ಶನಿವಾರ, ಫೆಬ್ರವರಿ 4, 2023
28 °C

ಬೆಳಗಾವಿ ಕೇಂದ್ರೀಯ ವಿದ್ಯಾಲಯದಲ್ಲಿ ಕ್ರೀಡಾ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಕ್ಯಾಂಪ್‌ ಪ್ರದೇಶದಲ್ಲಿರುವ ಕೇಂದ್ರೀಯ ವಿದ್ಯಾಲಯ–2ರ 40ನೇ ವಾರ್ಷಿಕ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸಂಭ್ರಮಾಚರಣೆ ಮಂಗಳವಾರ ಗಮನ ಸೆಳೆಯಿತು. ವಿವಿಧ ತರಗತಿಗಳ ಚಿಣ್ಣರು, ಕ್ರೀಡಾಪಟುಗಳು ಇಡೀ ದಿನ ಹಾಡಿ ಕುಣಿದು, ಆಟೋಟಗಳಲ್ಲಿ ಪಾಲ್ಗೊಂಡು ನಲಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಂಎಲ್‌ಆರ್‌ಸಿ ಕಮಾಂಡೆಂಟ್‌, ಬ್ರಿಗೇಡಿಯರ್‌ ಜಾಯ್‌ದೀಪ್‌ ಮುಖರ್ಜಿ ಬಲೂನು ಹಾರಿಬಿಟ್ಟು, ಕ್ರೀಡಾಜ್ಯೋತಿ ಹೊತ್ತಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವಿವಿಧ ಪದಕ ಪಡೆದ 26 ಕ್ರೀಡಾಳುಗಳು ಈ ಜ್ಯೋತಿ ಹೊತ್ತು ಮೈದಾನ ಸುತ್ತಿದರು.

ಶಿಸ್ತಿನ ಸಿಪಾಯಿಗಳಂತೆ ಸಾಲಾಗಿ ನಿಂತಿದ್ದ ಶಾಲೆಯ ವಿದ್ಯಾರ್ಥಿಗಳು ಸೊಗಸಾದ ಬ್ಯಾಂಡ್‌ ಮೇಳದ ಜತೆಗೆ ಆಕರ್ಷಕ ಪಥಸಂಚಲನ ನಡೆಸಿದರು. ಇದನ್ನು ನೋಡಲು ಸೇರಿದ್ದ ಪಾಲಕರು ಮುಗಿಬಿದ್ದು ಫೋಟೊ, ವಿಡಿಯೊ ಮಾಡಿಕೊಂಡರು.

ನಂತರ 6, 8 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳು ನಡೆಸಿಕೊಟ್ಟ ‘ಪಿಟಿ ವ್ಯಾಯಾಮ’, ‘ಹೂಪ್ಸ್’ ಮತ್ತು ‘ಡಂಬಲ್ಸ್ ವ್ಯಾಯಾಮ’ಗಳು ನೋಡುಗರ ಕಣ್ಮನ ಸೆಳೆದವು. ಯೋಗ, ಪ್ರಾಣಾಯಾಮ, ಸಾಹಸ ಪ್ರದರ್ಶನಗಳ ಮೂಲಕ ಮಕ್ಕಳು ಪ್ರೇಕ್ಷಕರ ಮನ ಗೆದ್ದರು.

6ರಿಂದ 12ನೇ ತರಗತಿಯ ವಿದ್ಯಾರ್ಥಿಗಳ ವೈಯಕ್ತಿಕ ಹಾಗೂ ಗುಂಪು ಕ್ರೀಡೆಗಳಲ್ಲಿ ಪಾಲ್ಗೊಂಡರು. ಪ್ರತಿಯೊಂದು ವಿಭಾಗದಲ್ಲೂ ವಿಜೇತ ಮೂವರಿಗೆ ಪದಕ ಪ್ರದಾನ ಮಾಡಲಾಯಿತು.

9ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಗಂಗಾ, ಯಮುನಾ, ಕೃಷ್ಣಾ ಮತ್ತು ಕಾವೇರಿ ಎಂಬ ನಾಲ್ಕು ಸದನಗಳನ್ನು ತಯಾರು ಮಾಡಲಾಗಿತ್ತು. ಬ್ಯಾಂಡ್‌ ಮೇಳದಲ್ಲಿಯೂ ತಮ್ಮತಮ್ಮ ತಂಡಗಳನ್ನು ಪ್ರತಿನಿಧಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆಟಗಳಲ್ಲೂ ಸಾಮರ್ಥ್ಯ ಪ್ರದರ್ಶಿಸಿ ಸೈ ಎಣಿಸಿಕೊಂಡರು. ಚಿಣ್ಣರು ಕಪ್ಪೆ ಜಿಗಿತ, ಬಲೂನು ಒಡೆಯುವುದು, ಗೋಣಿಚೀಲದ ಓಟಗಳಲ್ಲಿ ಮಿಂಚಿದರು.

ಉದ್ಘಾಟನಾ ಸಮಾರಂಭದಲ್ಲಿ ಮೃಣಾಲಿನಿ ಮುಖರ್ಜಿ ಹಾಗೂ ವಿದ್ಯಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯರು ವೇದಿಕೆ ಮೇಲಿದ್ದರು. ಪ್ರಾಂಶುಪಾಲ ಎಸ್.ಶ್ರೀನಿವಾಸ ರಾಜಾ ವಾರ್ಷಿಕ ವರದಿ ಮಂಡಿಸಿದರು. ಜಿ.ಕೆ.ವಿನಾಗಯಂ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು