ಗುರುವಾರ , ಸೆಪ್ಟೆಂಬರ್ 23, 2021
24 °C

2ನೇ ದಿನವೂ ನಾಮಪತ್ರ ಸಲ್ಲಿಕೆ ಇಲ್ಲ- ಮರಾಠಿಯಲ್ಲಿ ಅರ್ಜಿ ನೀಡುವಂತೆ ಎಂಇಎಸ್‌ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆ ಚುನಾವಣೆಗೆ ಅಧಿಸೂಚನೆ ಪ್ರಕಟವಾದ 2ನೇ ದಿನವಾದ ಮಂಗಳವಾರವೂ ಯಾವುದೇ ವಾರ್ಡ್‌ಗೂ ನಾಮಪತ್ರಗಳು ಸಲ್ಲಿಕೆಯಾಗಿಲ್ಲ.

ನಾಮಪತ್ರ ಸಲ್ಲಿಕೆಗೆ ಆ. 23 ಕೊನೆಯ ದಿನವಾಗಿದೆ. ಆ.24ರಂದು ಪರಿಶೀಲನೆ ನಡೆಯಲಿದೆ. ಆ.26ರಂದು ಹಿಂಪಡೆಯಲು ಕೊನೆಯ ದಿನವಾಗಿದೆ. ಸೆ. 3ರಂದು ಮತದಾನ ಹಾಗೂ ಸೆ.6ರಂದು ಮತ ಎಣಿಕೆ ನಡೆಯಲಿದೆ.

ಈ ನಡುವೆ, ಪಾಲಿಕೆ ಚುನಾವಣೆಗೆ ಸಂಬಂಧಿಸಿದ ನಾಮಪತ್ರ ಅರ್ಜಿ ಸೇರಿ ಇತರ ದಾಖಲೆಗಳನ್ನು ಕನ್ನಡದ ಜೊತೆಗೆ ಮರಾಠಿ ಹಾಗೂ ಇಂಗ್ಲಿಷ್‌ನಲ್ಲೂ ನೀಡಬೇಕು ಎಂದು ಒತ್ತಾಯಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

‘ಸೆ.3ರಂದು ಚುನಾವಣೆ ನಡೆಯಲಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಅವಕಾಶ ನೀಡಲಾಗಿದೆ. ಆದರೆ, ದಾಖಲೆಗಳನ್ನು ಕನ್ನಡದಲ್ಲೇ ನೀಡುತ್ತಿರುವುದರಿಂದ ಮರಾಠಿ ಭಾಷಿಕರಿಗೆ ತೊಂದರೆ ಆಗುತ್ತಿದೆ. ಆದ್ದರಿಂದ ಭಾಷಾ ಅಲ್ಪಸಂಖ್ಯಾತರಾದ ನಮಗೆ ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಮರಾಠಿ ಮತ್ತು ಇಂಗ್ಲಿಷ್‌ನಲ್ಲೂ ದಾಖಲೆ ನೀಡಬೇಕು. ಆಕಾಂಕ್ಷಿಗಳಿಗೆ ನೆರವಾಗಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ದೀಪಕ ದಳವಿ, ಮನೋಹರ ಕಿಣೇಕರ, ಮಾಲೋಜಿ ಅಷ್ಟೇಕರ, ವಿಕಾಸ ಕಲಘಟಗಿ ಇದ್ದರು.

ಎಂಇಎಸ್ ನಡೆಗೆ ಖಂಡನೆ: ‘ರಾಜ್ಯದಲ್ಲಿ ಕನ್ನಡ ಆಡಳಿತ ಭಾಷೆಯಾಗಿದೆ. ಆದರೆ, ಅದನ್ನು ಉಲ್ಲಂಘಿಸಿ ಬೇರೆ ಭಾಷೆಯಲ್ಲಿ ಅರ್ಜಿಗಳನ್ನು ಕೊಡುವಂತೆ ಒತ್ತಾಯಿಸಿ ಭಾಷೆಯ ವಿಚಾರದಲ್ಲಿ ಎಂಇಎಸ್‌ನವರು ತಗಾದೆ ತೆಗೆದಿರುವುದು ಖಂಡನೀಯ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ಶೆಟ್ಟಿ ಬಣದವರು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಆರ್. ಅಭಿಲಾಷ ಮಾತನಾಡಿ, ‘ಎಂಇಎಸ್‌ನವರು ಪದೇ ಪದೇ ಭಾಷಾ ವಿವಾದವನ್ನು ಹುಟ್ಟು ಹಾಕುತ್ತಿದ್ದಾರೆ. ಮಹಾನಗರಪಾಲಿಕೆ ಚುನಾವಣೆಯಲ್ಲಿ ಅರ್ಜಿಗಳನ್ನು ಮರಾಠಿಯಲ್ಲಿ ನೀಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ. ಇದು ಖಂಡನೀಯ. ಗಡಿಯುಲ್ಲಿ ಸೌಹಾರ್ದ ಹಾಳು ಮಾಡಲು ಮುಂದಾಗುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಿದೆ. ಇಲ್ಲಿ ಎಲ್ಲವೂ ಕನ್ನಡದಲ್ಲೇ ನಡೆಯಬೇಕು. ಆದರೆ, ಇದನ್ನು ಉಲ್ಲಂಘಿಸುವಂತೆ ಆಗ್ರಹಿಸುತ್ತಿರುವ ಎಂಇಎಸ್‌ನವರು ಕನ್ನಡಿಗರ ಭಾವನೆಗಳಿಗೆ ಧಕ್ಕೆ ಆಗುವಂತೆ ನಡೆದುಕೊಳ್ಳುತ್ತಿದ್ದಾರೆ. ಯಾವುದೇ ಅರ್ಜಿಗಳನ್ನು ಕನ್ನಡವಲ್ಲದೆ ಬೇರೆ ಭಾಷೆಗಳಲ್ಲಿ ಕೊಡಬಾರದು. ಭಾಷಾ ವಿವಾದಕ್ಕೆ ಹವಣಿಸುತ್ತಿರುವ ಎಂಇಎಸ್‌ನವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ರಾಜ್‌ ಹಿರೇಮಠ, ಮಂಜುನಾಥ ಶೆಟ್ಟರ, ಪ್ರಕಾಶ, ಮಹೇಶ ಹಾಗೂ ಮಲ್ಲಿಕಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು