ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಸಮಗ್ರ ಬೇಸಾಯದಲ್ಲಿ ಕೃಷಿ: ಉತ್ತಮ ಆದಾಯ ಗಳಿಸುತ್ತಿರುವ ರೈತ

Published 11 ಆಗಸ್ಟ್ 2023, 8:29 IST
Last Updated 11 ಆಗಸ್ಟ್ 2023, 8:29 IST
ಅಕ್ಷರ ಗಾತ್ರ

ಇಮಾಮ್‌ಹುಸೇನ್‌ ಗೂಡುನವರ

ಬೆಳಗಾವಿ: ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು, ಯೋಜನಾಬದ್ಧವಾಗಿ ಕೃಷಿ ಮಾಡಿದರೆ ಅತ್ಯಲ್ಪ ಭೂಮಿಯಲ್ಲೂ ಉತ್ತಮ ಆದಾಯ ಗಳಿಸಬಹುದು. ಇಲ್ಲಿನ ಕಣಬರ್ಗಿಯ ಕೃಷಿಕ ನಾಗೇಶ ಗಡ್ಡೆ ಅವರೇ ಇದಕ್ಕೆ ಉತ್ತಮ ಉದಾಹರಣೆ.

1 ಎಕರೆ, 8 ಗುಂಟೆ ಜಮೀನು ಹೊಂದಿದ ಅವರು, ಬಹುಬೆಳೆ ಪದ್ಧತಿ ಅಳವಡಿಸಿಕೊಂಡು ಲಾಭದಾಯಕವಾಗಿ ಕೃಷಿ ಮಾಡುತ್ತಿದ್ದಾರೆ. ಸಮಗ್ರ ಬೇಸಾಯದಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ.

ತರಹೇವಾರಿ ಮರಗಳು: ನಾಗೇಶ ಅವರ ವಯಸ್ಸು 75 ವರ್ಷ. ಆದರೂ, ನಾಲ್ವರು ಕಾರ್ಮಿಕರೊಂದಿಗೆ ಕೃಷಿ ಕಾಯಕದಲ್ಲಿ ನಿರತವಾಗಿದ್ದಾರೆ. ತೆಂಗು, ಬಾಳೆ, ಮಾವು, ಹಲಸು, ನೇರಳೆ, ಸೀತಾಫಲ, ಪೇರು ಸೇರಿದಂತೆ ಹಲವು ಹಣ್ಣುಗಳ ಸುಮಾರು 200 ಮರ ಬೆಳೆಸಿದ್ದಾರೆ. ಇದರೊಂದಿಗೆ ಮನೆಬಳಕೆಗೆ ಅಗತ್ಯವಿರುವ ವಿವಿಧ ತರಕಾರಿಗಳು, ಹಸಿಶುಂಠಿ, ಅರಿಶಿಣ  ಬೆಳೆಯುತ್ತಿದ್ದಾರೆ. ಹಣ್ಣುಗಳ ಮಾರಾಟದಿಂದ ವಾರ್ಷಿಕ ₹3 ಲಕ್ಷಕ್ಕೂ ಅಧಿಕ ಆದಾಯ ಗಳಿಸುತ್ತಿದ್ದಾರೆ.

ತಮ್ಮ ಜಮೀನಿನಲ್ಲೇ ನಿರ್ಮಿಸಿದ ಶೆಡ್‌ನಲ್ಲಿ 15 ಕುರಿ, 10 ಎಮ್ಮೆ, ಐದು ಆಕಳು ಸಾಕಿದ್ದಾರೆ. ಅವುಗಳ ಸೆಗಣಿ ಬಳಸಿಕೊಂಡು, ಎರೆಹುಳು ಗೊಬ್ಬರ ತಯಾರಿಸುತ್ತಿದ್ದಾರೆ.

ರಾಸಾಯನಿಕ ಬಳಸುವುದಿಲ್ಲ: ‘ಉತ್ತಮ ಆದಾಯಕ್ಕಿಂತ, ಕೃಷಿಭೂಮಿ ಫಲವತ್ತಾಗಿರಬೇಕು ಎಂಬುದು ನನ್ನ ಕಳಕಳಿ. ಹಾಗಾಗಿ ಇಲ್ಲಿಯವರೆಗೆ ಒಂದು ಕೆ.ಜಿ ರಾಸಾಯನಿಕ ರಸಗೊಬ್ಬರವನ್ನೂ ಬಳಸಿಲ್ಲ. ನಮ್ಮ ಎರೆಹುಳು ಘಟಕದಲ್ಲೇ ತಯಾರಾದ ಗೊಬ್ಬರ, ಜೀವಾಮೃತ ಬಳಸಿ, ಸಾವಯವ ಕೃಷಿ ಮಾಡುತ್ತೇನೆ. ಬೇರೆಯವರಿಗೂ ಗೊಬ್ಬರ ಮಾರಾಟ ಮಾಡಿ ಉತ್ತಮ ಆದಾಯ ಗಳಿಸುತ್ತಿದ್ದೇನೆ’ ಎಂದು ನಾಗೇಶ ಗಡ್ಡೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕುರಿ, ಎಮ್ಮೆ ಮತ್ತು ಆಕಳಿಗಾಗಿ ಹುಲ್ಲು ಬೆಳೆಯುತ್ತಿದ್ದೇನೆ. ಧಾರವಾಡ ಕೃಷಿ ವಿಶ್ವವಿದ್ಯಾಲಯ ಯಾವುದೇ ತಳಿಯ ಹುಲ್ಲು ಪರಿಚಯಿಸಿದರೂ, ನನ್ನ ಹೊಲದಲ್ಲೇ ಪ್ರಾಯೋಗಿಕವಾಗಿ ಬೆಳೆಯುತ್ತೇನೆ. ಈ ಸಲ ಸಿಒ–6 ಹುಲ್ಲು ಬೆಳೆದಿದ್ದೇನೆ. ಎರಡು ಕೊಳವೆಬಾವಿಗಳಿದ್ದು, ಎಲ್ಲ ಬೆಳೆಗಳಿಗೆ ಸಮರ್ಪಕವಾಗಿ ನೀರುಣಿಸುತ್ತೇನೆ’ ಎಂದರು.

‘ಕಣಬರ್ಗಿ ಮಾತ್ರವಲ್ಲದೆ, ಬೆಳಗಾವಿ ತಾಲ್ಲೂಕಿನ ಕೆಂಪದಿನ್ನಿಯಲ್ಲಿ 22 ಎಕರೆ ಜಮೀನಿದೆ. ಅಲ್ಲಿ 900 ಮಾವಿನ ಮರ  ಬೆಳೆಸಿದ್ದು, ಅಲ್ಲಿನ ಮಾವಿನ ಹಣ್ಣುಗಳನ್ನು ಪ್ರತಿವರ್ಷ ಬೆಳಗಾವಿ ಮಾರುಕಟ್ಟೆಗೆ ಸಾಗಿಸುತ್ತಿದ್ದೇನೆ’ ಎಂದು ವಿವರಿಸಿದರು.

ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಕೃಷಿ ಇಲಾಖೆಯು ಆತ್ಮ ಯೋಜನೆಯಡಿ 2021–22ನೇ ಸಾಲಿನ ಬೆಳಗಾವಿ ತಾಲ್ಲೂಕುಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದಿದ್ದಾರೆ.

ನಮ್ಮ ಕಡೆ ಎಷ್ಟು ಭೂಮಿ ಲಭ್ಯವಿದೆ ಎನ್ನುವುದಕ್ಕಿಂತ ಅದನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ. ಸೂಕ್ತ ಯೋಜನೆಯೊಂದಿಗೆ ಶ್ರಮವಹಿಸಿ ದುಡಿದರೆ ಭೂತಾಯಿ ಕೈಹಿಡಿಯುತ್ತಾಳೆ
–ನಾಗೇಶ ಗಡ್ಡೆ ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT