ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥಣಿ: ಎಆರ್‌ಟಿಒ ಕಚೇರಿ ಉದ್ಘಾಟನೆ

ಮೂರು ವಿಧಾನಸಭಾ ಕ್ಷೇತ್ರಗಳ ಜನರಿಗೆ ಅನುಕೂಲ
Last Updated 3 ಆಗಸ್ಟ್ 2020, 14:07 IST
ಅಕ್ಷರ ಗಾತ್ರ

ಅಥಣಿ: ಅಥಣಿ, ಕಾಗವಾಡ ಹಾಗೂ ಕುಡಚಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯನ್ನು ಒಳಗೊಂಡಂತೆ ಇಲ್ಲಿ ಸ್ಥಾಪಿಸಲಾಗಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ಎಆರ್‌ಟಿಒ) ಕಚೇರಿಯನ್ನು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೋಮವಾರ ಉದ್ಘಾಟಿಸಿದರು.

ವಾಹನಗಳ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿದರು. ಚಾಲನಾ ಪರವಾನಗಿ ಪತ್ರಗಳನ್ನು ವಿತರಿಸಿದರು.

ನಂತರ ಮಾತನಾಡಿದ ಅವರು, ‘ಇಲ್ಲಿ ಎಆರ್‌ಟಿಒ ಕಚೇರಿ ಸ್ಥಾಪಿಸಬೇಕು ಎನ್ನುವುದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಅದಕ್ಕೆ ನಮ್ಮ ಸರ್ಕಾರ ಸ್ಪಂದಿಸಿದೆ. ಇದರಿಂದಾಗಿ ಅಥಣಿ, ಕಾಗವಾಡ ಮತ್ತು ಕುಡಚಿ ವಿಧಾನಸಭಾ ಕ್ಷೇತ್ರಗಳ ಜನರು ದೂರದ ಚಿಕ್ಕೋಡಿಗೆ ಹೋಗುವುದು ತಪ್ಪಿದಂತಾಗಿದೆ. ಇನ್ಮುಂದೆ ವಾಹನ ಚಾಲನಾ ಪರವಾನಗಿಯನ್ನು ಇಲ್ಲೇ ಪಡೆಯಬಹುದು. ಸಾರ್ವಜನಿಕರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

‘2020-21ನೇ ಸಾಲಿಗಾಗಿ ಸಾರಿಗೆ ಇಲಾಖೆಗೆ ₹7,115 ಕೋಟಿ ರಾಜಸ್ವ ಸಂಗ್ರಹದ ಗುರಿ ನಿಗದಿಪಡಿಸಲಾಗಿದೆ. ರಾಜ್ಯದಲ್ಲಿ ಇದುವರೆಗೆ 2.36 ಕೋಟಿ ವಾಹನಗಳು ನೋಂದಣಿಯಾಗಿವೆ. ಪ್ರಸಕ್ತ ಕಾರ್ಯನಿರ್ವಹಿಸುತ್ತಿರುವ 66 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗಳು ಆಧುನಿಕ ತಂತ್ರಜ್ಞಾನಗಳನ್ನು ಹೊಂದಿದ್ದು, ನಿಗದಿತ ತಂತ್ರಾಂಶಗಳ ಸಹಾಯದಿಂದ ಆನ್‌ಲೈನ್‌ನಲ್ಲಿ ಪಾರದರ್ಶಕ ಹಾಗೂ ತ್ವರಿತವಾಗಿ ಸೇವೆ ನೀಡುತ್ತಿವೆ. ರಾಜಸ್ವ ಸಂಗ್ರಹಣೆಯನ್ನು ಖಜಾನೆ-2 ತಂತ್ರಾಂಶದೊಂದಿಗೆ ಸಂಯೋಜಿಸಿ ಬೊಕ್ಕಸಕ್ಕೆ ಹಣ ಸಂದಾಯವಾಗುವ ವಿನೂತನ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಮೋಟಾರು ವಾಹನ ಕಾಯ್ದೆ ಹಾಗೂ ಅದರಡಿ ರಚಿತವಾದ ನಿಯಮಾವಳಿಗಳ ಉಲ್ಲಂಘನೆಗಾಗಿ 2019-20ನೇ ಸಾಲಿನಲ್ಲಿ 22,86,850 ವಾಹನಗಳನ್ನು ತಪಾಸಣೆ ನಡೆಸಲಾಗಿದೆ. ನಿಯಮ ಉಲ್ಲಂಘಿಸಿದ 2,63,344 ವಾಹನಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. 10,083 ವಾಹನಗಳನ್ನು ವಶಕ್ಕೆ ಪಡೆದು ತೆರಿಗೆ ಬಾಕಿ ವಸೂಲಿ ಮಾಡಲಾಗಿದೆ’ ಎಂದು ತಿಳಿಸಿದರು.

‘ಇಲ್ಲಿನ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯು ಕೂಡ ಆಧುನಿಕ ತಂತ್ರಜ್ಞಾನ ಹೊಂದಿದೆ. ಇದು 2,75,000 ವಾಹನಗಳನ್ನು ಒಳಗೊಂಡಿದ್ದು, ₹ 25ರಿಂದ ₹30 ಕೋಟಿ ರಾಜಸ್ವ ಸಂಗ್ರಹದ ಗುರಿ ಹೊಂದಿದೆ. ಈ ಕಚೇರಿಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ, ಮೋಟಾರು ವಾಹನ ನಿರೀಕ್ಷಕರು, ಸಿಬ್ಬಂದಿ, ಹೊರಗುತ್ತಿಗೆ ಸಿಬ್ಬಂದಿ ಸೇರಿ 15 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ವಿವರಿಸಿದರು.

ಜವಳಿ ಸಚಿವ ಶ್ರೀಮಂತ ಪಾಟೀಲ, ಅಥಣಿ ಶಾಸಕ ಮಹೇಶ ಕುಮಠಳ್ಳಿ, ಕುಡಚಿ ಶಾಸಕ ಪಿ. ರಾಜೀವ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT