ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ- ಕುಡಚಿ ರೈಲ್ವೆ ಮಾರ್ಗ; ಭೂಮಿ ಒದಗಿಸಲು ಸೂಚನೆ

Last Updated 11 ಜುಲೈ 2020, 11:45 IST
ಅಕ್ಷರ ಗಾತ್ರ

ಬೆಳಗಾವಿ: ‘ಬಾಗಲಕೋಟೆ– ಕುಡಚಿ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಬಾಕಿ ಉಳಿದಿರುವ ಭೂಮಿಯನ್ನು ಆದಷ್ಟು ಬೇಗನೇ ಒದಗಿಸಲು ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು’ ಎಂದು ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶನಿವಾರ ಎರಡೂ ಜಿಲ್ಲೆಗಳ ಜನಪ್ರತಿನಿಧಿಗಳು, ರೈಲ್ವೆ ಹಾಗೂ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸುಮಾರು 142 ಕಿ.ಮೀ ಉದ್ದದ ಈ ಯೋಜನೆಗೆ 2010–11ರಲ್ಲಿಯೇ ಅನುಮೋದನೆ ದೊರೆತಿದೆ. ಯೋಜನಾ ವೆಚ್ಚದಲ್ಲಿ ಶೇ 50ರಷ್ಟು ವೆಚ್ಚವನ್ನು ಹಾಗೂ ಇದಕ್ಕೆ ತಗಲುವ ಭೂಮಿಯನ್ನು ಸಂಪೂರ್ಣವಾಗಿ ಉಚಿತವಾಗಿ ರಾಜ್ಯ ಸರ್ಕಾರ ನೀಡಬೇಕಾಗಿದೆ. 2,487 ಎಕರೆ ಭೂಮಿಯ ಅವಶ್ಯಕತೆ ಇತ್ತು, ಇದರಲ್ಲಿ ಇದುವರೆಗೆ 1,301 ಎಕರೆ ಮಾತ್ರ ರಾಜ್ಯ ಸರ್ಕಾರ ಸ್ವಾಧೀನ ಪಡಿಸಿಕೊಂಡಿದೆ. ಇನ್ನುಳಿದ ಭೂ ಸ್ವಾಧೀನ ಪ್ರಕ್ರಿಯೆಯು ಪರಿಸರ ಹಾಗೂ ಇತರ ಕಾರಣಗಳಿಂದಾಗಿ ಅರ್ಧಕ್ಕೆ ನಿಂತುಹೋಗಿದೆ. ಭೂ ಸ್ವಾಧೀನ ವಿಳಂಬವಾಗಿದ್ದರಿಂದ ಕಾಮಗಾರಿಯು ಕುಂಟುತ್ತ ಸಾಗಿದೆ’ ಎಂದರು.

‘ಒಮ್ಮೆ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಂಡರೆ ಡಿಪಿಆರ್ ಮತ್ತು ಹಣ ಬಿಡುಗಡೆ ಪ್ರಕ್ರಿಯೆ ಸುಗಮವಾಗಲಿದೆ. ಆದ್ದರಿಂದ ಬಾಕಿ ಉಳಿದಿರುವ ಭೂಸ್ವಾಧೀನ ಪ್ರಕ್ರಿಯೆ ತಕ್ಷಣ ಆರಂಭಿಸಬೇಕು’ ಎಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

‘ಭೂಮಿ ಗುರುತಿಸಿಕೊಡುವ ಕೆಲಸ ರೈಲ್ವೆ ಇಲಾಖೆಯ ಅಧಿಕಾರಿಗಳು ಹದಿನೈದು ದಿನದೊಳಗೆ ಪೂರ್ಣಗೊಳಿಸಬೇಕು. ಅದಾದ ಬಳಿಕ ಭೂ ಸ್ವಾಧೀನ ಪ್ರಕ್ರಿಯೆಯನ್ನು ಉಭಯ ಜಿಲ್ಲಾಧಿಕಾರಿಗಳು ಆರಂಭಿಸಬೇಕು. ಅರಣ್ಯ ಇಲಾಖೆಗೆ ಸಂಬಂಧಿಸಿದ 41 ಎಕರೆ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿ ಹದಿನೈದು ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎಂದು ಸೂಚನೆ ನೀಡಿದರು.

ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ‘ಲೋಕಾಪುರ ಮತ್ತು ಸುತ್ತಮುತ್ತಲಿನ ಭಾಗದಲ್ಲಿ ಬೇರೆ ಬೇರೆ ಕಾರಣಕ್ಕೆ ಮಾರ್ಗದ ಅಲೈನ್ ಮೆಂಟ್ ಬದಲಾವಣೆ ಮಾಡುತ್ತಿರುವುದು ಕಾಮಗಾರಿ ವಿಳಂಬವಾಗುತ್ತಿದೆ. ಆದ್ದರಿಂದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ಆದ್ಯತೆ ನೀಡಬೇಕು’ ಎಂದು ಹೇಳಿದರು.

ಸಿಎಂ ನೇತೃತ್ವದಲ್ಲಿ ಸಭೆಗೆ ಸಲಹೆ:ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ‘ಭೂಸ್ವಾಧೀನ ಮತ್ತು ಅನುದಾನ ಬಿಡುಗಡೆ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆಯಬೇಕು’ ಎಂದು ಸಲಹೆ ನೀಡಿದರು.

ನೈರುತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಎ.ಕೆ.ಸಿಂಗ್ ಮಾತನಾಡಿ, ‘ಯೋಜನೆ ಈಗಾಗಲೇ ಬಹಳ ವಿಳಂಬ ಆಗಿರುವುದರಿಂದ ಲಭ್ಯವಿರುವ ಅನುದಾನ ಮತ್ತು ಭೂಮಿ ಬಳಸಿಕೊಂಡು ಭೂಸ್ವಾಧೀನ ಪ್ರಕ್ರಿಯೆ ಆರಂಭಿಸುವ ಅಗತ್ಯವಿದೆ’ ಎಂದರು.

ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾತನಾಡಿ, ‘ರೈಲ್ವೆ ಯೋಜನೆಗಳ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿಗಳ ಜೊತೆ ಸದ್ಯದಲ್ಲಿಯೇ ವಿಡಿಯೋ ಸಂವಾದ ನಡೆಯಲಿದ್ದು, ಭೂ ಸ್ವಾಧೀನ ಸೇರಿದಂತೆ ಬಾಕಿ ಉಳಿದಿರುವ ಕಾಮಗಾರಿಗಳ ಕುರಿತು ಅವರ ಗಮನಸೆಳೆದು ಆದಷ್ಟು ಬೇಗನೆ ಕಾಮಗಾರಿ ಚುರುಕುಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಸಭೆಯಲ್ಲಿ ತಿಳಿಸಿದರು.

ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಮಾತನಾಡಿ, ‘ಬಾಗಲಕೋಟೆ-ಖಜ್ಜಿಡೋಣಿವರೆಗೆ 32 ಕಿ.ಮೀ. ಮಾರ್ಗ ಪೂರ್ಣಗೊಂಡಿದೆ’ ಎಂದು ವಿವರಿಸಿದರು.

ಶಾಸಕ ದುರ್ಯೋಧನ ಐಹೊಳೆ ಮಾತನಾಡಿ, ‘ರಾಯಬಾಗ ರೈಲ್ವೆ ನಿಲ್ದಾಣಕ್ಕೆ ಮೇಲ್ಛಾವಣಿ ಹಾಕಿಸಬೇಕು, ನಿರೀಕ್ಷಣಾ ಗೃಹ ನಿರ್ಮಿಸಬೇಕು ಹಾಗೂ ಸ್ಥಗಿತಗೊಂಡಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಒತ್ತಾಯಿಸಿದರು.

ಶಾಸಕ ಸಿದ್ದು ಸವದಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸೇರಿದಂತೆ ಕಂದಾಯ, ಅರಣ್ಯ ಹಾಗೂ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT