ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಂಧ್ರದಲ್ಲೂ ಕನ್ನಡ ಮಕ್ಕಳ ಶಿಕ್ಷಣಕ್ಕೆ ಕುತ್ತು: ಸಿಎಂಗೆ ಪತ್ರ ಬರೆದ ಅಶೋಕ ಚಂದರಗಿ

Published 22 ಜೂನ್ 2024, 23:30 IST
Last Updated 22 ಜೂನ್ 2024, 23:30 IST
ಅಕ್ಷರ ಗಾತ್ರ

ಬೆಳಗಾವಿ: ‘ಮಹಾರಾಷ್ಟ್ರದ ಕನ್ನಡ ಶಾಲೆಗಳಲ್ಲಿ ಮರಾಠಿ ಶಿಕ್ಷಕರನ್ನು ನೇಮಿಸಿ, ಅನ್ಯಾಯ ಮಾಡಲಾಗಿದೆ. ಆಂದ್ರ ಪ್ರದೇಶದಲ್ಲೂ ಕನ್ನಡ ಭಾಷೆ ಮತ್ತು ಕಲಿಕೆಗೆ ಕೊಡಲಿ ಪೆಟ್ಟು ನೀಡುವಂತಹ ಶಿಕ್ಷಣ ನೀತಿ  ಅನುಸರಿಸಲು ಆರಂಭಿಸಲಾಗಿದೆ. ಈ ಎರಡೂ ರಾಜ್ಯಗಳಲ್ಲಿನ ಕನ್ನಡ ಮಕ್ಕಳ ಶಿಕ್ಷಣದ ಬಗ್ಗೆ ಸರ್ಕಾರ ಗಮನ ಕೊಡಬೇಕು’ ಎಂದು ಆಗ್ರಹಿಸಿ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಶೋಕ ಚಂದರಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

‘ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಸಾರವಾಗಿ ಆಂಧ್ರಪ್ರದೇಶದ 1,000 ಮಾಧ್ಯಮಿಕ ಶಾಲೆಗಳಲ್ಲಿ ಸಿಬಿಎಸ್‌ಸಿ ಪಠ್ಯಕ್ರಮ ಅನುಷ್ಠಾನಗೊಳಿಸಲು ಅಲ್ಲಿಯ ಸರ್ಕಾರ ನಿರ್ಧರಿಸಿದೆ. ಈ ಪಠ್ಯಕ್ರಮದ ಅನ್ವಯ ಮೊಲನೆಯ ವಿಷಯವನ್ನಾಗಿ ಇಂಗ್ಲಿಷ್ ಮತ್ತು ಸಾಹಿತ್ಯ, ಎರಡನೇ ವಿಷಯವಾಗಿ ತೆಲಗು, ಮೂರನೇ ವಿಷಯವನ್ನಾಗಿ ಗಣಿತ, ನಾಲ್ಕನೇ ವಿಷಯವನ್ನಾಗಿ ವಿಜ್ಞಾನ, ಐದನೇ ವಿಷಯವನ್ನಾಗಿ ಸಮಾಜವಿಜ್ಞಾನ, ಆರನೇ ವಿಷಯವನ್ನಾಗಿ ಮಾಹಿತಿ ತಂತ್ರಜ್ಞಾನ ಅಥವಾ ಕೃತಕ ಬುದ್ಧಿಮತ್ತೆ ವಿಷಯ ಆಯ್ಕೆ ಮಾಡಿಕೊಳ್ಳಬಹುದು. ಈ ಪಠ್ಯಕ್ರಮದ ಪ್ರಕಾರ ಕನ್ನಡ ಮಕ್ಕಳು ಕನ್ನಡ ಆಯ್ಕೆ ಮಾಡಿಕೊಳ್ಳುವ ಅವಕಾಶವೇ ಇಲ್ಲ’ ಎಂದು ಅವರು ತಿಳಿಸಿದ್ದಾರೆ.

‘ಕರ್ನೂಲ್ ಜಿಲ್ಲೆಯ ಹೊಳಗುಂದ ಜಿಲ್ಲಾ ಪರಿಷತ್ ಪ್ರೌಢಶಾಲೆ, ದೊಡ್ಡ ಹರಿವಾಣದ ಜಿಲ್ಲಾ ಪರಿಷತ್ ಪೌಢಶಾಲೆ, ಕೌತಾಳಂ ಜಿಲ್ಲಾ ಪರಿಷತ್ ಪ್ರೌಢಶಾಲೆ ಹಾಗೂ ಬದನಹಾಳು ಜಿಲ್ಲಾ ಪರಿಷತ್ ಪ್ರೌಢಶಾಲೆಗಳಲ್ಲಿ ಕನ್ನಡಿಗರ ಮಕ್ಕಳು ಅನಿವಾರ್ಯವಾಗಿ ಇಂಗ್ಲಿಷ್ ಅಥವಾ ತೆಲಗು ಮಾಧ್ಯಮದಲ್ಲಿ ಕಲಿಯಬೇಕಾಗಿದೆ. ಈವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳಿಗೆ, ಆಂಧ್ರ ಸರ್ಕಾರದ ಆದೇಶ ಕೊಡಲಿ ಪೆಟ್ಟು ಹಾಕಿದೆ. ಭಾಷಾ ಅಲ್ಪಸಂಖ್ಯಾತರಾದ ಕನ್ನಡಿಗರು ಸರ್ಕಾರದ ಆದೇಶದ ವಿರುದ್ಧ ಆಂದೋಲನ ನಡೆಸಿದರೂ ಪ್ರಯೋಜನವಾಗಿಲ್ಲ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

‘ಕರ್ನಾಟದಲ್ಲಿರುವ ತೆಲಗು ಭಾಷಾ ಅಲ್ಪಸಂಖ್ಯಾತರಿಗೆ ಇಲ್ಲಿನ ಸರ್ಕಾರ ಸಾಕಷ್ಟು ಶೈಕ್ಷಣಿಕ ಸೌಲಭ್ಯ ಒದಗಿಸಿದೆ. ಆದರೆ, ಆಂಧ್ರ ಸರ್ಕಾರದ ಕ್ರಮ ಖಂಡನೀಯ’ ಎಂದು ತಿಳಿಸಿದ್ದಾರೆ.

ಪತ್ರಕ್ಕೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಮುಖಂಡರಾದ ಶಿವಪ್ಪ ಶಮರಂತ, ಎಂ.ಜಿ. ಮಕಾನದಾರ, ರಮೇಶ ಸೊಂಟಕ್ಕಿ, ಶಂಕರ ಬಾಗೇವಾಡಿ, ಮಲ್ಲಪ್ಪ ಅಕ್ಷರದ, ಸಲೀಮ ಖತೀಬ, ಸಾಗರ ಬೋರಗಲ್ಲ, ರಾಜು ಕುಸೊಜಿ, ಸುಮಾ ಪಾಟೀಲ, ಜಿನೇಶ ಅಪ್ಪನ್ನವರ, ರಜತ ಅಂಕಲೆ ಸಹಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT