ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಲ್ಲಿ ಸೋತರೂ ಮೌನ, ಅಲ್ಲಿ ಗೆದ್ದರೂ ಗುಡುಗು!

ಲಕ್ಷ್ಮಣ ಸವದಿ, ತಮ್ಮಣ್ಣವರ ಮೇಲೆ ಇರುವ ಸಿಟ್ಟು ಉಳಿದ ಶಾಸಕರ ಮೇಲೆ ಏಕಿಲ್ಲ?
Published 8 ಜೂನ್ 2024, 6:01 IST
Last Updated 8 ಜೂನ್ 2024, 6:01 IST
ಅಕ್ಷರ ಗಾತ್ರ

ಬೆಳಗಾವಿ: ಕಾಂಗ್ರೆಸ್‌ ಅಭ್ಯರ್ಥಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸೋತರೂ ಮೌನವಾಗಿದ್ದಾರೆ. ಚಿಕ್ಕೋಡಿ ಕ್ಷೇತ್ರದಲ್ಲಿ ಗೆದ್ದರೂ ಆರೋಪ– ಪ್ರತ್ಯಾರೋಪಗಳ ಹೊಳೆ ಹರಿಯುತ್ತಿದೆ..!

‘ಬೆಳಗಾವಿ ಜಿಲ್ಲೆಯ ರಾಜಕಾರಣ ಅರ್ಥ ಮಾಡಿಕೊಳ್ಳಲು ಹತ್ತು ತಲೆ ಬೇಕು, ಅರಗಿಸಿಕೊಳ್ಳಲು ಎಂಟು ಎದೆ ಬೇಕು’ ಎಂದು ಹಿರಿಯರೊಬ್ಬರು ಹೇಳಿದ್ದರು. ಚುನಾವಣೋತ್ತರ ನಡೆದ ಬೆಳವಣಿಗೆಗಳು ಇದಕ್ಕೆ ಜ್ವಲಂತ ಸಾಕ್ಷಿ ಎಂಬಂತಿವೆ.

ಚಿಕ್ಕೋಡಿ ಕ್ಷೇತ್ರದಲ್ಲಿ ಪ್ರಿಯಾಂಕಾ ಜಾರಕಿಹೊಳಿ ಅವರು 7,13,461 ಮತ ಪಡೆದು, 90,834 ಮತಗಳ ಅಂತರದಿಂದ ಗೆದ್ದಿದ್ದಾರೆ. ಜಾರಕಿಹೊಳಿ ಕುಟುಂಬದಲ್ಲಿ ಇದೂವರೆಗೆ ಸಂದ ಜಯಗಳಲ್ಲಿ ಇದು ಕೂಡ ದೊಡ್ಡ ಗೆಲುವೇ ಆಗಿದೆ. ಆದರೂ ಅಭ್ಯರ್ಥಿಯ ತಂದೆ, ಸಚಿವ ಸತೀಶ ಜಾರಕಿಹೊಳಿ ಇಷ್ಟಕ್ಕೆ ಸಮಾಧಾನ ಪಡುವ ವ್ಯಕ್ತಿತ್ವದವರಲ್ಲ.

‘ಗೆಲುವಾಗಿದ್ದರೂ ನಮ್ಮವರು ನಮ್ಮೊಂದಿಗೆ ಇರಲಿಲ್ಲ’ ಎಂಬ ಅಂಶವನ್ನು ಅವರು ಪದೇಪದೇ ಹೇಳುತ್ತಲೇ ಸಾಗಿದ್ದಾರೆ.

ಚಿಕ್ಕೋಡಿ ಲೋಕಸಭೆಗೆ ಒಳಪಟ್ಟ ಚಿಕ್ಕೋಡಿ– ಸದಲಗಾ, ಅಥಣಿ, ಕುಡಚಿ, ಕಾಗವಾಡ ಹಾಗೂ ಯಮಕನಮರಡಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ. ಹುಕ್ಕೇರಿ, ರಾಯಬಾಗ ಹಾಗೂ ನಿಪ್ಪಾಣಿಯಲ್ಲಿ ಬಿಜೆಪಿ ಶಾಸಕರಿದ್ದಾರೆ. ಕಾಂಗ್ರೆಸ್‌ನ ಐವರೂ ಶಾಸಕರು ಗೆಲ್ಲುವುದಕ್ಕೆ ಎಷ್ಟು ‘ಲೀಡ್‌’ ಮತಗಳು ಸಿಕ್ಕಿವೆಯೋ ಅಷ್ಟೇ ಮತಗಳ ಮುನ್ನಡೆಯನ್ನು ಪ್ರಿಯಾಂಕಾ ಅವರಿಗೂ ಕೊಡಿಸಬೇಕು ಎಂದು ಸತೀಶ ಕಟ್ಟಪ್ಪಣೆ ಮಾಡಿದ್ದರು. ಇದಕ್ಕೆ ಶಾಸಕರು ಒಪ್ಪಿದರೆ ಮಾತ್ರ ಪ್ರಿಯಾಂಕಾ ಅವರನ್ನು ಕಣಕ್ಕಿಳಿಸುತ್ತೇನೆ ಎಂಬ ‘ಷರತ್ತು’ ಕೂಡ ವಿಧಿಸಿದ್ದರು ಎನ್ನಲಾಗಿದೆ.

ಲಕ್ಷ್ಮಣ ಸವದಿ ಅವರು 76 ಸಾವಿರ ಮತಗಳ ಮುನ್ನಡೆ ಪಡೆದು ಗೆದ್ದಿದ್ದಾರೆ. ಅದೇ ಕ್ಷೇತ್ರದಲ್ಲಿ ಪ್ರಿಯಾಂಕಾಗೆ 7,000 ಮತಗಳ ಹಿನ್ನೆಡೆ ಆಗಿದೆ. ಇದು ನಂಬಿಕೆ ದ್ರೋಹ ಎಂದು ಖುದ್ದು ಹೋಗಿದ್ದಾರೆ ಸಚಿವ.

ಕುಡಚಿ ಕ್ಷೇತ್ರದಲ್ಲಿ ಮಹೇಂದ್ರ ತಮ್ಮಣ್ಣವರ 23 ಸಾವಿರ ಮತಗಳಿಂದ ಗೆದ್ದಿದ್ದರು. ಈಗ ಪ್ರಿಯಾಂಕಾ ಅವರಿಗೆ ಅಲ್ಲಿ 22 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ಸಿಕ್ಕಿದೆ. ಆದರೆ, ಇವೆಲ್ಲ ತಮ್ಮ ಪ್ರಯತ್ನದಿಂದ ಬಂದಿವೆ, ಶಾಸಕ ಅಲ್ಲಿ ವಿರೋಧಿ ಕೆಲಸ ಮಾಡಿದ್ದಾರೆ ಎಂಬುದು ಸತೀಶ ಕೋಪಕ್ಕೆ ಕಾರಣ.

‘ಪ್ರಿಯಾಂಕಾ 3 ಲಕ್ಷ ಮತಗಳ ಅಂತರದಿಂದ ಗೆಲ್ಲಬೇಕು ಎಂದು ಸತೀಶ ಬಯಸಿದ್ದರು. ಅದು ತಪ್ಪಿದ್ದರಿಂದ ಅವರು ಗೆಲುವನ್ನೂ ಸಂಭ್ರಮಿಸುತ್ತಿಲ್ಲ’ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ಹೇಳಿದರು.

‘ಚಿಕ್ಕೋಡಿಯಲ್ಲಿ ಕಾಂಗ್ರೆಸ್‌ ಗೆಲ್ಲಿಸಿದರೆ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನಿಕ್ಕಿ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬಹಿರಂಗವಾಗಿಯೇ ಭರವಸೆ ನೀಡಿದ್ದರು. ಆ ಮಾತೇ ಇಂದಿನ ಈ ರಾಜಕೀಯ ಮೇಲಾಟಕ್ಕೆ ಕಾರಣ’ ಎಂದೂ ಕೆಲವರು ಒಳಗುಟ್ಟು ಹೇಳುತ್ತಿದ್ದಾರೆ.

ಲಕ್ಷ್ಮೀ ಹೆಬ್ಬಾಳಕರ
ಲಕ್ಷ್ಮೀ ಹೆಬ್ಬಾಳಕರ
ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ
ಮಹೇಂದ್ರ ತಮ್ಮಣ್ಣವರ 
ಮಹೇಂದ್ರ ತಮ್ಮಣ್ಣವರ 
ಅಶೋಕ ಪಟ್ಟಣ
ಅಶೋಕ ಪಟ್ಟಣ
ಮಹಾಂತೇಶ ಕೌಜಲಗಿ
ಮಹಾಂತೇಶ ಕೌಜಲಗಿ

ಬೆಳಗಾವಿಯಲ್ಲೇಕೆ ಮೌನ? ಬೆಳಗಾವಿ ಕ್ಷೇತ್ರದಲ್ಲಿ ಮೃಣಾಲ್‌ ಹೆಬ್ಬಾಳಕರ 585392 ಮತ ಪಡೆದು 176637 ಅಂತರದಿಂದ ಸೋತಿದ್ದಾರೆ. ಬೆಳಗಾವಿ ಕ್ಷೇತ್ರದ ಉಸ್ತುವಾರಿಯನ್ನು ಸಚಿವ ಸತೀಶ ಹೊತ್ತಿದ್ದರು. ಇಲ್ಲಿಯೂ ಕಾಂಗ್ರೆಸ್‌ ಶಾಸಕರು ಇರುವ ಕ್ಷೇತ್ರಗಳಲ್ಲೇ ಬಿಜೆಪಿ ಮುನ್ನಡೆ ಸಾಧಿಸಿದೆ. ಆದರೂ ಏಕೆ ಯಾರೂ ‘ಧ್ವನಿ’ ಎತ್ತುತ್ತಿಲ್ಲ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಸಚಿವೆ ಹೆಬ್ಬಾಳಕರ ಅವರ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಗೆ 50529 ಮತಗಳ ಲೀಡ್‌ ಸಿಕ್ಕಿದ್ದು ಅವರನ್ನು ಮೌನಕ್ಕೆ ಶರಣಾಗುವಂತೆ ಮಾಡಿದೆ ಎನ್ನುವುದು ರಾಜಕಾರಣಿಗಳ ಮಾತು. ಬೆಳಗಾವಿ ಉತ್ತರದಲ್ಲಿ 2401 ಬೈಲಹೊಂಗಲದಲ್ಲಿ 21397 ಮತಗಳ ಮುನ್ನಡೆ ಜಗದೀಶ ಶೆಟ್ಟರ್‌ ಪಡೆದಿದ್ದಾರೆ. ರಾಮದುರ್ಗದಲ್ಲಿ ಪಂಚಮಸಾಲಿ ಸಮುದಾಯವೇ ದೊಡ್ಡ ಸಂಖ್ಯೆಯಲ್ಲಿದೆ. ಅಲ್ಲಿ 70 ಸಾವಿರ ಮತಗಳ ಮುನ್ನಡೆ ಸಿಗುತ್ತದೆ ಎಂಬ ಲೆಕ್ಕ ಸಚಿವೆ ಅವರದ್ದಾಗಿತ್ತು. ಆದರೆ 394 ಮತಗಳ ಲೀಡ್‌ ಮಾತ್ರ ಸಿಕ್ಕಿದೆ. ಮುನ್ನಡೆ ನೀಡಿಲ್ಲ ಎಂಬ ಕಾರಣಕ್ಕೆ ಸತೀಶ ಜಾರಕಿಹೊಳಿ ಅವರು ಅಥಣಿ ಕುಡಚಿ ಶಾಸಕರನ್ನು ‘ಕಾದ ಹೆಂಚಿನ ಮೇಲೆ’ ನಿಲ್ಲಿಸಿದ್ದಾರೆ. ಆದರೆ ಬೈಲಹೊಂಗಲ ಗ್ರಾಮೀಣ ರಾಮದುರ್ಗ ಶಾಸಕರ ಬಗ್ಗೆ ಮೌನವಾಗಿದ್ದಾರೆ. ಸ್ವತಃ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಕೂಡ ಇದೂವರೆಗೆ ತುಟಿ ಬಿಚ್ಚಿಲ್ಲ ಎನ್ನುವುದು ಕಾರ್ಯಕರ್ತರನ್ನು ಅಚ್ಚರಿಗೆ ತಳ್ಳಿದೆ. ‘ಹಿರಿಯರಾದ ಮಹಾಂತೇಶ ಕೌಜಲಗಿ ಅಶೋಕ ಪಟ್ಟಣ ಅವರನ್ನು ಹಿಂದಿಕ್ಕಿ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ’ ಎಂಬ ಮಾತೂ ಚುನಾವಣೆ ಕಾಲಕ್ಕೆ ಚರ್ಚೆಯಾಗಿತ್ತು. ತಾನು ಮಹಿಳಾ ಕೋಟಾದಲ್ಲಿ ಮಂತ್ರಿಯಾಗಿದ್ದೇನೆ ಎಂಬ ಸಮರ್ಥನೆಯನ್ನೂ ಲಕ್ಷ್ಮಿ ಹೆಬ್ಬಾಳಕರ ಈಗಾಗಲೇ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT