ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಡಿಸಿಸಿ ಬ್ಯಾಂಕ್‌ನ ಮೂರು ಕ್ಷೇತ್ರಗಳಿಗೆ ಚುನಾವಣೆ ನಿಗದಿ

ಅವಿರೋಧ ಆಯ್ಕೆಗೆ ಬಿಜೆಪಿ ನಾಯಕರ ಯತ್ನ ವಿಫಲ
Last Updated 31 ಅಕ್ಟೋಬರ್ 2020, 12:48 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಡಿಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ 16 ಸ್ಥಾನಗಳ ಪೈಕಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಉಳಿದ ಮೂರು ಕ್ಷೇತ್ರಗಳಿಗೆ ನ. 6ರಂದು ಮತದಾನ ನಡೆಯಲಿದೆ. ಎಲ್ಲ ಸ್ಥಾನಗಳಿಗೂ ಅವಿರೋಧ ಆಯ್ಕೆ ಮಾಡಬೇಕೆಂದು ಬಿಜೆಪಿ ಮುಖಂಡರು ಕಸರತ್ತು ನಡೆಸಿದ್ದರಾದರೂ ಸಂಪೂರ್ಣ ಸಫಲವಾಗಲು ಸಾಧ್ಯವಾಗಲಿಲ್ಲ.

ತಾಲ್ಲೂಕು ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಖಾನಾಪುರ, ರಾಮದುರ್ಗ ಮತ್ತು ನೇಕಾರರ ಸಹಕಾರ ಸಂಘಗಳ ಪ್ರತಿನಿಧಿ ಆಯ್ಕೆಗೆ ಚುನಾವಣೆ ನಡೆಯಲಿದೆ. ಖಾನಾಪುರದಿಂದ ಮಾಜಿ ಶಾಸಕ ಅರವಿಂದ ಪಾಟೀಲ, ಹಾಲಿ ನಿರ್ದೇಶಕ ಅರವಿಂದ ಪಾಟೀಲ ಮತ್ತು ಹಾಲಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್‌ ನಡುವೆ ಸ್ಪರ್ಧೆ ನಡೆಯಲಿದೆ.

ರಾಮದುರ್ಗದಿಂದ ಭೀಮಪ್ಪ ಬೆಳವಣಿಕಿ ಮತ್ತು ಶ್ರೀಕಾಂತ ಡವಣ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ನೇಕಾರರ ಕ್ಷೇತ್ರದಿಂದ ಗಜಾನನ ಕ್ವಳ್ಳಿ ಮತ್ತು ಕೃಷ್ಣ ಅನಗೋಳಕರ ನಡುವೆ ಪೈಪೋಟಿ ಕಂಡುಬಂದಿದೆ.

ಇಲ್ಲಿನ ಬಿ.ಕೆ. ಮಾಡೆಲ್ ಪ್ರೌಢಶಾಲೆಯಲ್ಲಿ ನ. 6ರಂದು ಮತದಾನ ನಡೆಯಲಿದ್ದು, ಅಂದೇ ಫಲಿತಾಂಶ ಘೋಷಣೆಯಾಗಲಿದೆ.

ಪ್ರವೇಶಿಸಿದ ಜಾರಕಿಹೊಳಿ

ನಾಮಪತ್ರ ವಾಪಸ್ ಪಡೆಯಲು ಅ.31 ಕೊನೆಯ ದಿನವಾಗಿತ್ತು. ಬ್ಯಾಂಕ್‌ಗೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ವಿರೋಧಿ ಬಣದವರಿಂದ ನಾಮಪತ್ರ ವಾಪಸ್ ತೆಗೆಸುವುದು ಸಾಧ್ಯವಾಗಲಿಲ್ಲ. ಅಲ್ಲದೇ, ಖಾನಾಪುರ ಕಾಂಗ್ರೆಸ್ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್‌ ವಿರುದ್ಧ ಕೆಲಸ ಮಾಡುವುದಾಗಿ ಘೋಷಿಸಿದರು. ನೇಕಾರರ ಸಹಕಾರ ಸಂಘಗಳ ಕ್ಷೇತ್ರದಿಂದ ಕಣದಲ್ಲಿರುವ ಜಿಲ್ಲಾ ಪಂಚಾಯಿತಿ ಕಾಂಗ್ರೆಸ್ ಸದಸ್ಯ ಕೃಷ್ಣ ಅನಗೋಳ್ಕರ ಅವರನ್ನು ಸಂಪರ್ಕಿಸುವುದು ಈ ನಾಯಕರಿಗೆ ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಇವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಬೆಂಬಲವಾಗಿ ನಿಂತಿದ್ದಾರೆ.

ಈ ಬ್ಯಾಂಕ್ ಇತಿಹಾಸದಲ್ಲಿ ಮಹಿಳೆಯೊಬ್ಬರು (ಅಂಜಲಿ) ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವುದು ಇದೇ ಮೊದಲು.

ನಾಮಪತ್ರ ವಾಪಸ್ ಪಡೆದವರು

ಬೈಲಹೊಂಗಲತಾಲ್ಲೂಕು ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಸವನಗೌಡ ಪಾಟೀಲ ಮತ್ತು ಆನಂದ ಜಕಾತಿ ನಾಮಪತ್ರ ವಾಪಸ್ ಪಡೆಯುವಂತೆ ಮಾಡುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾದರು. ಹೀಗಾಗಿ, ಅವಿರೋಧ ಆಯ್ಕೆಯಾಯಿತು. ಸವದಿ ಆಪ್ತ ಹಾಗೂ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಮತ್ತೊಂದು ಅವಧಿಗೆ ಆಯ್ಕೆಯಾದರು.

‘ಖಾನಾಪುರದಿಂದ ರಾಜಾರಾಮ ಸಿದ್ದಾನಿ, ಬೆಳಗಾವಿಯಿಂದ ಪ್ರತೀಕ ಅಂಕಲಗಿ, ಪಟ್ಟಣ ಸಹಕಾರ ಬ್ಯಾಂಕ್‌ಗಳ ಕ್ಷೇತ್ರದಿಂದ ಗುರಪ್ಪ ಮೆಟಗುಡ್ಡ, ನೇಕಾರರ ಸಹಕಾರ ಸಂಘಗಳ ಕ್ಷೇತ್ರದಿಂದ ಕೆಂಪಣ್ಣ ದುಡ್ಡಗೋಳ, ನಾಗೇಶ ಕುಳ್ಳೊಳ್ಳಿ, ಭೀರಪ್ಪ ಮಾಳಿಂಗೆ, ಸಿದ್ದಾರೂಢ ರೆಬ್ಬೆನ್ನವರ ಮತ್ತು ಕೈಗಾರಿಕಾ ಸಹಕಾರ ಸಂಘಗಳ ಕ್ಷೇತ್ರದಿಂದ ಗಿರೀಶ ಢವಳೇಶ್ವರ ನಾಮಪತ್ರ ವಾಪಸ್ ಪಡದಿದ್ದಾರೆ’ ಎಂಧು ಚುನಾವಣಾಧಿಕಾರಿ ಸಯೀದಾ ಅಫ್ರೀನಬಾನು ಬಳ್ಳಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT