ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರ್ತಿಯಾಗಿ ಓಡುತ್ತಿದೆ ಸೂಪರ್‌ಫಾಸ್ಟ್‌ ರೈಲು; ಬಸ್‌ಗಳಿಗೆ ಹೊಡೆತ!

ಬೆಳಗಾವಿ– ಬೆಂಗಳೂರು ಸೂಪರ್‌ಫಾಸ್ಟ್‌ ರೈಲು
Last Updated 9 ಜುಲೈ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ: ಕಳೆದ ವಾರವಷ್ಟೇ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಚಾಲನೆ ನೀಡಿದ್ದ ಬೆಳಗಾವಿ– ಬೆಂಗಳೂರು ಸೂಪರ್‌ಫಾಸ್ಟ್‌ ರೈಲಿಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಪ್ರತಿದಿನ ಶೇ 95ಕ್ಕಿಂತಲೂ ಹೆಚ್ಚು ಆಸನಗಳು ಭರ್ತಿಯಾಗಿವೆ. ಇದರಿಂದ ಸಂತುಷ್ಟಗೊಂಡ ರೈಲ್ವೆ ಇಲಾಖೆಯು, ಈ ರೈಲಿನ ಪ್ರಾಯೋಗಿಕ ಸಂಚಾರವನ್ನು ಮೂರು ತಿಂಗಳವರೆಗೆ ವಿಸ್ತರಿಸಿದೆ.

ಈ ಭಾಗದ ಬಹುದಿನಗಳ ಬೇಡಿಕೆಯಾಗಿದ್ದ ಈ ರೈಲು ಸಂಚಾರ ಕಳೆದ ತಿಂಗಳ ಅಂತ್ಯಕ್ಕೆ ಆರಂಭಗೊಂಡಿತ್ತು. ಬೆಳಗಾವಿಯಿಂದ ಪ್ರತಿದಿನ ರಾತ್ರಿ 9 ಗಂಟೆಗೆ ಹೊರಟು, ಧಾರವಾಡ– ಹುಬ್ಬಳ್ಳಿ– ದಾವಣಗೆರೆ– ಅರಸೀಕೆರೆ– ತುಮಕೂರು– ಯಶವಂತಪುರ ಮಾರ್ಗವಾಗಿ ಬೆಂಗಳೂರಿಗೆ ಮರುದಿನ ಬೆಳಿಗ್ಗೆ 7 ಗಂಟೆಗೆ ತಲುಪುತ್ತದೆ. ಅದೇ ರೀತಿ ಬೆಂಗಳೂರಿನಿಂದ ಪ್ರತಿದಿನ ರಾತ್ರಿ 9 ಗಂಟೆಗೆ ಹೊರಟು, ಬೆಳಗಾವಿಗೆ ಮರುದಿನ ಬೆಳಿಗ್ಗೆ 7 ಗಂಟೆಗೆ ತಲುಪುತ್ತದೆ.

ಸುಮಾರು 600 ಕಿ.ಮೀ ದೂರದ ಈ ಪ್ರಯಾಣವನ್ನು ಕೇವಲ 10 ಗಂಟೆಗಳಲ್ಲಿ ಪೂರ್ಣಗೊಳಿಸುತ್ತಿದೆ. ಇದು ಬಸ್ಸಿಗಿಂತಲೂ ಬೇಗ ತಲುಪುವುದರಿಂದ ಹಾಗೂ ಕಡಿಮೆ ದರವಿರುವುದರಿಂದ ಪ್ರಯಾಣಿಕರು ರೈಲಿನತ್ತ ವಾಲಿದ್ದಾರೆ.

ಆರಂಭದಲ್ಲಿ ಕಡಿಮೆ ಇದ್ದ ಪ್ರಯಾಣಿಕರ ಸಂಖ್ಯೆ ದಿನ ಕಳೆದಂತೆ ಹೆಚ್ಚಾಯಿತು. ಈಗ ಶೇ 95ಕ್ಕಿಂತಲೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದಾರೆ. ರೈಲಿನಲ್ಲಿ ಎಸಿ 2 ಟೈರ್‌ (48 ಆಸನ), ಎಸಿ 3 ಟೈರ್‌ (192 ಆಸನ), ಸ್ಲೀಪರ್‌ ಕ್ಲಾಸ್‌ (432 ಆಸನ) ಹಾಗೂ ಜನರಲ್‌ ಬೋಗಿ (180 ಆಸನ) ಸೇರಿದಂತೆ ಒಟ್ಟು 8 ಬೋಗಿಗಳಿವೆ. 852 ಜನರಿಗೆ ಪ್ರಯಾಣಿಸಲು ಅವಕಾಶವಿದೆ. ಜುಲೈ 1ರಂದು ಬೆಳಗಾವಿ– ಬೆಂಗಳೂರು ರೈಲಿನಲ್ಲಿ ಒಟ್ಟು 732 (ಶೇ 85) ಪ್ರಯಾಣಿಕರು ಪ್ರಯಾಣಿಸಿದ್ದರು. ನಂತರದ ದಿನಗಳಲ್ಲಿ ಇದು ಹೆಚ್ಚಾಗಿ, ಜುಲೈ 7ರಂದು ಈ ಸಂಖ್ಯೆ 845ಕ್ಕೆ (ಶೇ 99) ತಲುಪಿತ್ತು.

ಇದೇ ರೀತಿ, ಬೆಂಗಳೂರಿನಿಂದ ಬೆಳಗಾವಿಗೆ ಬರುವ ರೈಲು ಕೂಡ ಬಹುತೇಕ ಭರ್ತಿಯಾಗಿ ಸಂಚರಿಸುತ್ತಿದೆ. ಜುಲೈ 1ರಂದು 852 ಜನರು ಸಂಚರಿಸಿದ್ದರು. ಇದೇ ರೀತಿ ವಾರದುದ್ದಕ್ಕೂ ಭರ್ತಿಯಾಗಿಯೇ ಕಂಡುಬಂದಿದೆ.

ಬೆಳಗಾವಿ, ಹುಬ್ಬಳ್ಳಿಯವರೇ ಹೆಚ್ಚು:

ಈ ರೈಲಿನಲ್ಲಿ ಬೆಳಗಾವಿ ಹಾಗೂ ಹುಬ್ಬಳ್ಳಿಯ ಜನರೇ ಹೆಚ್ಚು ಪ್ರಯಾಣಿಸುತ್ತಿದ್ದಾರೆ. ಬೆಂಗಳೂರಿಗೆ ತೆರಳಲು ಹಾಗೂ ವಾಪಸ್‌ ಬರಲು ಅವರಿಗೆ ಬಹಳಷ್ಟು ಅನುಕೂಲವಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು.

ವಾರಾಂತ್ಯದಲ್ಲಿ ನೂಕುನುಗ್ಗಲು:

ಶನಿವಾರ ಹಾಗೂ ಭಾನುವಾರ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್‌ಗಳು ಸಿಕ್ಕಾಪಟ್ಟೆ ದರ ಹೆಚ್ಚಿಸುತ್ತವೆ. ಬೆಳಗಾವಿ– ಬೆಂಗಳೂರಿಗೆ ₹ 1,500ದಿಂದ ₹ 2,000 ವರೆಗೆ ದರ ಹೆಚ್ಚಿಸುತ್ತವೆ. ಅದಕ್ಕೆ ಪ್ರಯಾಣಿಕರು, ರೈಲಿಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ. ರೈಲಿನಲ್ಲಿ ಎಲ್ಲ ದಿನವೂ ಒಂದೇ ರೀತಿಯ ಪ್ರಯಾಣ ದರವಿದೆ. 2 ಟೈರ್‌ ಎಸಿ ₹ 1,755, 3 ಟೈರ್‌ ಎಸಿ– ₹ 1,235 ಸ್ಲೀಪರ್‌ ಕ್ಲಾಸ್‌ಗೆ ಕೇವಲ ₹ 465 ಇದೆ.

ಬಸ್‌ಗಳಿಗೆ ಹೊಡೆತ:

ಸೂಪರ್‌ಫಾಸ್ಟ್‌ ರೈಲು ಆರಂಭವಾಗಿರುವುದರಿಂದ ಬೆಳಗಾವಿಯಿಂದ ಬೆಂಗಳೂರಿಗೆ ಹೊರಡುವ ಎ.ಸಿ, ಸ್ಲೀಪರ್‌ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ.

‘ಕಡಿಮೆ ಟಿಕೆಟ್‌ ದರ ಇರುವುದರಿಂದ ಹಾಗೂ ಬಸ್‌ಕ್ಕಿಂತ ಕಡಿಮೆ ಅವಧಿಯಲ್ಲಿ ಬೆಂಗಳೂರಿಗೆ ತಲುಪುವುದರಿಂದ ಸಹಜವಾಗಿ ಪ್ರಯಾಣಿಕರು ರೈಲಿನತ್ತ ವಾಲುತ್ತಿರಬಹುದು. ಸಾಮಾನ್ಯವಾಗಿ ಮಳೆಗಾಲದಲ್ಲಿ ಬಸ್‌ನಲ್ಲಿ ಪ್ರಯಾಣಿಸುವವರ ಸಂಖ್ಯೆ ಕಡಿಮೆಯಾಗುತ್ತದೆ. ಈ ಸಲವೂ ಶೇ 10ರಿಂದ 20ರಷ್ಟು ಕಡಿಮೆಯಾಗಿದೆ. ಇದು ಮಳೆಗಾಲದ ಕಾರಣದಿಂದೋ, ರೈಲಿನಿಂದೋ ಎನ್ನುವುದನ್ನು ನೋಡಬೇಕಾಗಿದೆ’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್‌. ಮುಂಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT