ಮಂಗಳವಾರ, ಮೇ 17, 2022
25 °C
ಕುಶಲಕರ್ಮಿಗಳಿಗೆ ವಿಮಾನನಿಲ್ದಾಣ ವೇದಿಕೆ

ಸ್ಥಳೀಯರಿಗೆ ಸಾಂಬ್ರಾದಲ್ಲಿ ’ಅವಸರ್’

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ‘ಅವಸರ್’ (ಏರ್‌ಪೋರ್ಟ್‌ ಆ್ಯಸ್ ವೆನ್ಯೂ ಫಾರ್ ಸ್ಕಿಲ್ಡ್‌ ಆರ್ಟಿಸನ್ಸ್‌ ಆಫ್‌ ದಿ ರೀಜನ್‌– ಈ ಭಾಗದ ಕುಶಲಕರ್ಮಿಗಳಿಗೆ ವಿಮಾನನಿಲ್ದಾಣ ವೇದಿಕೆ) ಉಪಕ್ರಮಕ್ಕೆ ಇತ್ತೀಚೆಗೆ ಚಾಲನೆ ನೀಡಲಾಗಿದ್ದು, ಸ್ವ ಸಹಾಯ ಗುಂಪುಗಳಿಗೆ ಮಳಿಗೆ ಒದಗಿಸಲಾಗಿದೆ.

ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಅನುಷ್ಠಾನಗೊಳಿಸುತ್ತಿದೆ. ನಿಗದಿಪಡಿದ ಮಳಿಗೆಯಲ್ಲಿ ಸ್ವಸಹಾಯ ಗುಂಪಿನವರು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಬಹುದು ಹಾಗೂ ಮಾರಾಟ ಮಾಡಬಹುದು.

ಇಲ್ಲಿಂದ ಹಲವು ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ ಹಾಗೂ ಹಲವು ಪ್ರಮುಖ ನಗರಗಳಿಂದಲೂ ವಿಮಾನಗಳು ಬರುತ್ತಿವೆ. ಹೀಗಾಗಿ, ಪ್ರಯಾಣಿಕರು ಹಾಗೂ ಅವರನ್ನು ಬರಮಾಡಿಕೊಳ್ಳಲು ಬರುವವರ ಸಂಖ್ಯೆ ಹೆಚ್ಚಾಗಿರುವುದರಿಂದ ‘ಅವಸರ್’ ಕಾರ್ಯಕ್ರಮವು ಗಮನಸೆಳೆದಿದೆ. ಸ್ಥಳೀಯ ಸ್ವ ಸಹಾಯ ಗುಂಪುಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶವನ್ನು ಈ ಮೂಲಕ ಹೊಂದಲಾಗಿದೆ.

ಮೊದಲಿಗೆ:

ಟರ್ಮಿನಲ್‌ ಬಿಲ್ಡಿಂಗ್‌ನ ಆವರಣದಲ್ಲಿ ಔಟ್‌ಲೆಟ್‌ ಸಿದ್ಧಪಡಿಸಲಾಗಿದೆ. ಯಾರು ಬೇಕಾದರೂ ಅಲ್ಲಿಗೆ ಭೇಟಿ ನೀಡಿ ವಸ್ತುಗಳನ್ನು ವೀಕ್ಷಿಸಬಹುದು ಹಾಗೂ ಖರೀದಿಸಬಹುದು. ‘ಅವಸರ್‌’ ಕಾರ್ಯಕ್ರಮ ಅನುಷ್ಠಾನಗೊಂಡಿರುವ ರಾಜ್ಯದ ಮೊದಲ ವಿಮಾನನಿಲ್ದಾಣ ಎನ್ನುವ ಖ್ಯಾತಿಗೆ ಸಾಂಬ್ರಾ ಭಾಜನವಾಗಿದೆ.

ಜಿಲ್ಲೆಯಲ್ಲಿ 16ಸಾವಿರ ಸ್ವಸಹಾಯ ಗುಂಪುಗಳು ನೋಂದಾಯಿಸಿವೆ. ವೈವಿಧ್ಯಮಯ ಉತ್ಪನ್ನಗಳನ್ನು ಸಿದ್ಧಪಡಿಸುತ್ತಿವೆ. ಅವುಗಳಿಗೆ ವಿಮಾನನಿಲ್ದಾಣದಂತಹ ಜಾಗದಲ್ಲಿ ಮಳಿಗೆ ದೊರೆಯುತ್ತಿರುವುದರಿಂದ ಮಾರುಕಟ್ಟೆ ಜಾಲವನ್ನು ವೃದ್ಧಿಸಿಕೊಳ್ಳಲು ಅವಕಾಶವಿದೆ. ಇದಕ್ಕಾಗಿ ಸರದಿ ಮೇಲೆ ಮಳಿಗೆ ಕೊಡುವುದಕ್ಕೆ ನಿರ್ಧರಿಸಲಾಗಿದೆ. ಬೆಳಗಾವಿಯ ವೈಶಿಷ್ಟ್ಯ ಬಿಂಬಿಸುವ ಉತ್ಪನ್ನಗಳಿಗೆ ಬೇಡಿಕೆ ಕಂಡುಬರಲಿದೆ ಎಂದು ಆಶಿಸಲಾಗಿದೆ. ಅಂತಹ ಸಂಘಗಳಿಗೆ ಅವಕಾಶ ಕೊಡುವುದಕ್ಕೆ ಯೋಜಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಪ್ರಾಧಿಕಾರದಿಂದ:

‘ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರದ ಉಪಕ್ರಮ ಇದಾಗಿದೆ. ದೇಶದಾದ್ಯಂತ ಆಯ್ದ ನಗರಗಳಲ್ಲಿ ಮಾತ್ರ ಅವಕಾಶ ಕೊಡಲಾಗಿದೆ. ಇದರಲ್ಲಿ ಸಾಂಬ್ರಾ ಆಯ್ಕೆಯಾಗಿದೆ. 120 ಚ.ಅಡಿಯ ಜಾಗವನ್ನು ಮಳಿಗೆಗೆ ಒದಗಿಸಲಾಗಿದೆ. ಸ್ವಸಹಾಯ ಸಂಘಕ್ಕೆ 15 ದಿನಗಳವರೆಗೆ ನೀಡಲಾಗುವುದು. ಅದರಲ್ಲಿ  ಅವರು ತಾವು ಸಿದ್ಧಪಡಿಸಿದ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಬಹುದು’ ಎಂದು ವಿಮಾನನಿಲ್ದಾಣದ ನಿರ್ದೇಶಕ ರಾಜೇಶ್‌ಕುಮಾರ್ ಮೌರ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘₹ 5,900 ಬಾಡಿಗೆ ಕಟ್ಟಬೇಕು. ವಿದ್ಯುತ್‌ ಮೊದಲಾದ ಸೌಲಭ್ಯಗಳನ್ನು ನಿಲ್ದಾಣದಿಂದ ಒದಗಿಸಲಾಗುವುದು. ಪ್ರಾಧಿಕಾರದ ಜಾಲತಾಣದ ಮೂಲಕ ಸ್ವಸಹಾಯ ಸಂಘಗಳು ಅರ್ಜಿ ಸಲ್ಲಿಸಬಹುದು. ಪ್ರತಿ 15 ದಿನಗಳಿಗೊಮ್ಮೆ ಬೇರೊಂದು ಸ್ವಸಹಾಯ ಸಂಘಕ್ಕೆ ಒದಗಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ನೋಡಲ್ ಏಜೆನ್ಸಿಯಾಗಿದೆ. ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ ಆಯ್ಕೆ ಮಾಡಲಿದೆ. ಮೊದಲಿಗೆ ಶಹಾಪುರದ ಶ್ರೀಕಾಳಿಕಾದೇವಿ ಸ್ತ್ರೀಶಕ್ತಿ ಸಂಘಕ್ಕೆ ನೀಡಲಾಗಿದೆ. ಉತ್ಪನ್ನಗಳ ಪ್ರದರ್ಶನ ಹಾಗೂ ಗ್ರಾಹಕರನ್ನು ಆಕರ್ಷಿಸುವ ಕುರಿತು ಅವರಿಗೆ ತಿಳಿವಳಿಕೆ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಅವರು ₹ 10ಸಾವಿರಕ್ಕೂ ಹೆಚ್ಚಿನ ವ್ಯವಹಾರ ನಡೆಸಿದ್ದಾರೆ. ವಿಶಿಷ್ಟ ವಸ್ತುಗಳಿಗೆ ಮಾರುಕಟ್ಟೆ ಕಂಡುಕೊಳ್ಳಲು ‘ಅವಸರ್’ ಸಹಕಾರಿಯಾಗಲಿದೆ’ ಎನ್ನುತ್ತಾರೆ ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು