ಬುಧವಾರ, ಜೂನ್ 23, 2021
21 °C
ಅಗತ್ಯವಸ್ತು, ಔಷಧಗಳನ್ನು ತಲುಪಿಸುವ ಕಾರ್ಯ

ಬೆಳಗಾವಿ: ಸಂಕಷ್ಟದಲ್ಲಿರುವವರ ನೆರವಿಗೆ ಸೈಕ್ಲಿಸ್ಟ್‌ಗಳು

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕೋವಿಡ್ ಕರ್ಫ್ಯೂ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ನೆರವಾಗಲು ಇಲ್ಲಿನ ಸೈಕ್ಲಿಸ್ಟ್‌ಗಳು ಒಗ್ಗೂಡಿದ್ದಾರೆ.

ನಿತ್ಯವೂ ಸೈಕ್ಲಿಂಗ್ ಅಭ್ಯಾಸ ಮಾಡುವ ಸಮಾನ ಮನಸ್ಕ ಅಥವಾ ಅಭಿರುಚಿಯವರು ಸೇರಿಕೊಂಡು ತಂಡ ಕಟ್ಟಿಕೊಂಡಿದ್ದಾರೆ. ತಮ್ಮ ಶ್ರಮವನ್ನು ಜನರ ನೆರವಿಗೆ ಬಳಸುವುದಕ್ಕಾಗಿ ಮುಂದಾಗಿದ್ದಾರೆ.

‘ನಾವು ಪರಿಹಾರದ ಭಾಗವಾಗಿದ್ದೇವೆ, ಸಮಸ್ಯೆಯ ಭಾಗವಲ್ಲ’ ಎನ್ನುವ ಘೋಷವಾಕ್ಯದೊಂದಿಗೆ ಸಹಾಯ ಮಾಡಲು ಕೆಲವು ದಿನಗಳಿಂದೀಚೆಗೆ ಕಾರ್ಯಾರಂಭಿಸಿದ್ದಾರೆ. ಲಾಕ್‌ಡೌನ್‌ನಿಂದಾಗಿ ಅಗತ್ಯ ವಸ್ತುಗಳು ಅಥವಾ ಔಷಧ ತರುವುದಕ್ಕೆ ಸಾಧ್ಯವಾಗದವರನ್ನು ತಲುಪಿ ಸ್ವತಃ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.

‘ರಿಲೀಫ್‌ ರೈಡರ್ಸ್‌’ ಎನ್ನುವ ತಂಡವಿದು. ವೃದ್ಧರು, ಹೊರಗಡೆ ಹೋಗಿ ಅಗತ್ಯ ವಸ್ತುಗಳನ್ನು ತರಲು ಮನೆಯಲ್ಲಿ ಯಾರೂ ಇಲ್ಲದವರಿಗೆ ಬೆಳಿಗ್ಗೆ 6ರಿಂದ 10ಗಂಟೆಯವರೆಗೆ ಮನೆ ಬಾಗಿಲಿಗೇ ಉಚಿತ ಸೇವೆಯನ್ನು ಈ ತಂಡದವರು ಒದಗಿಸುತ್ತಾರೆ.

ಕರೆ ಮಾಡಿ ತಿಳಿಸಬೇಕು:

ಅಗತ್ಯ ವಸ್ತು (ತರಕಾರಿ, ಕಿರಾಣಿ ಇತ್ಯಾದಿ), ಔಷಧದ ಪಟ್ಟಿಯನ್ನು ಮೊಬೈಲ್‌ ಫೋನ್‌ಗೆ ಕರೆ ಮಾಡಿ ತಿಳಿಸಿದರೆ ಸಾಕು, ಈ ತಂಡದ ಸದಸ್ಯರು ತಮ್ಮದೇ ಹಣದಲ್ಲಿ ಖರೀದಿಸಿ ಕೇಳಿದವರ ಮನೆಗಳಿಗೆ ತಲುಪಿಸುತ್ತಾರೆ. ಔಷಧಿಗಳನ್ನು ತಂದುಕೊಡುವುದಕ್ಕೆ ವೈದ್ಯರು ಬರೆದುಕೊಟ್ಟ ಚೀಟಿಯನ್ನು ಕಡ್ಡಾಯ ಅವರಿಗೆ ಕಳುಹಿಸಿಕೊಡಬೇಕಾಗುತ್ತದೆ. ತಲುಪಿಸಿದ ನಂತರ ಹಣ ಕೊಡಬೇಕು.

‌‘ಬೆಂಗಳೂರಿನ ಸತ್ಯ ಎನ್ನುವವರು ಅಲ್ಲಿ ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲಿ ಈ ಉಪಕ್ರಮವನ್ನು ಆರಂಭಿಸಿದ್ದರು. ಅದನ್ನು ಕೆಲವು ಸಮಾನ ಮನಸ್ಕರು ಹುಬ್ಬಳ್ಳಿ, ಮುಂಬೈ ಹಾಗೂ ಹೈದರಾಬಾದ್ ಮೊದಲಾದ ಕಡೆಗಳಲ್ಲಿ ಶುರು ಮಾಡಿದ್ದಾರೆ. ಅದೇ ಮಾದರಿಯಲ್ಲಿ ಇಲ್ಲೂ ಪ್ರಾರಂಭಿಸಿದ್ದೇವೆ’ ಎಂದು ತಂಡದ ಸದಸ್ಯ ಹಾಗೂ ವೃತ್ತಿಯಲ್ಲಿ ಅಕೌಂಟೆಂಟ್ ಆಗಿರುವ ರಾಮು ಮ. ಹನಗಂಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸಮೀಪದಲ್ಲಿರುವವರು:

‘ತಂಡದಲ್ಲೀಗ 20 ಮಂದಿ ಸೈಕ್ಲಿಸ್ಟ್‌ಗಳು ಸೇರಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಮೊಬೈಲ್‌ ಫೋನ್‌ಗಳನ್ನು ಹಂಚಿಕೊಂಡಿದ್ದೇವೆ. ನಮ್ಮ ವಾಟ್ಸ್‌ ಆ್ಯಪ್‌ಗೆ ಬರುವ ಬೇಡಿಕೆಯನ್ನು ಸಮೀಪದ ನಿವಾಸಿಯಾಗಿರುವ ತಂಡದ ಸದಸ್ಯರೊಬ್ಬರಿಗೆ ಕಳುಹಿಸುತ್ತೇವೆ. ಅವರು ತಮ್ಮ ಸಮೀಪದ ಅಂಗಡಿಗಳಿಂದ ಖರೀದಿಸಿ, ಕೋರಿದವರ ಮನೆಗೆ ತಲುಪಿಸುತ್ತಾರೆ’ ಎಂದು ಮಾಹಿತಿ ನೀಡಿದರು.

‘ಯಾವುದೇ ಸಂದರ್ಭದಲ್ಲಿ ತುರ್ತಾಗಿ ಔಷಧಿಗಳು ಬೇಕಾಗಿವೆ ಎಂದು ಯಾರಾದರೂ ಕೇಳಿದರೆ, ಕೂಡಲೇ ತಲುಪಿಸಲಿದ್ದೇವೆ. ನಮ್ಮ ಸೈಕ್ಲಿಸ್ಟ್‌ಗಳು ನಗರದ  ಬೇರೆ ಬೇರೆ ಕಡೆಗಳಲ್ಲಿ ಇದ್ದಾರೆ. ನಮಗೆ ಕರೆ ಬಂದಾಗ ಆ ಸ್ಥಳದಲ್ಲಿ ನಮ್ಮ ಸೈಕ್ಲಿಸ್ಟ್‌ಗಳನ್ನು ಗುರುತಿಸಿ ಸಹಾಯ ಮಾಡುವಂತೆ ತಿಳಿಸುತ್ತೇವೆ. ನಾವು ವಸ್ತು  ಕೊಟ್ಟ ನಂತರವಷ್ಟೆ ಪಡೆದವರು ಹಣ ಕೊಡಬೇಕು. ಈ ಸೇವೆ ಉಚಿತವಾಗಿ ಮಾಡುತ್ತೇವೆ. ತೀರಾ ದುರ್ಬಲರಿದ್ದರೆ ಅವರಿಗೆ ದಾನಿಗಳ ಮೂಲಕ ಆರ್ಥಿಕ ನೆರವು (ಚಿಕ್ಕ ಪ್ರಮಾಣದ್ದು) ಕೊಡಿಸುವ ಪ್ರಯತ್ನವನ್ನೂ ಮಾಡಬಹುದು’ ಎನ್ನುತ್ತಾರೆ ಅವರು. ಸಂಪರ್ಕಕ್ಕೆ ಮೊ: 9844758834 (ರಾಮು) ಅಥವಾ 9845154737 (ರೋಹನ).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು