ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುರ್ಚಿಗಿಂತ ಮೀಸಲಾತಿಗೇ ಆದ್ಯತೆ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ
Published 5 ಜುಲೈ 2024, 15:15 IST
Last Updated 5 ಜುಲೈ 2024, 15:15 IST
ಅಕ್ಷರ ಗಾತ್ರ

ಬೆಳಗಾವಿ: ‘ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಯಾರಾಗಬೇಕು ಎಂಬುದರ ಬಗ್ಗೆ ನಾವು ತಲೆ ಕೆಡಿಸಿಕೊಂಡಿಲ್ಲ. ಯಾರೇ ಆದರೂ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಬೇಕು ಎಂಬುದೊಂದೇ ನಮ್ಮ ಒತ್ತಡ’ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

‘ಸ್ವಾಮೀಜಿ ಆದವರು ಸಿ.ಎಂ. ಡಿಸಿಎಂ ಸ್ಥಾನಗಳಿಗೆ ಯಾರು ಏರಬೇಕು ಎಂದು ಆಗ್ರಹ ಮಾಡುವುದು ಬೇಡ. ಒಂದು ವೇಳೆ ನನ್ನ ಅಭಿಪ್ರಾಯ ಯಾರಾದರೂ ಕೇಳಿದರೆ ಉತ್ತರ ಕರ್ನಾಟಕದವರು ಆಗಬೇಕು ಎಂಬ ನಿಲುವು ಪ್ರಕಟಿಸುತ್ತೇನೆ. ಅದರಲ್ಲೂ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಕೊಡುವಂತೆ ಕೇಳಬಹುದು’ ಎಂದು ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಮುಖ್ಯಮಂತ್ರಿ ಆಯ್ಕೆ ಆಯಾ ಆಯಾ ಪಕ್ಷದ ಶಾಸಕರ, ಮುಖಂಡರ ವಿಚಾರಕ್ಕೆ ಬಿಟ್ಟಿದ್ದು. ಧರ್ಮಗುರುಗಳು ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಯಾರನ್ನಾದರೂ ಕುರ್ಚಿಯಿಂದ ಇಳಿಸಲಿ, ಎತ್ತಿ ಕಟ್ಟಲಿ. ನಮಗೆ 2ಎ ಮೀಸಲಾತಿ ಕೊಟ್ಟು ಸರ್ಕಾರ ಪುಣ್ಯ ಕಟ್ಟಿಕೊಳ್ಳಲಿ’ ಎಂದರು.

ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಲಿಂಗಾಯತ ಪ್ರತ್ಯೇಕ ಧರ್ಮ ಎಂದು ನಾನು ಹೇಳುವುದಿಲ್ಲ. 900 ವರ್ಷಗಳ ಹಿಂದೆ ಬಸವಣ್ಣನವರು ಸ್ಥಾಪನೆ ಮಾಡಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ವರದಿ ಶಿಫಾರಸ್ಸು ಮಾಡಿದೆ. ಅದರ ಬಗ್ಗೆ ಹೆಚ್ಚು ಕಾಳಜಿ ಜಾಮದಾರ್ ವಹಿಸಿದ್ದಾರೆ. ನಾನು ನಮ್ಮ ಮನೆಯೊಳಗಿನ ಹೋರಾಟ ಮಾಡುತ್ತಿದ್ದೇನೆ. ಧರ್ಮ ಹೋರಾಟ ಮತ್ತು ಮೀಸಲಾತಿ ಹೋರಾಟ ಬೇರೆಬೇರೆ’ ಎಂದರು.

ಪ್ರತ್ಯೇಕ ಧರ್ಮ ಹೋರಾಟದಿಂದ ನೀವು ವಿಮುಖರಾಗುತ್ತೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀ, ‘ಪಂಚಮಸಾಲಿ ಮೀಸಲಾತಿ ಸಿಕ್ಕ ಬಳಿಕ ಧರ್ಮದ ಹೋರಾಟಕ್ಕೆ ನಾನೇ ನೇತೃತ್ವ ವಹಿಸಿಕೊಳ್ಳುತ್ತೇನೆ. ಮೊದಲ ಆದ್ಯತೆ ಮೀಸಲಾತಿಗೆ. 2018ರ ನಂತರ ಮತ್ತೆ ಧರ್ಮದ ಹೋರಾಟ ಆರಂಭವಾಗಿಲ್ಲ. ಮನೆಯೊಳಗಿನ ಮಕ್ಕಳಿಗೆ ನ್ಯಾಯ ಕೊಡಿಸಿದ ಬಳಿಕ ಊರಿನ ಮಕ್ಕಳಿಗೆ ನ್ಯಾಯ ಕೊಡಿಸಲು ಹೋರಾಟ ಮಾಡುತ್ತೇನೆ‌’ ಎಂದು ಪ್ರತಿಕ್ರಿಯಿಸಿದರು.

ಶಾಸಕರ ಮನೆಗೆ ಪತ್ರ ಚಳವಳಿ

‘ಈಗ ಶಾಸಕರ ಮನೆಗಳಿಗೆ ಹೋಗಿ ಮೀಸಲಾತಿ ಆಗ್ರಹ ಪತ್ರ ನೀಡುವ ಚಳವಳಿ ಆರಂಭಿಸಿದ್ದೇವೆ. ಸಮಾಜದ ಪ್ರತಿಯೊಬ್ಬ ಶಾಸಕರ ಮನೆಗೂ ಈ ಪತ್ರಗಳನ್ನು ತಲುಪಿಸುತ್ತೇವೆ. ಈಗಾಗಲೇ ವಿನಯ್ ಕುಲಕರ್ಣಿಯವರ ಮನೆಗೆ ಹೋಗಿ ಒತ್ತಾಯ ಮಾಡಿದ್ದೇವೆ. ಸಚಿವೆ ಲಕ್ಷ್ಮಿ ಹೆಬ್ಬಾಳಕರ ಶಾಸಕರಾದ ಬಾಬಾಸಾಹೇಬ ಪಾಟೀಲ ರಾಜು ಕಾಗೆ ಗಣೇಶ ಹುಕ್ಕೇರಿ ಅವರ ಮನೆಗೂ ಹೋಗಲಿದ್ದೇವೆ. ಪಕ್ಷಾತೀತವಾಗಿ ಎಲ್ಲರೂ ಸದನದಲ್ಲಿ ಹೋರಾಟ ಮಾಡಲು ಮುಂದಾಗಬೇಕು. ಇದಕ್ಕೆ ಸಮ್ಮತಿಸದಿದ್ದರೆ ಮತ್ತೆ ಹೋರಾಟ ಮಾಡುತ್ತೇವೆ’ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT