ಭಾನುವಾರ, ಜೂನ್ 13, 2021
21 °C

ಬಸವ ಜಯಂತಿ ಸರಳ ಆಚರಣೆ: ವಚನಗಳ ಸಂದೇಶ ಅಳವಡಿಸಿಕೊಳ್ಳಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಬಸವ ಜಯಂತಿಯನ್ನು ಕೋವಿಡ್ ಪರಿಸ್ಥಿತಿಯ ಕಾರಣದಿಂದಾಗಿ ಸರಳವಾಗಿ ಶುಕ್ರವಾರ ಆಚರಿಸಲಾಯಿತು.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಇರಲಿಲ್ಲ. ಸಂಸದೆ ಮಂಗಲಾ ಸುರೇಶ ಅಂಗಡಿ, ಶಾಸಕ ಅಭಯ ಪಾಟೀಲ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಲ್ಲಾ ಪಂಚಾಯಿತಿ ಸಿಇಒ ಎಚ್‌.ವಿ. ದರ್ಶನ್‌, ನಗರಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಅವರು ನಗರದ ಗೋವಾವೇಸ್ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಜ್ಯೋತಿ ಬಾವಿಕಟ್ಟಿ ಸೇರಿದಂತೆ ಸಮಾಜದ ಕಲವು ಮುಖಂಡರು ಇದ್ದರು.

ಬಸವ ಜಯಂತಿ ಅಂಗವಾಗಿ, ದಕ್ಷಿಣ ಕಾಶಿ ಎನಿಸಿರುವ ಕಪಿಲೇಶ್ವರ ಮಂದಿರದಲ್ಲಿ ಗರ್ಭ ಗುಡಿಯನ್ನು ಮಾವಿನ ಹಣ್ಣುಗಳಿಂದ ಅಲಂಕರಿಸಿದ್ದು ವಿಶೇಷವಾಗಿತ್ತು. ವಿಶೇಷ ಪೂಜೆ ಸಲ್ಲಿಸಲಾಯಿತು. ಆಡಳಿತ ಮಂಡಳಿಯವರು ಮಾತ್ರ ಪಾಲ್ಗೊಂಡಿದ್ದರು.

ಹಳ್ಳೂರ ವರದಿ: ಹಳ್ಳೂರದಲ್ಲಿ ಬಸವ ಸಮಿತಿ ಆಶ್ರಯದಲ್ಲಿ ಬಸವ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಮುಂಜಾನೆ ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ ನೆರವೇರಿತು. ನಂತರ ಬಸವಣ್ಣನ ತೊಟ್ಟಿಲೋತ್ಸವದಲ್ಲಿ ನಾಮಕರಣ ಮಾಡಲಾಯಿತು. ಗ್ರಾಮದಲ್ಲಿರುವ ಎತ್ತುಗಳಿಗೆ ಬಣ್ಣ ಬಳಿದು ಸಿಂಗರಿಸಿ ಪೂಜಿಸಲಾಯಿತು. ಬಸವೇಶ್ವರ ವೃತ್ತದಲ್ಲಿ ಷಟಸ್ಥಲ ಧ್ವಜಾರೋಹಣವನ್ನು ಮುಖಂಡ ಹಣಮಂತ ತೇರದಾಳ ನೇರವೇರಿಸಿದರು. ಮುಖಂಡರಾದ ಬಸವಣೆಪ್ಪ ಡಬ್ಬನ್ನವರ, ಭೀಮಶಿ ಡಬ್ಬನ್ನವರ, ಮಾರುತಿ ಮಾವರಕರ, ಶಿವಪ್ಪ ಕೌಜಲಗಿ, ಬಸವೇಶ್ವರ ಅರ್ಬನ್ ಕೋ–ಆಪರೇಟಿವ್‌ ಕ್ರೆಡಿಟ್ ಸೊಸೈಟಿಯವರು, ಬಸವ ಸಮಿತಿಯ ಕಾರ್ಯಕರ್ತರು ಇದ್ದರು.

ಕೋವಿಡ್ ಹಿನ್ನೆಲೆಯಲ್ಲಿ ಸತತ 2ನೇ ವರ್ಷವೂ ಅದ್ಧೂರಿ ಉತ್ಸವವನ್ನು ರದ್ದುಗೊಳಿಸಲಾಯಿತು.

ತೆಲಸಂಗ ವರದಿ: ‘ಮಾನವೀಯ ಮೌಲ್ಯಗಳನ್ನು ತಿಳಿಯಲು, ಬದುಕಿಗೆ ಅರ್ಥ ಕಲ್ಪಿಸಲು ಶಿವಾಜಿ ಮಹಾರಾಜರು ಮತ್ತು ಬಸವಣ್ಣನ ವಿಚಾರವನ್ನು ಅಳವಡಿಸಿಕೊಳ್ಳಬೇಕು’ ಎಂದು ಪಿಡಿಒ ಬೀರಪ್ಪ ಕಡಗಂಚಿ ಹೇಳಿದರು.

ತೆಲಸಂಗದ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ಸರಳವಾಗಿ ಆಯೋಜಿಸಿದ್ದ ಶಿವ ಬಸವಜಯಂತಿ ನಿಮಿತ್ತ ಫೋಟೊಗಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

‘ಬಸವಣ್ಣನವರ ಪ್ರತಿ ವಚನಗಳೂ ಜೀವನಕ್ಕೆ ಶಕ್ತಿಯನ್ನು ನೀಡುತ್ತವೆ. ಮಕ್ಕಳಿಗೆ ಬದುಕನ್ನು ಕಲಿಸಲು ವಚನಗಳನ್ನು ಓದಿಸಿ ಅದರ ಅರ್ಥವನ್ನು ತಿಳಿಸಬೇಕು’ ಎಂದು ಸಲಹೆ ನೀಡಿದರು.

ಸಂಗಮೇಶ ಕುಮಠಳ್ಳಿ, ಮಲ್ಲು ಸವನೂರ, ದಾನಪ್ಪ ಕರ್ಣಿ, ರಾಜು ಕುಮಠಳ್ಳಿ, ಹುಸೇನ ಅರಟಾಳ, ರಮೇಶ ಸಿಂದಗಿ, ಮಹೇಶ ಕುಂಬಾರ ಇದ್ದರು.

‘ದಾರಿ ತೋರಿಸುವ ಶಕ್ತಿ’

ತೆಲಸಂಗ: ‘ಬಸವಣ್ಣನವರ ವಚನಗಳು ದಾರಿ ತೋರಿಸುವ ಶಕ್ತಿ ಹೊಂದಿವೆ. ಅವುಗಳ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಬಸವ ಸಮಿತಿಯ ಮುಖಂಡ ಮನೋಹರ ಸಿಂದಗಿ ಹೇಳಿದರು.

ಗ್ರಾಮದ ಬಸವೇಶ್ವರ ವೃತ್ತದಲ್ಲಿ ಬಸವ ಜಯಂತಿ ನಿಮಿತ್ತ ನಡೆದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಾ.ವಿಶ್ವನಾಥ ಗಂಗಾಧರ, ಡಾ.ಬಿ.ಎಸ್. ಕಾಮನ್, ಡಾ.ಎಸ್.ಐ. ಇಂಚಗೇರಿ, ಮಲ್ಲಪ್ಪ ಗಂಗಾಧರ, ಬಸವರಾಜ ರೊಟ್ಟಿ, ದಯಾನಂದ ಗಂಗಾಧರ, ಈರಪ್ಪ ರೊಟ್ಟಿ, ಬಸಲಿಂಗ ಗಂಗಾಧರ, ಮುರಗೇಶ ಚೊಳ್ಳಿ, ದಯಾನಂದ ಕರ್ಣಿ, ದಾನಪ್ಪ ಹತ್ತಿ, ದಾನಪ್ಪ ಸಿಂದಗಿ ಇದ್ದರು.

‘ಬಸವ ತತ್ವದಂತೆ ನಡೆದುಕೊಳ್ಳಬೇಕು’

ತಲ್ಲೂರ: ‘ನಾವೆಲ್ಲರೂ ಬಸವ ತತ್ವದಂತೆ ನಡೆದುಕೊಂಡರೆ ಸುಖ–ಶಾಂತಿ ಇರುತ್ತದೆ’ ಎಂದು ಮುಖಂಡ  ಬಾಬುಗೌಡ ಅಣ್ಣಿಗೇರಿ ಹೇಳಿದರು.

ಇಲ್ಲಿನ ಹಾದಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಬಸವ ಜಯಂತಿ ನಿಮಿತ್ತ ಫೋಟೊಗೆ ಪೂಜೆ ಸಲ್ಲಿಸಿ ಮಾತನಾಡಿದರು.

ಅರ್ಚಕ ಮಹಾಂತೇಶ ಮಠಪತಿ, ಮಹಾರುದ್ರಪ್ಪ ಉಪ್ಪಿನ, ನಿವೃತ್ತ ಶಿಕ್ಷಕ ಎ.ವಿ. ಇಂಗಳೆ, ಕರಬಸಪ್ಪ ಲಕ್ಕಣ್ಣವರ, ಆನಂದ ಲಕ್ಕಣ್ಣವರ, ಮಹಾಂತೇಶ ಉಪ್ಪಿನ, ಮಡಿವಾಳ ಬೆನಕಟ್ಟಿ, ಬಸವರಾಜ ಸರದಾರ, ಮಲ್ಲಿಕಾರ್ಜುನ ಮಠಪತಿ, ಡಿ.ದುಂಡನಕೊಪ್ಪ, ಶಿವಾನಂದ ಯರಗಟ್ಟಿ, ಬಸವರಾಜ ಕಾಶಪ್ಪನವರ, ನವೀನ ದೊಡವಾಡ ಇದ್ದರು. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು