ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಮ್ಮನ ಕಿತ್ತೂರು: ಕಿಲಾರಿ, ಜವಾರಿ ಎತ್ತುಗಳ ಭರ್ಜರಿ ಸಂತೆ

ಜಾನುವಾರುಗಳ ಮಾರಾಟಕ್ಕೆ ದೂರದ ಊರುಗಳಿಂದ ಕಿತ್ತೂರಿಗೆ ಆಗಮಿಸುವ ರೈತರು, ದಲಾಲರು
Published 24 ಜೂನ್ 2023, 4:52 IST
Last Updated 24 ಜೂನ್ 2023, 4:52 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಕಿಲಾರಿ, ಜವಾರಿ ತಳಿಯ ಹೋರಿಗಳು ಮತ್ತು ಎತ್ತುಗಳ ಮಾರಾಟಕ್ಕೆ ಇಲ್ಲಿನ ಸೋಮವಾರದ ಜಾನುವಾರು ಸಂತೆ ನಾಡಿನಲ್ಲಿಯೇ ಪ್ರಸಿದ್ಧಿ ಪಡೆದಿದೆ. ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಿರುವ ಕೃಷಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ನಡೆಯುವ ಈ ಸಂತೆಗೆ ಕಿತ್ತೂರು ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಹಸು, ಎತ್ತು, ಎಮ್ಮೆ ಕೊಳ್ಳಲು ಆಗಮಿಸುತ್ತಾರೆ.

ಸದ್ಯ ಹೊಲದ ಕೆಲಸಗಳು ಪೂರ್ಣಗೊಂಡಿವೆ. ಬಿತ್ತನೆಗೆ ರೈತರು ಭೂಮಿ ಸಿದ್ಧಗೊಳಿಸಿದ್ದಾರೆ. ಬಿತ್ತುವುದನ್ನು ಬಿಟ್ಟರೆ ಎತ್ತುಗಳ ಅಗತ್ಯ ಈಗ ಹೆಚ್ಚಾಗಿ ಕಂಡುಬರುವುದಿಲ್ಲ. ಹೀಗಾಗಿ ಇಲ್ಲಿನ ದನದ ಪೇಟೆ ಜಾನುವಾರು, ಮಾರಾಟಗಾರರು ಮತ್ತು ಕೊಳ್ಳುವವರಿಂದ ಕಿಕ್ಕಿರಿದು ತುಂಬಿದೆ.

ಕಿಲಾರಿ, ಜವಾರಿ:

‘ಕಿತ್ತೂರು ಪೇಟೆಯಲ್ಲಿ ದೇಸಿಯ ತಳಿಗಳಾದ ಕಿಲಾರಿ, ಜವಾರಿ ಹೋರಿ ಮತ್ತು ಎತ್ತುಗಳು ಹೆಚ್ಚು ಮಾರಾಟವಾಗುತ್ತವೆ. ಮೂಡಲ್, ಘೀರ್, ಜರ್ಸಿ, ಡೈರಿ, ಮೈಸೂರು ಕಿಲಾರಿ ತಳಿಯ ದನಗಳೂ ಈ ಪೇಟೆಯಲ್ಲಿ ಕಾಣಸಿಗುತ್ತವೆ’ ಎನ್ನುತ್ತಾರೆ ರೈತರು ಮತ್ತು ವ್ಯಾಪಾರಸ್ಥರು ಆಗಿರುವ ನಾಗಪ್ಪ ಬಬ್ಲಿ ಮತ್ತು ರಾಜು ಭಂಡಾರಿ.

‘ಜವಾರಿ, ಜಾಫ್ರಿ, ಮಶಾನಾ, ಗೌಳಿ ತಳಿಯ ಹಸು ಮತ್ತು ಎಮ್ಮೆಗಳು ಮಾರಾಟಕ್ಕೆ ಬಂದಿರುತ್ತವೆ. ಸುಗ್ಗಿ ಆಧರಿಸಿ ಮಾರಾಟ ಹೆಚ್ಚು ಮತ್ತು ಕಡಿಮೆ ಪ್ರಮಾಣದಲ್ಲಿ ನಡೆಯುತ್ತಿರುತ್ತದೆ. ಕನಿಷ್ಠ ₹50 ಸಾವಿರದಿಂದ ₹1.25 ಲಕ್ಷದವರೆಗೂ ಜೋಡೆತ್ತು ಮಾರಾಟವಾಗುತ್ತವೆ. ಇದಕ್ಕಿಂತಲೂ ಹೆಚ್ಚಿನ ಧಾರಣಿಯಲ್ಲಿ ಮಾರಾಟವಾದ ಉದಾಹರಣೆಗಳೂ ಇವೆ’ ಎಂದು ಅವರು ಮಾಹಿತಿ ನೀಡುತ್ತಾರೆ.

ದೂರದೂರಿನ ರೈತರು:

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕೆರೂರ, ಹಾವೇರಿ, ಬೆಳಗಾವಿ ಜಿಲ್ಲೆಯ ಸಂಕೇಶ್ವರ, ಮೂಡಲಗಿ, ಯರಗಟ್ಟಿ, ಸವದತ್ತಿ, ಬೈಲಹೊಂಗಲ ಮತ್ತಿತರ ಕಡೆಗಳಿಂದ ರೈತರು ತಮ್ಮ ಜಾನುವಾರುಗಳನ್ನು ಈ ಪೇಟೆಗೆ ಮಾರಾಟಕ್ಕೆ ತೆಗೆದುಕೊಂಡು ಬರುತ್ತಾರೆ. ವ್ಯಾಪಾರಸ್ಥರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

‘ಪರಿಚಯ ಇರುವವರು ಎತ್ತುಗಳನ್ನು ಕೊಂಡರೆ ರೈತರಿಗೆ ಅನುಕೂಲ. ಕೆಲವೊಂದು ಇರ್ಕಳಿ (ಹಾಯುವ), ಗಳೆ ಜಗ್ಗಲಾರದ ಮತ್ತು ಕಾಲೆಳೆಯುವ ಜೋಡಿಗಳು ಇರುತ್ತವೆ. ಪರಿಚಯದವರಿದ್ದರೆ ವಿಶ್ವಾಸದಿಂದ ಕೊಡುತ್ತಾರೆ. ಮಾರಾಟಗಾರದಿಂದ ಪಡೆದರೆ ಖರೀದಿಸಿದ ದರಕ್ಕಿಂತ, ಕಡಿಮೆ ದರಕ್ಕೆ ಅವರಿಗೆ ಮರಳಿ ಕೊಡುವ ಪರಿಸ್ಥಿತಿ ಬರುತ್ತದೆ’ ಎಂದು ಹೇಳುತ್ತಾರೆ ರೈತ ಸಂಜೀವ ನಿಚ್ಚಣಕಿ.

ಚನ್ನಮ್ಮನ ಕಿತ್ತೂರಿನಲ್ಲಿ ಸೋಮವಾರ ನಡೆದ ಜಾನುವಾರುಗಳ ಸಂತೆಯಲ್ಲಿ ಹಗ್ಗ– ಜತ್ತಿಗೆಗಳ ಮಾರಾಟ ಜೋರಾಗಿ ನಡೆಯಿತು /ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಚನ್ನಮ್ಮನ ಕಿತ್ತೂರಿನಲ್ಲಿ ಸೋಮವಾರ ನಡೆದ ಜಾನುವಾರುಗಳ ಸಂತೆಯಲ್ಲಿ ಹಗ್ಗ– ಜತ್ತಿಗೆಗಳ ಮಾರಾಟ ಜೋರಾಗಿ ನಡೆಯಿತು /ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ

ಎತ್ತು ಹಸುಗಳ ಮೈ ತೊಳೆದುಕೊಂಡು ಕೆಲವರು ಅವುಗಳಿಗೆ ಗುಲಾಲು ಹಚ್ಚಿ ಸಿಂಗರಿಸಿ ಪೇಟೆಗೆ ಮಾರಾಟಕ್ಕೆ ತರುತ್ತಾರೆ. ಕುರಿ ಸಂತೆಯೂ ಇಲ್ಲಿ ಹೆಚ್ಚು ಸೇರುತ್ತದೆ

-ಎಸ್. ಬಿ. ಅಂಟೀನ್ ಹಿರಿಯ ಮಾರುಕಟ್ಟೆ ಮೇಲ್ವಿಚಾರಕ ಚನ್ನಮ್ಮನ ಕಿತ್ತೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT