ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ: ಮುಂದುವರಿದ ಗಲಾಟೆ, ಗಡಿ ಹದ್ದಿನಲ್ಲೇ ನಿಂತ ಬಸ್‌ಗಳು

ಕರ್ನಾಟಕ– ಮಹಾರಾಷ್ಟ್ರ ಬಸ್‌ ಸಂಚಾರ ಸ್ಥಗಿತ
Last Updated 7 ಡಿಸೆಂಬರ್ 2022, 10:49 IST
ಅಕ್ಷರ ಗಾತ್ರ

ಬೆಳಗಾವಿ: ಗಡಿ ತಂಟೆ ತಾರಕಕ್ಕೇರಿದ ಕಾರಣ ಬುಧವಾರ ಬೆಳಿಗ್ಗೆಯಿಂದ ಕರ್ನಾಟಕ– ಮಹಾರಾಷ್ಟ್ರ ಮಧ್ಯೆ ಬಸ್‌ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಪ್ರತಿ ದಿನ 330 ಬಸ್‌ಗಳು ಮಹಾರಾಷ್ಟ್ರಕ್ಕೆ, 70ಕ್ಕೂ ಹೆಚ್ಚು ಬಸ್‌ಗಳು ಕರ್ನಾಟಕಕ್ಕೆ ಸಂಚಾರ ಮಾಡುತ್ತವೆ. ಸಾವಿರಾರು ಪ್ರಯಾಣಿಕರು ಎರಡೂ ರಾಜ್ಯಗಳ ಮಧ್ಯೆ ಸಂಚರಿಸುತ್ತಾರೆ. ಬಸ್‌ ಸಂಚಾರ ನಿಲ್ಲಿಸಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.

ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಬಳಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದ ಕಾರ್ಯಕರ್ತರು ಮಹಾರಾಷ್ಟ್ರದ ಬಸ್‌ಗಳಿಗೆ ಮಸಿ ಬಳಿದಿದ್ದರು. ಇದರ ಪ್ರತೀಕಾರವಾಗಿ ಮಹಾರಾಷ್ಟ್ರ ಕೊಲ್ಹಾಪುರ, ಸೊಲ್ಲಾಪುರ, ಜತ್ತ, ಸಾಂಗಲಿ ಮುಂತಾದ ಕಡೆಗಳಲ್ಲಿ ಶಿವಸೇನೆ (ಯು) ಹಾಗೂಮಹಾರಾಷ್ಟ್ರ ನವನಿರ್ಮಾ‌ಣ ಸೇನೆ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕದ ಬಸ್‌ಗಳಿಗೆ ಮಸಿ ಬಳಿದು ಧಿಕ್ಕಾರ ಕೂಗಿದರು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ ಹೋಗುವ ಎಲ್ಲ ಬಸ್‌ಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಬೆಳಗಾವಿ ವಿಭಾಗೀಯ ಸಂಚಾರಿ ಅಧಿಕಾರಿ ಕೆ.ಕೆ. ಲಮಾಣಿ ಮಾಹಿತಿ ನೀಡಿದ್ದಾರೆ.

‘ಕೊಲ್ಹಾಪುರ ಗಡಿಯಲ್ಲಿ 150 ಹಾಗೂ ಮೀರಜ್ ಗಡಿಯಲ್ಲಿ ಬಳಿ 100 ಬಸ್‌ಗಳನ್ನು ನಿಲುಗಡೆ ಮಾಡಲಾಗಿದೆ’ ಎಂದು ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗಾಧಿಕಾರಿ ಶಶಿಧರ ತಿಳಿಸಿದರು.

‘ಬಸ್‌ ಓಡಿಸಲು ಭಯ’:

ಮಹಾರಾಷ್ಟ್ರದ ಭಾರಾಮತಿ ಬಸ್‌ ನಿಲ್ದಾಣದಲ್ಲಿ ಹಳಿಯಾಳ ಡಿಪೊಗೆ ಸೇರಿದ ಬಸ್‌ ತಡೆದ ಶಿವಸೇನೆ ಕಾರ್ಯಕರ್ತರು ಧರಣಿ ನಡೆಸಿದರು. ಕರ್ನಾಟಕ ಎಂಬ ಬೋರ್ಡ್‌ ಹಾಗೂ ನಂಬರ್‌ ಪ್ಲೇಟ್‌ಗೆ ಮಸಿ ಬಳಿದರು.

‘20ಕ್ಕೂ ಹೆಚ್ಚು ಜನ ಏಕಾಏಕಿ ಬಸ್ಸಿಗೆ ಮುತ್ತಿಗೆ ಹಾಕಿ ಮಸಿ ಬಳಿದರು. ಜೈ ಶಿವಾಜಿ, ಜೈ ಭವಾನಿ ಎಂದು ಘೋಷಣೆ ಕೂಗಿದರು. ಮಹಾರಾಷ್ಟ್ರದಲ್ಲಿ ಬಸ್‌ ಸಂಚಾರಕ್ಕೆ ಭಯವಾಗುತ್ತಿದೆ’ ಎಂದು ಹಳಿಯಾಳ ಬಸ್‌ ನಿರ್ವಾಹಕ ಭರಮಪ್ಪ ಅವರು ಬೆಳಗಾವಿ ಬಸ್‌ ನಿಲ್ದಾಣದಲ್ಲಿ ಮಾಹಿತಿ ನೀಡಿದರು.

ಕರವೇ ಪ್ರತಿಭಟನೆ, ಬಿಗಿ ಭದ್ರತೆ

ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್‌ಗಳಿಗೆ ಮಸಿ ಬಳಿದ ಘಟನೆ ಖಂಡಿಸಿ ಕರವೇ ಕಾರ್ಯಕರ್ತರು ಇಲ್ಲಿನ ಬಸ್‌ ನಿಲ್ದಾಣದಲ್ಲಿ ಏಕಾಏಕಿ ಪ್ರತಿಭಟನೆ ನಡೆಸಿದರು.

ಮಹಾರಾಷ್ಟ್ರ ಸರ್ಕಾರ, ಶಿವಸೇನೆ ಹಾಗೂ ಎಂಇಎಸ್‌ ವಿರುದ್ಧ ಘೋಷಣೆ ಮೊಳಗಿಸಿದರು. ಮಹಾರಾಷ್ಟ್ರದ ಎಲ್ಲ ಬಸ್‌ಗಳಿಗೂ ಮಸಿ ಬಳಿಯುತ್ತೇವೆ ಎಂದರು.

ಸ್ಥಳಕ್ಕೆ ಧಾವಿಸಿದ ನಗರ ಪೊಲೀಸ್‌ ಕಮಿಷನರ್‌ ಡಾ.ಬೋರಲಿಂಗಯ್ಯ ಬಿಗಿ ಭದ್ರತೆ ಏರ್ಪಡಿಸಿದರು. ಕೆಎಸ್‌ಆರ್‌ಪಿ ತುಕಡಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

₹ 30 ಲಕ್ಷ ಆದಾಯ ಕಡಿತ

ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗದಿಂದ 80 ಹಾಗೂ ಚಿಕ್ಕೋಡಿ ವಿಭಾಗದಿಂದ 250 ಸೇರಿ 330 ಬಸ್‌ಗಳು ದಿನವೂ ಮಹಾರಾಷ್ಟ್ರಕ್ಕೆ ಸಂಚರಿಸುತ್ತವೆ. ಇದರಿಂದ ಬೆಳಗಾವಿ ವಿಭಾಗಕ್ಕೆ ₹ 10 ಲಕ್ಷ, ಚಿಕ್ಕೋಡಿ ವಿಭಾಗಕ್ಕೆ ₹ 20 ಲಕ್ಷ ಸೇರಿ ನಿತ್ಯವೂ ₹ 30 ಲಕ್ಷ ಆದಾಯ ಬರುತ್ತದೆ. ಬಸ್‌ ಸಂಚಾರ ಸ್ಥಗಿತಗೊಂಡಿದ್ದರಿಂದ ಈ ಆದಾಯ ನಿಂತುಹೋಗಿದೆ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ಮಾಹಿತಿ ನೀಡಿದರು.

ಈಗ ಜಾತ್ರೆ, ಮದುವೆ ಹಂಗಾಮು ಆರಂಭವಾಗಿದ್ದರಿಂದ ಹೆಚ್ಚಿನ ಪ್ರಯಾಣಿಕರು ಎರಡೂ ರಾಜ್ಯಗಳ ಮಧ್ಯೆ ಓಡಾಡುತ್ತಾರೆ. ಬಸ್‌ ಬಂದ್ ಆದ ಕಾರಣ ಜನ ತೊಂದರೆ ಅನುಭವಿಸುವಂತಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT