ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಹಾಲು ಒಕ್ಕೂಟ BEMUL ಅಧ್ಯಕ್ಷರಾಗಿ ಬಾಲಚಂದ್ರ ಜಾರಕಿಹೊಳಿ ಆಯ್ಕೆ

Published 1 ಏಪ್ರಿಲ್ 2024, 10:31 IST
Last Updated 1 ಏಪ್ರಿಲ್ 2024, 10:31 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ(ಬೆಮುಲ್‌) ಅಧ್ಯಕ್ಷರಾಗಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವಿರೋಧವಾಗಿ ಆಯ್ಕೆಯಾದರು.

ಬೆಮುಲ್‌ ಅಧ್ಯಕ್ಷ ಸ್ಥಾನದ ಆಯ್ಕೆಗೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಒಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ಪ್ರಕ್ರಿಯೆ ನಡೆಯಿತು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, ‘ಬೆಮುಲ್‌ ಆಡಳಿತ ಮಂಡಳಿಯ 16 ಸ್ಥಾನಗಳ ಪೈಕಿ, 13 ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿತ್ತು. 3 ಮಂದಿ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಅಧ್ಯಕ್ಷರ ಆಯ್ಕೆಗೆ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಹಿಂದಿನ ಅಧ್ಯಕ್ಷ ವಿವೇಕರಾವ್‌ ಪಾಟೀಲ ಮತ್ತು ಎಲ್ಲ ಸದಸ್ಯರು ಸರ್ವಾನುಮತದಿಂದ ನನ್ನನ್ನು ಆಯ್ಕೆ ಮಾಡಿದ್ದಾರೆ’ ಎಂದರು.

‘ಆಗಸ್ಟ್‌ನಲ್ಲಿ ನಡೆಯಲಿರುವ ಕರ್ನಾಟಕ ಹಾಲು ಒಕ್ಕೂಟದ(ಕೆಎಂಎಫ್‌) ಅಧ್ಯಕ್ಷ ಸ್ಥಾನದ ಚುನಾವಣೆಗೆ ನಾನು ಸ್ಪರ್ಧಿಸಲು ಬಯಸಿದ್ದೇನೆ. ರಾಜ್ಯ ಸರ್ಕಾರ ಜಾರಿಗೆ ತಂದ ಹೊಸ ಕಾಯ್ದೆ ಪ್ರಕಾರ, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾದವರು ಮಾತ್ರ ಅದಕ್ಕೆ ಸ್ಪರ್ಧಿಸಬಹುದು’ ಎಂದ ಅವರು, ‘ಬೆಮುಲ್‌ ಹಿಂದಿನ ಅಧ್ಯಕ್ಷ ವಿವೇಕರಾವ್ ಪಾಟೀಲ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ, ಕೆಎಂಎಫ್‌ ಅಧ್ಯಕ್ಷನಾಗಲು ನಾನು ಬೆಮುಲ್‌ ಚುಕ್ಕಾಣಿ ಹಿಡಿಯಬೇಕಾಯಿತು. ಮುಂದಿನ ದಿನಗಳಲ್ಲಿ ಯಾವುದೇ ಗೊಂದಲ ಆಗಬಾರದು. ಹಾಗಾಗಿ ವಿವೇಕರಾವ್ ಅವರೊಂದಿಗೆ ಚರ್ಚಿಸಿಯೇ, ಅಧ್ಯಕ್ಷನಾಗಲು ಒಪ್ಪಿಕೊಂಡಿರುವೆ’ ಎಂದು ಹೇಳಿದರು.

‘ಬೆಮುಲ್‌ ಅಭಿವೃದ್ಧಿಗೆ ಎಲ್ಲರೂ ಒಂದಾಗಿ, ಒಗ್ಗಟ್ಟಾಗಿ ದುಡಿಯೋಣ. ಪಕ್ಷಾತೀತವಾಗಿ ಕೆಲಸ ಮಾಡೋಣ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಪ್ರತಿದಿನ ಸುಮಾರು 15 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಈ ಪೈಕಿ, ಬೆಮುಲ್ ಸುಮಾರು 2 ಲಕ್ಷ ಲೀಟರ್‌ ಸಂಗ್ರಹಿಸುತ್ತಿದೆ. ಉಳಿದ ಹಾಲು ಮಹಾರಾಷ್ಟ್ರ ಮತ್ತು ಖಾಸಗಿ ಕಂಪನಿಗಳಿಗೆ ಹೋಗುತ್ತಿದೆ. ಮುಂದಿನ ದಿನಗಳಲ್ಲಿ ಹಾಲಿನ ಸಂಗ್ರಹಣೆ ಪ್ರಮಾಣವನ್ನು ದಿನಕ್ಕೆ 3 ಲಕ್ಷ ಲೀಟರ್‌ಗೆ ಹೆಚ್ಚಿಸಲು ಗುರಿ ಹಾಕಿಕೊಂಡಿದ್ದೇವೆ. ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸಂಸ್ಕರಿಸಿ, ತಯಾರಿಸಲು ₹250 ಕೋಟಿ ವೆಚ್ಚದಲ್ಲಿ ಹೊಸ ತಂತ್ರಜ್ಞಾನವುಳ್ಳ ಮೇಗಾ ಡೇರಿ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಹೈನಗಾರರಿಗೆ ಸಮರ್ಪಕವಾಗಿ ಬಿಲ್ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಬೆಮುಲ್‌ ನಿರ್ದೇಶಕರಾದ ವಿವೇಕರಾವ್ ಪಾಟೀಲ, ಬಾಬು ಕಟ್ಟಿ, ಮಲ್ಲಪ್ಪ ಪಾಟೀಲ, ಕಲ್ಲಪ್ಪ ಗಿರೆಣ್ಣವರ, ಬಸವರಾಜ ಪರನ್ನವರ, ಬಾಬುರಾವ್‌ ವಾಘಮೋಡೆ, ವಿರೂಪಾಕ್ಷಿ ಈಟಿ, ರಾಯಪ್ಪ ಡೂಗ, ಪ್ರಕಾಶ ಅಂಬೋಜಿ, ಸಂಜಯ ಶಿಂತ್ರಿ, ವ್ಯವಸ್ಥಾಪಕ ನಿರ್ದೇಶಕ ಎಂ.ಕೃಷ್ಣಪ್ಪ ಇತರರು ಇದ್ದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವೆ ರಾಜಶ್ರೀ ಜೈನಾಪುರ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT