ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ: ಜಾರಕಿಹೊಳಿ 'ಸಹೋದರರ ಸವಾಲ್‌’ಗೆ ವೇದಿಕೆ

Last Updated 23 ನವೆಂಬರ್ 2020, 16:29 IST
ಅಕ್ಷರ ಗಾತ್ರ

ಬೆಳಗಾವಿ: ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಎದುರಾಗಲಿರುವ ಉಪ ಚುನಾವಣೆ ಕಣವು ಜಾರಕಿಹೊಳಿ ಸಹೋದರರ ಸವಾಲ್‌ಗೆ ವೇದಿಕೆಯಾಗುವ ಲಕ್ಷಣಗಳಿವೆ.

ಈ ಸಹೋದರರು ಅವರವರ ಪಕ್ಷ ಗೆಲ್ಲಿಸಿಕೊಳ್ಳಲು ಪ್ರತಿ ಚುನಾವಣೆಗಳಲ್ಲೂ ಪೈಪೋಟಿ ನೀಡುತ್ತಿರುತ್ತಾರೆ. ಈ ಬಾರಿಯೂ ಅವರು ಉಸ್ತುವಾರಿ ವಹಿಸಿಕೊಂಡಿರುವುದರಿಂದ ಕಣ ರಂಗೇರಲಿದೆ. ಅಭ್ಯರ್ಥಿಗಳು ಯಾರೇ ಆದರೂ ನಿಜವಾದ ಹಣಾಹಣಿ ಈ ಸಹೋದರರ ನಡುವೆಯೇ ಇರಲಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಸತೀಶ ಉಸ್ತುವಾರಿ ಘೋಷಣೆ

ಉಪ ಚುನಾವಣೆಯಲ್ಲಿ ಅಂಗಡಿ ಕುಟುಂಬದವರಿಗೇ ಬಿಜೆಪಿ ಟಿಕೆಟ್ ನೀಡಬೇಕು ಎಂದು ಒಂದು ವರ್ಗ ಬಯಸುತ್ತಿದೆ. ಹಲವು ವರ್ಷಗಳಿಂದ ಸಂಘಟನೆಯಲ್ಲಿ ಕೆಲಸ ಮಾಡಿದ ಹಲವರು ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಸತೀಶ ಜಾರಕಿಹೊಳಿ ಸೇರಿ ಹಲವರ ಹೆಸರುಗಳಿವೆ. ಅಷ್ಟೇನೂ ನೆಲೆ ಇಲ್ಲಿಲ್ಲದಿರುವುದರಿಂದ ಜೆಡಿಎಸ್‌ನಿಂದ ಸ್ಪರ್ಧೆ ಅನುಮಾನ ಎನ್ನಲಾಗುತ್ತಿದೆ. ಈ ನಡುವೆ, ಚುನಾವಣೆಯ ಹೊಣೆ ಜಾರಕಿಹೊಳಿ ಸಹೋದರರ ಹೆಗಲಿಗೆ ಬಿದ್ದಿದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್‌ನಿಂದ ಹೊರ ಬಂದು ಬಿಜೆಪಿ ಸೇರಿಸುವ ರಮೇಶ ಜಾರಕಿಹೊಳಿ ಪ್ರಭಾವಿಯಾಗಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಮಹತ್ವದ ಜಲಸಂಪನ್ಮೂಲ ಸಚಿವ ಸ್ಥಾನದೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿಯನ್ನೂ ನೀಡಲಾಗಿದೆ. ಆದ್ದರಿಂದ ಸಹಜವಾಗಿಯೇ, ಉಪ ಚುನಾವಣೆಯಲ್ಲಿ ಅವರಿಗೆ ಹೆಚ್ಚಿನ ಜವಾಬ್ದಾರಿ ಇದೆ. ಅವರೊಂದಿಗೆ ಅರಭಾವಿ ಶಾಸಕ ಮತ್ತು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಇದ್ದಾರೆ. ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ‘ಉಪ ಚುನಾವಣೆ’ ನೇತೃತ್ವವನ್ನು ಆ ಪಕ್ಷ ವಹಿಸಿದೆ. ಅವರಿಗೆ ಗೋಕಾಕದ ಪರಾಜಿತ ಅಭ್ಯರ್ಥಿ ಲಖನ್ ಜಾರಕಿಹೊಳಿ ಬೆಂಬಲವಾಗಿ ನಿಲ್ಲಲಿದ್ದಾರೆ. ಹೀಗಾಗಿ, ಸಹೋದರರ ನಡುವಿನ ಟೀಕೆ–ಪ್ರತಿ ಟೀಕೆಗಳಿಗೆ ಕ್ಷೇತ್ರ ಸಾಕ್ಷಿಯಾಗುವ ಸಾಧ್ಯತೆಗಳಿವೆ.

ಅವರಿಗೆ ಇವರು

ಹೋದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿದ್ದ ರಮೇಶ ಜಾರಕಿಹೊಳಿ, ಬಿಜೆಪಿಯ ಸುರೇಶ ಅಂಗಡಿ ಅವರಿಗೆ ಪರೋಕ್ಷವಾಗಿ ಬೆಂಬಲ ನೀಡಿದ್ದನ್ನು ಈಚೆಗೆ ಬಹಿರಂಗವಾಗಿಯೇ ಹೇಳಿದ್ದರು. ಒಂದೇ ಪಕ್ಷದಲ್ಲಿ ಇದ್ದಾಗಲೂ ಸಹೋದರರಾದ ರಮೇಶ–ಸತೀಶ ನಡುವಿನ ರಾಜಕೀಯ ಬಾಂಧವ್ಯ ಅಷ್ಟಕಷ್ಟೆ ಎನ್ನುವಂತಿತ್ತು. ಗೋಕಾಕ ಕ್ಷೇತ್ರದ ಉಪ ಚುನಾವಣೆಯಲ್ಲಿ ಸಹೋದರರ ಸವಾಲು ತಾರಕಕ್ಕೇರಿತ್ತು. ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿಗೆ ಸತೀಶ ಬೆಂಬಲ ಕೊಟ್ಟಿದ್ದರೆ, ಬಿಜೆಪಿಯ ರಮೇಶಗೆ ಬಾಲಚಂದ್ರ ಸಾಥ್ ನೀಡಿದ್ದರು. ಆ ಚುನಾವಣೆಯಲ್ಲಿ ರಮೇಶ ಗೆದ್ದಿದ್ದಾರೆ.

***

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನಾನು ಸ್ಪರ್ಧಿಸಬೇಕು ಎನ್ನುವ ಬಯಕೆ ಮುಖಂಡರದಾಗಿದೆ.ಪಕ್ಷದ ನಿರ್ಧಾರಕ್ಕೆ ಬದ್ಧವಾಗಿದ್ದೇನೆ.

-ಸತೀಶ ಜಾರಕಿಹೊಳಿ, ಶಾಸಕ

***

ಚುನಾವಣೆಯಲ್ಲಿ ಯಾರಿಗೆ ಟಿಕೆಟ್‌ ಕೊಟ್ಟರೂ ಗೆಲ್ಲಿಸಿಕೊಳ್ಳಲು ಶ್ರಮಿಸುತ್ತೇವೆ. ಪ್ರತಿ ಸ್ಪರ್ಧಿ ಯಾರಾದರೂ ಆಗಲಿ ಆ ಬಗ್ಗೆ ತಲೆಕೆಡಿಸಿಕೊಳ್ಲುವುದಿಲ್ಲ.

-ರಮೇಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT