ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಸಭಾಂಗಣಕ್ಕೆ ಅತ್ಯಾಧುನಿಕ ಸೌಲಭ್ಯ: ಕೋರೆ

ಬಿ.ಎಸ್‌.ಜೀರಗೆ ನವೀಕೃತ ಸಭಾಂಗಣ ಉದ್ಘಾಟನೆ l 1,200 ಆಸನ ಸಾಮರ್ಥ್ಯ
Published 18 ಮಾರ್ಚ್ 2024, 16:28 IST
Last Updated 18 ಮಾರ್ಚ್ 2024, 16:28 IST
ಅಕ್ಷರ ಗಾತ್ರ

ಬೆಳಗಾವಿ: ‘ಸಾಂಸ್ಕೃತಿಕ ಲೋಕಕ್ಕೆ ಮುಕುಟಮಣಿ ಎಂಬಂತಿರುವ ಅತ್ಯಾಧುನಿಕ ಸಾಂಸ್ಕೃತಿಕ ಸಭಾಂಗಣವನ್ನು ಬೆಳಗಾವಿಗೆ ನೀಡಿದ ಶ್ರೇಯ ಕೆಎಲ್‍ಇ ಸಂಸ್ಥೆಗೆ ಸಲ್ಲುತ್ತದೆ. 1982ರಲ್ಲಿ ಸಣ್ಣ ಪ್ರಮಾಣದಲ್ಲಿ ನಿರ್ಮಾಣಗೊಂಡಿದ್ದ ಜವಾಹರಲಾಲ ನೆಹರೂ ವೈದ್ಯಕೀಯ ಮಹಾವಿದ್ಯಾಲಯದಲ್ಲಿನ ಡಾ.ಬಿ.ಎಸ್.ಜೀರಗೆ ಸಭಾಂಗಣವನ್ನು ಆಯಾಕಾಲಕ್ಕೆ ತಕ್ಕಂತೆ, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನವೀಕರಣಗೊಳಿಸಲಾಗಿದೆ’ ಎಂದು ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.

ನವೀಕರಣಗೊಂಡ 1,200 ಆಸನಗಳ ಸಾಮರ್ಥ್ಯದ ಬಿ.ಎಸ್.ಜೀರಗೆ ಸಭಾಂಗಣವನ್ನು ಸೋಮವಾರ ಜನಸೇವೆಗೆ ಒದಗಿಸಿ ಮಾತನಾಡಿದ ಅವರು, ‘ಅನೇಕ ಐತಿಹಾಸಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಈ ಸಭಾಂಗಣ ವೇದಿಕೆಯಾಗಿರುವುದು ಅಭಿಮಾನದ ಸಂಗತಿ. ನವೀಕರಿಸಿದ ಸಭಾಂಗಣ ಅತ್ಯಾಧುನಿಕ, ಹವಾನಿಯಂತ್ರಿತ ಸೌಲಭ್ಯ ಹೊಂದಿದೆ. ಎಲ್‌ಇಡಿ ಪರದೆಯೊಂದಿಗೆ, ಅತ್ಯುನ್ನತ ಬೆಳಕಿನ ವ್ಯವಸ್ಥೆ ಒಳಗೊಂಡಿದೆ’ ಎಂದರು.

‘ಹುಬ್ಬಳ್ಳಿಯಲ್ಲೂ ಸುಸಜ್ಜಿತವಾದ 1 ಸಾವಿರ ಹಾಸಿಗೆಗಳ ಸಾಮರ್ಥ್ಯದ ಕ್ಯಾನ್ಸರ್‌ ಆಸ್ಪತ್ರೆ ಹಾಗೂ ವೈದ್ಯಕೀಯ ಮಹಾವಿದ್ಯಾಲಯ ನಿರ್ಮಾಣಗೊಳ್ಳುತ್ತಿದೆ. ಅಂತರರಾಷ್ಟ್ರೀಯ ಮಟ್ಟದ ಬೋಧನಾ ಕೊಠಡಿ ನಿರ್ಮಿಸುವ ಜತೆಗೆ, ಎಲ್ಲ ವಿಭಾಗಗಳನ್ನು ನವೀಕರಿಸಲಾಗಿದೆ. ಈಗಾಗಲೇ ಎಲ್ಲ ಕಾಮಗಾರಿ ಮುಗಿದಿದ್ದು, ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ಇನ್ನೆರಡು ತಿಂಗಳಲ್ಲಿ ಈ ಆಸ್ಪತ್ರೆಯನ್ನು ಜನರ ಸೇವೆಗೆ ಅರ್ಪಿಸಲಾಗುವುದು’ ಎಂದು ಹೇಳಿದರು.

ಕೆಎಲ್‌ಇ ಮಹಿಳಾ ಸ್ವಶಕ್ತಿ ಸಂಘಗಳ ಅಧ್ಯಕ್ಷೆ ಆಶಾತಾಯಿ ಕೋರೆ, ಕೆಎಲ್‌ಇ ಅಕಾಡೆಮಿ ಆಫ್‌ ಹೈಯರ್‌ ಎಜ್ಯುಕೇಷನ್‌ ಆ್ಯಂಡ್‌ ರಿಸರ್ಚ್‌ನ ಕುಲಪತಿ ಡಾ.ನಿತಿನ ಗಂಗಾನೆ, ಕುಲಸಚಿವ ಡಾ.ಎಂ.ಎಸ್.ಗಣಾಚಾರಿ, ಯುಎಸ್‍ಎಂ ಕೆಎಲ್‍ಇ ನಿರ್ದೇಶಕ ಡಾ.ಎಚ್.ಬಿ.ರಾಜಶೇಖರ, ಕೆಎಲ್‍ಇ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಡಾ.ಅವಿನಾಶ ಕವಿ ನಿರೂಪಿಸಿದರು.

ಈ ಸಭಾಂಗಣದಲ್ಲಿ ಏನೇನಿದೆ?: ‘ನವೀಕೃತ ಸಭಾಂಗಣದಲ್ಲಿ ಬೃಹತ್‌ ವೇದಿಕೆ ಅತಿಥಿಗಳಿಗಾಗಿ ವಿಶೇಷ ಆಸನ ಕಾರ್ಯಕ್ರಮ ವೀಕ್ಷಣೆಗಾಗಿ ಬಾಲ್ಕನಿಯಲ್ಲಿ ಆಸನ ವ್ಯವಸ್ಥೆ ಪ್ರೊಜೆಕ್ಟರ್‌ಗಳು ಪರದೆಗಳು ಗ್ರೀನ್‌ ರೂಮ್‌ ಇವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ರೂಪುಗೊಂಡಿರುವ ಜೀರಗೆ ಸಭಾಂಗಣ ಎಲ್ಲರ ಮನಸೆಳೆಯುವಂತಿದೆ’ ಎಂದು ಪ್ರಭಾಕರ ಕೋರೆ ಹೇಳಿದರು. ‘ಈ ಸಭಾಂಗಣದ ಮೇಲೆ ನಿರ್ಮಿಸಿದ 600 ಆಸನಗಳ ಸಾಮರ್ಥ್ಯದ ಡಾ.ಎಚ್.ಬಿ.ರಾಜಶೇಖರ ಹಾಲ್ 300 ಆಸನಗಳ ಸಾಮರ್ಥ್ಯದ ಡಾ.ಬಿ.ಎಸ್.ಕೊಡಕಣಿ ಹಾಲ್ 150 ಆಸನಗಳ ಸಾಮರ್ಥ್ಯದ ಡಾ.ವಿ.ಡಿ.ಪಾಟೀಲ ಹಾಲ್‍ ಆಕರ್ಷಕವಾಗಿದ್ದು ಈಗಾಗಲೇ ಕಾರ್ಯಾರಂಭ ಮಾಡಿವೆ. ಬೆಳಗಾವಿಯಲ್ಲಿ ಒಂದೇ ಆವರಣದಲ್ಲಿ ನಾಲ್ಕು ಸುಸಜ್ಜಿತ ಸಾಂಸ್ಕೃತಿಕ ಭವನಗಳು ರೂಪುಗೊಂಡಿರುವುದು ಒಂದು ದಾಖಲೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT