಿದೆ. ಇದು, ಹಿರಿಯ  ಕಲಾವಿದರಿಗೆ ಸುಧಾರಿತ ತಂತ್ರಜ್ಞಾನ ಬಳಸಲಾಗದೆ ನೆರವು ಪಡೆಯಲು ಪರದಾಡುತ್ತಿದ್ದಾರೆ.

ಸರ್ಕಾರದ ವಿವಿಧ ಯೋಜನೆಗಳ ಪ್ರಚಾರಕ್ಕೆ ಬೀದಿನಾಟಕ ಕಲಾವಿದರನ್ನು ಬಳಸಿಕೊಳ್ಳುವ ಪ್ರಮಾಣವೂ ಕಡಿಮೆಯಾಗಿದೆ.

‘ಕಾರ್ಯಕ್ರಮಗಳ ಆಯೋಜನೆಯೇ ಕಡಿಮೆ ಇದೆ. ಇದರಿಂದ ಪ್ರದರ್ಶನ ಕಲಾವಿದರು ಆರ್ಥಿಕವಾಗಿ ಹೊಡೆತ ಅನುಭವಿಸಿದ್ದಾರೆ. ಇದರಿಂದ ಹವ್ಯಾಸಿ, ದೇಸಿ ಕಲಾವಿದರ ಪಾಡು ಹೇಳತೀರದಾಗಿದೆ. ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಕೂಲಿಗೆ ಹೋಗುವ ಅನಿವಾರ್ಯಕ್ಕೆ ಸಿಲುಕಿದ್ದಾರೆ. ಐದಾರು ಮಂದಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಅವರನ್ನು ಭೇಟಿಯಾಗಿ ಸ್ಥೈರ್ಯ ತುಂಬಿದ್ದೆ. ವೈಯಕ್ತಿಕವಾಗಿ ಮತ್ತು ಸ್ನೇಹಿತರ ಮೂಲಕ ನೆರವಾಗಿದ್ದೆ’ ಎಂದು ಲಲಿತಕಲಾ ಅಕಾಡೆಮಿ ಸದಸ್ಯ ಜಯಾನಂದ ಮಾದರ ತಿಳಿಸಿದರು.‌

ಚಹಾ ಮಾರಾಟ!

ರಾಮದುರ್ಗದಲ್ಲಿ ಮದುವೆ, ಸಭೆ–ಸಮಾರಂಭಗಳಲ್ಲಿ ರಸಮಂಜರಿ ಕಾರ್ಯಕ್ರಮಗಳ ಮೂಲಕ ಮನರಂಜನೆ ನೀಡುತ್ತಿದ್ದ ಹಾಗೂ ಹೆಣ್ಣು–ಗಂಡು ದನಿಗಳೆರಡರಲ್ಲೂ ಹಾಡುವ ಗಾಯಕ ರಫೀಕ್‌ ಗಚ್ಚಿನಮನಿ ಹೊಟ್ಟೆಪಾಡಿಗಾಗಿ ಆಸ್ಪತ್ರೆ, ಗ್ಯಾರೇಜ್, ಮಳಿಗೆಗಳಲ್ಲಿ ಚಹಾ ಮಾರುತ್ತಿದ್ದಾರೆ. ಆರ್ಕೆಸ್ಟ್ರಾದಲ್ಲಿ ಹಾಡಿದರೆ ತಿಂಗಳಿಗೆ ₹ 18ಸಾವಿರ ಬರುತ್ತಿತ್ತು. ಅದರಿಂದ ಜೀವನ ನಡೆಸುತ್ತಿದ್ದೆ. ಆದರೆ, ಈಗ ಚಹಾ ಮಾರಾಟದಿಂದ ತಿಂಗಳಿಗೆ ₹ 3ರಿಂದ ₹ 4,500 ಮಾತ್ರವೇ ಸಿಗುತ್ತಿದೆ ಎನ್ನುತ್ತಾರೆ ಅವರು.

ಶ್ರೀಮಹಾಲಕ್ಷ್ಮಿ ಗ್ರೂಪ್ ನೆರವು

ಸಂಕಷ್ಟದಲ್ಲಿದ್ದ ಖಾನಾಪುರ ತಾಲ್ಲೂಕಿನ ವಿವಿಧ ಕಲಾವಿದರು ಮತ್ತು ಕಲಾತಂಡದವರ ಸಂಕಷ್ಟಕ್ಕೆ ತೋಪಿನಕಟ್ಟಿ ಶ್ರೀಮಹಾಲಕ್ಷ್ಮಿ ಗ್ರುಪ್ ಸ್ಪಂದಿಸಿದೆ. ಬಾಜಾ ಭಜಂತ್ರಿ, ಮಂಗಳ ವಾದ್ಯ ನುಡಿಸುವವರು, ನಾಟಕ ಮತ್ತು ಸಂಗೀತ ಕಲಾವಿದರು ಮೊದಲಾದವರಿಗೆ ದಿನಸಿ ಮತ್ತು ಅವಶ್ಯ ವಸ್ತುಗಳನ್ನು ಪೂರೈಸಿದೆ. ಗುಂಡೇನಟ್ಟಿಯ ಜನಪದ ಕಲಾವಿದರು ಕೂಲಿಗೆ ಹೋಗುತ್ತಿದ್ದಾರೆ. ತಾಲ್ಲೂಕಿನಲ್ಲಿ 15ಕ್ಕೂ ಹೆಚ್ಚು ಕಲಾತಂಡಗಳಿವೆ. ಅವರಿಗೆ ಸರ್ಕಾರದಿಂದ ನೆರವು ಸಿಕ್ಕಿಲ್ಲ.

ಬದುಕಿಗೆ ಪರ್ಯಾಯ ದಾರಿ

ಚನ್ನಮ್ಮನ ಕಿತ್ತೂರಿನಲ್ಲಿ ಬ್ಯಾಂಡ್, ಜನಪದ ಹಾಡುಗಾರರು, ವೃತ್ತಿ ರಂಗಭೂಮಿ ನಾಟಕದ ಸೀನ್ಸ್ ಬರೆಯುವ ಕಲಾವಿದರು ದಿಕ್ಕೆಟ್ಟು ಹೋಗಿದ್ದಾರೆ. ಕೆಲವರು ಕೂಲಿ ಮಾಡುತ್ತಿದ್ದರೆ, ಕೆಲವರು ವ್ಯಾಪಾರದ ಮೊರೆ ಹೋಗಿದ್ದಾರೆ.

ಈಗ ಮದುವೆ ಸುಗ್ಗಿ ಪ್ರಾರಂಭವಾಗಿದ್ದು, ಬ್ಯಾಂಡ್ ಕಲಾವಿದರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ನಾಟಕ ಪರದೆ ರಚನಾ ಕಲಾವಿದ ರಮೇಶ ಪತಂಗೆ ಉಪಜೀವನಕ್ಕೆ ರಸ್ತೆ ಬದಿಯಲ್ಲಿ ಅಥವಾ ಮನೆ ಎದುರು ಸ್ಟೇಷನರಿ ವಸ್ತುಗಳನ್ನು ಮಾರುತ್ತಿದ್ದಾರೆ.

ನಾಟಕ ಕಂಪನಿಗಳಿಗೆ ರಂಗಿಲ್ಲ

ಎಂ.ಕೆ. ಹುಬ್ಬಳ್ಳಿಯಲ್ಲಿ ನಾಟಕ ಕಂಪನಿಗಳ ಮೂಲಕ ಜೀವನದ ಬಂಡಿ ದೂಡುವ ಕಲಾವಿದರು ಹಾಗೂ ಮಾಲೀಕರಿಗೆ ಹೊಡೆತ ಬಿದ್ದಿದೆ. ಸಾಲ ಮಾಡುವ ಸ್ಥಿತಿಗೆ ಬಂದಿದ್ದಾರೆ. ಸರ್ಕಾರದಿಂದ ಸಿಗುವ ಪಿಂಚಣಿಯಲ್ಲೇ ಕಷ್ಟಪಟ್ಟು ಜೀವನ ನಡೆಸುತ್ತಾ, ಇತರ ಕೆಲಸಗಳತ್ತ ಗಮನಹರಿಸಿದ್ದಾರೆ.

ಸವದತ್ತಿ ತಾಲ್ಲೂಕಿನ ಉಗರಗೋಳದ ದೋಸ್ತಿ ಸಂಗೀತ ತಂಡಕ್ಕೆ ಕೆಲಸವಿಲ್ಲದಂತಾಗಿದೆ. ಕಲಾ ತಂಡದವರು ದಿನಗೂಲಿ ಮೊರೆ ಹೋಗಿದ್ದಾರೆ. ಆರ್ಕೆಸ್ಟ್ರಾ ತಂಡದವರ ಬಾಳಲ್ಲಿ ‘ಶೋಕ ರಾಗ’ವೇ ತುಂಬಿದೆ!

ಹೈರಾಣಾಗೀವ್ರೀ

‘ಕೊರೊನಾ ಹಾವಳಿಯಲ್ಲಿ ಕಲಾವಿದರೆಲ್ಲ ಹೈರಾಣ ಆಗಿದ್ದಾರ್ರೀ’ ಎಂದು ಮೂಡಲಗಿ ತಾಲ್ಲೂಕಿನ ಕಲ್ಲೋಳಿಯ ವೀರಗಾಸೆ ಕಲಾವಿದ ಘೂಳಪ್ಪ ವಿಜಯನಗರ ಅಳಲು ತೋಡಿಕೊಂಡರು.

ತಾಲ್ಲೂಕಿನಲ್ಲಿ 4 ನಾಟಕ ಕಂಪನಿಗಳು ಮತ್ತು ಬ್ಯಾಂಡ್ ತಂಡಗಳು, 4 ಸಂಗೀತ ಕಲಾ ತಂಡಗಳು, 10ಕ್ಕೂ ಹೆಚ್ಚು ಭಜನಾ ತಂಡಗಳು, ವೀರಗಾಸೆ, ಕರಡಿ ಸಂಬಾಳ, ದಟ್ಟಿ ಕುಣಿತ, ಸಿದ್ದಿಕ ಬಕರಾ, ಗೊಂದಳಿ ತಂಡ, ಪಾರಿಜಾತ ತಂಡಗಳಿದ್ದು, ಅವು ತೊಂದರೆಯಲ್ಲಿವೆ. ಕಲಾವಿದರು ಪರ್ಯಾಯಕ್ಕೆ ಒಗ್ಗಲಾಗದೆ ಪರದಾಡುತ್ತಿದ್ದಾರೆ.

‘ನಾವೇ ಸಂಕಷ್ಟದಲ್ಲಿರುವಾಗ, ಕಲಾ ಪರಂಪರೆ ಮುಂದುವರಿಸುವಂತೆ ಈಗಿನ ಪೀಳಿಗೆಗೆ ಪ್ರೇರಣೆ ಕೊಡುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ’ ಎಂದು ಬಯಲಾಟ ಕಳಾವಿದ ಬಸವಣ್ಣಿ ಕುಂಬಾರ ಆತಂಕ ವ್ಯಕ್ತಪಡಿಸಿದರು.

ಕಬ್ಬು ಕಡಿಯುವ ಕೆಲಸಕ್ಕೆ!

‘ಕಲೆಯಿಂದ ಹೊಟ್ಟೆ ತುಂಬುವುದು ಎಂದು ನಂಬಿಕೊಂಡಿದ್ದ ನಮಗೆ, ಕೊರೊನಾ ನಿಜವಾಗಿಯೂ ಪಾಠ ಕಲಿಸಿತು. ಎರಡು ಹೊತ್ತು ಊಟಕ್ಕೂ ಗತಿ ಇಲ್ಲದೆ, ಕುಟುಂಬವನ್ನು ಬೆನ್ನಿಗೆ ಕಟ್ಟಿಕೊಂಡು ಜೀವನ ನಿರ್ವಹಣೆ ಹೇಗೆ ಎನ್ನುವ ಚಿಂತೆಯಲ್ಲಿದ್ದೇವೆ’ ಎಂದು ಗೋಕಾಕದ ಕಲಾವಿದ ಉದ್ದಣ್ಣ ಗೋಡೇರ ಹೇಳಿದರು.

‘ಜನಪದ ಕಲೆಯನ್ನು ಉಳಿಸಿ-ಬೆಳೆಸಿಕೊಂಡು ಹೋಗಬೇಕು ಎಂಬ ಕನಸು ಕಟ್ಟಿಕೊಂಡು 30 ವರ್ಷಗಳಿಂದ ದಟ್ಟಿ ಕುಣಿತದ ತಂಡದ ನೇತೃತ್ವ ವಹಿಸಿ ರಾಜ್ಯದ ಮೂಲೆ-ಮೂಲೆಯಲ್ಲಿ ಕಾರ್ಯಕ್ರಮ ನೀಡಿದ್ದೇನೆ. ಕೊರೊನಾ ಕಾಣಿಸಿಕೊಂಡಾಗಿನಿಂದ ಕಲೆಯನ್ನು ಉಳಿಸಿ-ಬೆಳೆಸಬೇಕೆಂಬ ಚಿಂತೆಯನ್ನು ಮರೆಯುವ ಸ್ಥಿತಿಗೆ ತಲುಪಿದ್ದೇವೆ. ತಂಡದ ಸದಸ್ಯರು ಕಬ್ಬು ಕಡೆಯುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ನೆರವಿಗೆ ಬರಲಿಲ್ಲ. ಕಾರ್ಯಕ್ರಮಗಳಿಗೆ ಕರೆ ಬಂದರೆ ತಂಡವನ್ನು ಮತ್ತೆ ಕಟ್ಟುವುದು ಕಷ್ಟದ ಕೆಲಸ’ ಎನ್ನುತ್ತಾರೆ ಅವರು.

***

ಪ್ರತಿಕ್ರಿಯೆಗಳು

ಸರ್ಕಾರವು ಸಭೆ, ಸಮಾರಂಭ ಮತ್ತು ಮದುವೆಗಳಿಗೆ ಮುಕ್ತ ಅವಕಾಶ ನೀಡಿದರೆ ನಮ್ಮಂಥ ಕಲಾವಿದರಿಗೆ ಸಹಾಯವಾಗುತ್ತದೆ. ಪ್ರದರ್ಶನ ಕಲಾವಿದರನ್ನು ಗುರುತಿಸುವವರು ಇಲ್ಲವಾದ್ದರಿಂದ ನಮಗೆ ಬಹಳ ಕಷ್ಟವಾಗಿದೆ.

-ರಫೀಕ್‌ ಗಚ್ಚಿನಮನಿ, ಕಲಾವಿದ, ರಾಮದುರ್ಗ

ಸಂಗೀತ ಕಾರ್ಯಕ್ರಮವೇ ನಮಗೆ ದಾರಿದೀಪ. ಈಗ, ವಿಧಿ ಇಲ್ಲದೆ ಹೊಲಗಳಿಗೆ ತೆರಳಿ ದಿನಗೂಲಿ ಕೆಲಸ ಮಾಡಬೇಕಾಗಿದೆ. ಲಾಕ್‌ಡೌನ್‌ನಿಂದ ತೊಂದರೆ ಅನುಭವಿಸಿದ ನಮಗೆ ಸರ್ಕಾರದಿಂದ ನೆರವು ಸಿಕ್ಕಿಲ್ಲ. ಎಲ್ಲ ಸಂಗೀತ ಮತ್ತು ಕಲಾತಂಡಗಳಿಗೂ ಆರ್ಥಿಕ ಸಹಾಯ ಮಾಡಬೇಕು.

-ಮಂಜುನಾಥ ಗುಡೆನ್ನವರ, ಸದಸ್ಯ, ‘ದೋಸ್ತಿ’ ಸಂಗೀತ ತಂಡ, ಉಗರಗೋಳ, ಸವದತ್ತಿ ತಾಲ್ಲೂಕು

ಕೋವಿಡ್‌ನಿಂದಾಗಿ ರಂಗಭೂಮಿ ಕಲಾ ಪ್ರದರ್ಶನವಿಲ್ಲದೆ ನಮ್ಮೆಲ್ಲ ಕಲಾವಿದರು ಕುಟುಂಬ ನಡೆಸಲು ಕಷ್ಟಪಡುತ್ತಿದ್ದಾರೆ. ಗೌರವಧನದಿಂದ ಜೀವನ ‌ನಿರ್ವಹಣೆ ಕಷ್ಟವಾಗಿದೆ. ಕಾರ್ಯಕ್ರಮಗಳಿಗೆ ಅವಕಾಶ ಕೊಟ್ಟರೆ ಅನುಕೂಲ.

-ಮಲ್ಲನಗೌಡ ಪಾಟೀಲ, ಅಧ್ಯಕ್ಷರು, ಕರ್ನಾಟಕ ಸರ್ವ ಕಲಾವಿದರ ಹಿತರಕ್ಷಣಾ ಸಂಘ, ಗದ್ದಿಕರವಿನಕೊಪ್ಪ

ಕಲೆಯನ್ನೇ ನಂಬಿ ಜೀವನ ಮಾಡುವವರು ನಾವು. ಲಾಕ್‌ಡೌನ್‌ನಲ್ಲಿ ನಮ್ಮೆಲ್ಲರಿಗೂ ಬಾಳ್ ತ್ರಾಸ್ ಆಗೇದ್ರೀ. ಸರ್ಕಾರವೂ ಕಲಾವಿದರನ್ನು ಗಮನಿಸಿಲ್ಲ.

-ಶಬ್ಬೀರ್ ಡಾಂಗೆ, ಜಾನಪದ ಕಲಾವಿದ, ಮೂಡಲಗಿ

ಬಡ ಕಲಾವಿದರಿಗೆ ಸರ್ಕಾರ ಆರ್ಥಿಕ ನೆರವು ನೀಡಬೇಕು. ಮಾಸಾಶನ ಮಂಜೂರಾತಿ ಮಾನದಂಡ ಸರಳೀಕರಿಸಬೇಕು. ದಾಖಲಾತಿ ಇಲ್ಲದೆ ಅನೇಕರು ಸೌಲಭ್ಯದಿಂದ ವಂಚಿತರಾಗಿದ್ದು, ಅವರಿಗೆ ನೇರ ಸಂದರ್ಶನದ ಮೂಲಕ ಪಿಂಚಣಿಗೆ ಆಯ್ಕೆ ಮಾಡಬೇಕು. ಪಿಂಚಣಿಯನ್ನು ಕನಿಷ್ಠ ₹ 5 ಸಾವಿರಕ್ಕೆ ಹೆಚ್ಚಿಸಬೇಕು.

-ಭರತ ಕಲಾಚಂದ್ರ, ಅಧ್ಯಕ್ಷರು, ರಂಗದರ್ಶನ ಗ್ರಾಮೀಣ ವಿಕಾಸ ಸಂಘ, ಧುಳಗನವಾಡಿ, ಚಿಕ್ಕೋಡಿ ತಾಲ್ಲೂಕು

ಜಿಲ್ಲೆಯಲ್ಲಿ ವಿವಿಧ ಪ್ರಾಕಾರದ 12ಸಾವಿರ ಕಲಾವಿದರಿದ್ದಾರೆ. ಕೋವಿಡ್‌ನಿಂದ ತೊಂದರೆಗೆ ಒಳಗಾದ ಜಾನಪದ ಕಲಾವಿದರಿಗೆ ಆರ್ಥಿಕ ನೆರವನನು ಸರ್ಕಾರ ಘೋಷಿಸಿತ್ತು. 1,594 ಮಂದಿ ನೆರವು ಕೋರಿ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಸರ್ಕಾರದ ನಿಯಮಗಳ ‍ಪ್ರಕಾರ, 894 ಮಂದಿಗೆ ತಲಾ ₹ 2ಸಾವಿರ ನೀಡಲಾಗಿದೆ.

-ವಿದ್ಯಾವತಿ ಭಜಂತ್ರಿ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

***

‘ಕ್ವಾರಂಟೈನ್ ಕ್ಯಾಂಪ್‌’ನಲ್ಲಿ ನೆರವು

‘ಲಲಿತಕಲಾ ಅಕಾಡೆಮಿಯಿಂದ ‘ಕ್ವಾರಂಟೈನ್ ಕ್ಯಾಂಪ್’ ನಡೆಸಲಾಯಿತು. ಅವರು ಇದ್ದಲ್ಲೇ ಚಿತ್ರ ರಚನೆಗೆ ಅವಕಾಶ ಕೊಡಲಾಗಿತ್ತು. ವಿಡಿಯೊ ಹಾಗೂ ಫೋಟೊ ದಾಖಲೆ ಸಂಗ್ರಹಿಸಿ ತಲಾ ₹ 15ಸಾವಿರ ಸಂಭಾವನೆ ನೀಡಲಾಯಿತು. ಪ್ರತಿ ಜಿಲ್ಲೆಗೆ ಇಬ್ಬರಂತೆ 60 ಮಂದಿಗೆ ಈ ಸೌಲಭ್ಯ ಒದಗಿಸಿದ್ದು ಐತಿಹಾಸಿಕ ಕಾರ್ಯವಾಗಿದೆ. ಸರ್ಕಾರದಿಂದ ಈವರೆಗೆ ಯಾವುದೇ ಅವಕಾಶ ಪಡೆಯದಂಥವರನ್ನು ಗುರುತಿಸಿ, ಈ ನೆರವು ಕೊಡಲಾಯಿತು’ ಎಂದು ಲಲಿತಕಲಾ ಅಕಾಡೆಮಿ ಸದಸ್ಯ ಜಯಾನಂದ ಮಾದರ ‘ಪ್ರಜಾವಾಣಿ’ಗೆ ತಿಳಿಸಿದರು.

***

(ಪ್ರಜಾವಾಣಿ ತಂಡ: ಪ್ರದೀಪ ಮೇಲಿನಮನಿ, ಚನ್ನಪ್ಪ ಮಾದರ, ಬಾಲಶೇಖರ ಬಂದಿ, ಎಸ್.ವಿಭೂತಿಮಠ, ಬಸವರಾಜ ಶಿರಸಂಗಿ, ಪ್ರಸನ್ನ ಕುಲಕರ್ಣಿ, ಸುಧಾಕರ ತಳವಾರ, ರಾಮೇಶ್ವರ ಕಲ್ಯಾಣಶೆಟ್ಟ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು