ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನನ್ನು ನೋಡಿದ ಕೂಡಲೇ ಕೆಲವರಿಗೆ ಖುಷಿಯಾಗುತ್ತದೆ: ರಮೇಶ್‌ಗೆ ಡಿಕೆಶಿ ಟಾಂಗ್

Last Updated 19 ಏಪ್ರಿಲ್ 2022, 11:31 IST
ಅಕ್ಷರ ಗಾತ್ರ

ಬೆಳಗಾವಿ: ನನ್ನನ್ನು ನೋಡಿದ ಕೂಡಲೇ ಕೆಲವರಿಗೆ ಖುಷಿಯಾಗುತ್ತದೆ. ನನ್ನನ್ನು ನೋಡಿದರೆ ಶಕ್ತಿ ಬರುತ್ತದೆ.‌ ರಾಮ, ಹನುಮಾನ್ ಎಂದರೆ ಕೆಲವರಿಗೆ ಶಕ್ತಿ ಬರುವಂತೆ ನನ್ನನ್ನು‌ ನೋಡಿದರೆ ಕೆಲವರಿಗೆ ಶಕ್ತಿ ಬರುತ್ತದೆ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ರಮೇಶ ಜಾರಕಿಹೊಳಿಗೆ ಟಾಂಗ್ ಕೊಟ್ಟಿದ್ದಾರೆ.

ಕೆ.ಎಸ್.‌ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ ಸಂತೋಷ್ ಪಾಟೀಲ ಕುಟುಂಬದವರಿಗೆ ಕೆಪಿಸಿಸಿಯಿಂದ ₹ 11 ಲಕ್ಷ ಪರಿಹಾರ ವಿತರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಸಂತೋಷ್ ‌ವಿರುದ್ಧ ನಡೆದಿರುವ ಷಡ್ಯಂತ್ರ ಹಾಗೂ ಮಹಾನಾಯಕನ ಕುರಿತು ಶೀಘ್ರದಲ್ಲೇ ತಿಳಿಸುತ್ತೇನೆ ಎಂಬ ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮುಹೂರ್ತ, ಸಮಯ ಯಾಕೆ ಬೇಕು? ಅವರು (ರಮೇಶ ಜಾರಕಿಹೊಳಿ) ಬಹಳ ಅನುಭವಸ್ಥರು ಇದ್ದಾರೆ. ಎಲ್ಲೆಲ್ಲಿ ಏನೇನು ಬಿಚ್ಚಬೇಕು ಎನ್ನುವುದನ್ನು ತೋರಿಸಿದ್ದಾರೆ ಎಂದು ಡಿಕೆಶಿ ವ್ಯಂಗ್ಯವಾಡಿದರು.

ರಮೇಶ ಜಾರಕಿಹೊಳಿ ಅವರು‌ ಜಿಲ್ಲಾ ಉಸ್ತುವಾರಿ ಸಚಿವ ಆಗಿದ್ದಾಗಲೇ ಸಂತೋಷ್ ಕೆಲಸ ಮಾಡಿದ್ದಾರೆ. ಆಗ ಕೆಲಸ ಆರಂಭವಾಗಿರುವುದಕ್ಕೆ ದಾಖಲೆ ಇದೆ. ಮುಕ್ತವಾಗಿ ಜನರ ಮುಂದೆ ಎಲ್ಲವೂವನ್ನು ಇಡಲಿ ಎಂದು ಡಿಕೆಶಿ ಸವಾಲು ಹಾಕಿದರು.

ಸಂತೋಷ್ ಪಾಟೀಲ ಚಿಕ್ಕದೊಂದು ಮನೆ ಕಟ್ಟಿ ಕನಸು ಎಂದು ಹೆಸರಿಟ್ಟಿದ್ದ. ಗೃಹ ಪ್ರವೇಶಕ್ಕೆ ಮಾಡಲು ಈಗ ಅವನೇ ಇಲ್ಲ. ಧೈರ್ಯಶಾಲಿಯಾಗಿದ್ದ ಆತ ದುರಂತ ಮಾಡಿಕೊಂಡಿದ್ದು ಚಿಂತೆಗೆ ಕಾರಣವಾಗಿದೆ. ಆ ಕುಟುಂಬಕ್ಕೆ ನ್ಯಾಯ ಒದಗಿಲು ನಾವು ಪ್ರಯತ್ನ ಮಾಡುತ್ತೇವೆ. ಅವರಿಗೆ ಈ ಹಿಂದೆ ತಿಳಿಸಿದಂತೆ ಕೆಪಿಸಿಸಿಯಿಂದ ₹ 11 ಲಕ್ಷ ಪರಿಹಾರ ನೀಡಿದ್ದೇವೆ. ನಮ್ಮ ಹೋರಾಟ ಇಲ್ಲಿಗೆ ಮುಗಿದಿಲ್ಲ. ಮುಂದುವರಿಯಲಿದೆ ಎಂದರು.

ಸಂತೋಷ್ ಪಾಟೀಲ ಮಾಡಿದ್ದ ಕಾಮಗಾರಿಯ ಹಣ ಬರಬೇಕಿದೆ. ಈ ನಡುವೆ ಸಂತೋಷ್ ವಿರುದ್ಧ ಮಸಿ ಬಳಿಯುವ ಪ್ರಯತ್ನ ನಡೆದಿದೆ. ಈಗ ಮನುಷ್ಯತ್ವ, ಮಾನವೀಯತೆ ಇಲ್ಲ ಮುಖ್ಯ ಎಂದರು.

ಸಂತೋಷ್, ಕೇಂದ್ರ ಸಚಿವರನ್ನು ಭೇಟಿಯಾಗಿ ಪತ್ರ ಕೊಟ್ಟಿದ್ದರು. ಕೇಂದ್ರ ಸಚಿವರ ಕಚೇರಿಯಿಂದ ಸ್ವೀಕೃತ ಪತ್ರವೂ ಬಂದಿದೆ. ಮಾಡಿರುವ ಕೆಲಸಕ್ಕೆ ಹಣ ಕೊಡಬೇಕು. ದೂರಿನ ಅನ್ವಯ ಕಾನೂನು ಕ್ರಮ ಕೈಗೊಳ್ಳಬೇಕು. ಸಂತೋಷ್ ಪತ್ನಿಗೆ ಸರ್ಕಾರಿ ನೌಕರಿ ಕೊಡಬೇಕು. ₹ 1 ಕೋಟಿ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.

ಸಂತೋಷ್ ಪ್ರಕರಣದಲ್ಲಿ ಎಫ್‌ಐಆರ್‌ನಲ್ಲಿ‌ ಇರುವ ಆರೋಪಗಳನ್ನು ‌ಈವರೆಗೂ ಬಂಧಿಸಿಲ್ಲ. ವಿಚಾರಣೆಗೆ ಒಳಪಡಿಸಿಲ್ಲ. ದಪ್ಪ ಚರ್ಮದ ಸರ್ಕಾರವಿದು. ಸ್ವತಃ ಮುಖ್ಯಮಂತ್ರಿಯೇ ಆರೋಪಿ‌ ನಂ.1 ಈಶ್ವರಪ್ಪ ಅವರ ತಪ್ಪೇನಿಲ್ಲ ಎಂದು ಪ್ರಮಾಣಪತ್ರ ನೀಡಿದ್ದಾರೆ ಎಂದು ಟೀಕಿಸಿದರು.

ಹಳೆ ಹುಬ್ಬಳ್ಳಿ ಗಲಾಟೆಗೂ ಕಾಂಗ್ರೆಸ್‌ಗೂ ಸಂಬಂಧವಿಲ್ಲ. ಗಲಾಟೆ ಬೇಡ ಎಂದು‌ ನಮ್ಮ ಮುಖಂಡರು ಮನವಿ ಮಾಡಿಕೊಂಡಿದ್ದಾರೆ. ಅವರಿಗೂ ಗಾಯಗಳಾಗಿವೆ. ಆ ಪ್ರಕರಣದಲ್ಲಿ ರಾಜಕಾರಣ ಮಾಡಲು ಹೋಗುವುದಿಲ್ಲ. ಅಲ್ಲಿನ ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಅವರನ್ನು ಅಭಿನಂದಿಸಬೇಕು ಎಂದು ಪ್ರತಿಕ್ರಿಯಿಸಿದರು.

ಸಂತೋಷ್ ಏನೇನು ಒತ್ತೆ ಇಟ್ಟಿದ್ದರು ಎನ್ನುವುದನ್ನು ಈಗ ಹೇಳುವುದಿಲ್ಲ ಎಂದು ಶಿವಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT