ಬುಧವಾರ, ನವೆಂಬರ್ 25, 2020
21 °C
ಬಿಜೆಪಿ ಮುಖಂಡರ ಹೇಳಿಕೆ

ಬಿಡಿಸಿಸಿ ಬ್ಯಾಂಕ್ ಚುನಾವಣೆ: ಬಿಜೆಪಿ ಪ್ರಾಬಲ್ಯ, ಇತರರಿಗೂ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಿಡಿಸಿ) ಇತಿಹಾಸದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅವಿರೋಧ ಆಯ್ಕೆಗೆ ಮುಂದಾಗಿರುವುದು ಇದೇ ಮೊದಲು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಪ್ರಕ್ರಿಯೆ ನಡೆಸುತ್ತಿದ್ದೇವೆ. ನಿರ್ದೇಶಕ ಮಂಡಳಿಯಲ್ಲಿ ಬಿಜೆಪಿ ಪ್ರಾಬಲ್ಯವಿದ್ದರೂ ಬೇರೆ ಪಕ್ಷದವರೂ ಇದ್ದಾರೆ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಶಾಸಕರಾದ ಉಮೇಶ ಕತ್ತಿ, ಮಹಾಂತೇಶ ದೊಡ್ಡಗೌಡರ, ಬಿಡಿಸಿಸಿ ಬ್ಯಾಂಕ್ ಅದ್ಯಕ್ಷ ರಮೇಶ ಕತ್ತಿ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಅವರೊಂದಿಗೆ ಗುರುವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

8 ಅವಿರೋಧ ಆಯ್ಕೆ:

‘ಈಗಾಗಲೇ 7 ತಾಲ್ಲೂಕು ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದಂತೆ, ಖಾನಾಪುರ,  ರಾಮದುರ್ಗ, ಬೈಲಹೊಂಗಲ ಕ್ಷೇತ್ರಗಳಲ್ಲಿ ಹೆಚ್ಚಿನ ಪೈಪೋಟಿ ಇದೆ. ಕಣದಲ್ಲಿರುವವರ ಮನವೊಲಿಸಿ ನಾಮಪತ್ರ ವಾಪಸ್ ಪಡೆಯುವಂತೆ ನೋಡಿಕೊಳ್ಳಲಿದ್ದೇವೆ’ ಎಂದು ತಿಳಿಸಿದರು.

‘ಉಳಿದ ಆರು ಕ್ಷೇತ್ರಗಳಲ್ಲಿ ಟಿಎಪಿಸಿಎಂಎಸ್‌ನ ಒಂದು ಸ್ಥಾನ ಅವಿರೋಧ ಆಯ್ಕೆಯಾಗಿದೆ. ಇತರರನ್ನೂ ಮನವೊಲಿಸುತ್ತೇವೆ’ ಎಂದರು.

‘ಪಕ್ಷದ ವರಿಷ್ಠರ ಸೂಚನೆ ಮೇರೆಗೆ, ಹಾಲಿ ನಿರ್ದೇಶಕರನ್ನು ಮುಂದುವರಿಸಲಾಗುವುದು. ಖಾನಾಪುರದಿಂದ ಸ್ಪರ್ಧಿಸಿರುವ ಅಲ್ಲಿನ ಕಾಂಗ್ರೆಸ್ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್‌ ನಾಮಪತ್ರ ವಾಪಸ್ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿರುವುದನ್ನು ಮಾಧ್ಯಮದಲ್ಲಿ ನೋಡಿದ್ದೇನೆ. ಪಕ್ಷ ಮರೆತು ಅವರನ್ನೂ ಮನವೊಲಿಸುತ್ತೇವೆ. ಅಧ್ಯಕ್ಷರ ಆಯ್ಕೆ ವಿಚಾರದಲ್ಲೂ ಒಗ್ಗಟ್ಟು ಮುಂದುವರಿಯುತ್ತದೆ’ ಎಂದು ತಿಳಿಸಿದರು.

ಕತ್ತಿಗೆ ಮಂತ್ರಿ ಸ್ಥಾನ:

‘ಉಮೇಶ ಕತ್ತಿ ಅವರನ್ನು ಮಂತ್ರಿ ಮಾಡಬೇಕು ಎನ್ನುವುದು ನಮ್ಮ ಬೇಡಿಕೆಯೂ ಆಗಿದೆ’ ಎಂದು ಪ್ರತಿಕ್ರಿಯಿಸಿದರು.

‘ಬಿಡಿಸಿಸಿ ಬ್ಯಾಂಕ್‌ ಲಾಭ ₹ 25 ಕೋಟಿ ಇದೆ. ಅದನ್ನು ₹ 100 ಕೋಟಿ ಲಾಭದತ್ತ ತೆಗೆದುಕೊಂಡು ಹೋಗುವ ಗುರಿ ನಮ್ಮದಾಗಿದೆ. ಜೊತೆಗೆ, ಜಿಲ್ಲೆಯ ಅಭಿವೃದ್ಧಿಗಾಗಿ ಎಲ್ಲ ಮುಖಂಡರೂ ಒಟ್ಟಾಗಿ ಕೆಲಸ ಮಾಡುತ್ತೇವೆ’ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

‘ಬಿಡಿಸಿಸಿ ಬ್ಯಾಂಕ್‌ನ ಹೊಸ ಕಟ್ಟಡದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ನಿಯೋಗ ದೆಹಲಿಗೆ ತೆರಳಲಿದ್ದೇವೆ’ ಎಂದು ಉಮೇಶ ಕತ್ತಿ ತಿಳಿಸಿದರು.

‘ಕಾಗೆ ಹಾರಿಸುವುದಕ್ಕೆ ಬೆಲೆ ಕೊಡಬೇಕಿಲ್ಲ’

‘ಹಲವು ಕಾರಣಗಳಿಂದಾಗಿ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ ಮತ್ತು ಅಭಿವೃದ್ಧಿ ಕಾಮಗಾರಿಗಳು ಆಮೆವೇಗದಲ್ಲಿದೆ ಎನ್ನುವುದನ್ನು ಒಪ್ಪುತ್ತೇನೆ. ಸರ್ಕಾರ ಬಂದ ಮೇಲೆ ನೆರೆ, ಕೋವಿಡ್‌ ಮೊದಲಾದ ಕಂಟಕಗಳು ಎದುರಾಗಿದ್ದು ಇದಕ್ಕೆ ಕಾರಣ. ಈಗ ಪರಿಸ್ಥಿತಿ ಸುಧಾರಿಸುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಆಗ ಜಿಲ್ಲೆಯ ಅಭಿವೃದ್ಧಿಗೆ ಕ್ರಮ ವಹಿಸುತ್ತೇವೆ’ ಎಂದು ಸವದಿ ಹೇಳಿದರು.

‘ಮುಖ್ಯಮಂತ್ರಿ ಬದಲಾವಣೆ ಎನ್ನುವುದು ಶಾಸಕ ಬಸನಗೌಡಪಾಟೀಲ ಯತ್ನಾಳ್ ವೈಯಕ್ತಿಕ ಭಾವನೆಯಷ್ಟೆ. ಅದನ್ನು ವರಿಷ್ಠರು ಗಮನಿಸಿದ್ದಾರೆ. ಅವರ ವಿರುದ್ಧ ಕ್ರಮವಾಗುತ್ತದೆ. ಆದರೆ, ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರೇ ಮುಂದುವರಿಯುತ್ತಾರೆ. ಕೆಲವರು ಸುಮ್ಮನೆ ಕಾಗೆ ಹಾರಿಸುತ್ತಿರುವುದಕ್ಕೆ ಬೆಲೆ ಕೊಡಬೇಕಿಲ್ಲ’ ಎಂದು ಪ್ರತಿಕ್ರಿಯಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.