ನಿಪ್ಪಾಣಿ: ‘ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಗೆ ಬಹುರಾಜ್ಯ ಸ್ಥಾನಮಾನ ಸಿಕ್ಕಿದ ಕುರಿತು ಕೇಂದ್ರ ಸರ್ಕಾರದ ಸಹಕಾರ ಇಲಾಖೆಯಿಂದ ಆದೇಶ ಪತ್ರ ಬಂದಿದ್ದು, ಕಾರ್ಖಾನೆಯ ಪ್ರಗತಿಯ ಕಿರಿಟಕ್ಕೆ ಮತ್ತೊಂದು ಗರಿ ಸೇರ್ಪಡೆಗೊಂಡಿದೆ’ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಕಾರ್ಖಾನೆಯ ಸಭಾಗೃಹದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ನಿರಂತರ ಅನುಸರಣೆಯಿಂದಾಗಿ ಕಾರ್ಖಾನೆ ಅಲ್ಪಾವಧಿಯಲ್ಲಿ ಬಹುರಾಜ್ಯ ಸ್ಥಾನಮಾನ ಪಡೆದುಕೊಂಡಿದೆ. ಬಹುರಾಜ್ಯಕ್ಕೆ ಪರಿವರ್ತನೆಯಾದ ನಂತರ ಕಾಗಲ್ ತಾಲ್ಲೂಕಿನ ಅರ್ಜುನಿ, ಲಿಂಗನೂರು, ಚಿಖಲಿ, ಗೊರಂಬೆ, ಶೆಂಡೂರು, ಶಂಕರವಾಡಿ, ವಂದೂರು, ಕರ್ನೂರು ಹಾಗೂ ಗಡಹಿಂಗ್ಲಜ್ ತಾಲ್ಲೂಕಿನ ಮುತ್ನಾಳ್, ನಿಲಜಿ, ಹೆಬ್ಬಾಳ, ದುಂಡಗೆ, ಅವರನಾಳ ಗ್ರಾಮಗಳು ಕಾರ್ಖಾನೆಯ ಕಾರ್ಯಕ್ಷೇತ್ರ ವ್ಯಾಪ್ತಿಗೆ ಸೇರ್ಪಡೆಗೊಂಡಿವೆ’ ಎಂದರು.
‘ಮಹಾರಾಷ್ಟ್ರದ ಗ್ರಾಮಗಳು ಅಧಿಕೃತವಾಗಿ ಕಾರ್ಖಾನೆಯ ಕಾರ್ಯಕ್ಷೇತ್ರದಡಿಯಲ್ಲಿ ಬಂದ ಪರಿಣಾಮ ನೆರೆರಾಜ್ಯದಲ್ಲಿ ಜಮೀನು ಹೊಂದಿದ ರಾಜ್ಯದ ಗಡಿಭಾಗದ ಸದಸ್ಯರು ಇತರರಂತೆ ಸೇವೆ, ಸೌಲಭ್ಯಗಳನ್ನು ಪಡೆಯಲಿದ್ದಾರೆ. ಕಾರ್ಖಾನೆಯು ಬಹುರಾಜ್ಯಗಳ ಸ್ಥಾನಮಾನ ಹೊಂದಿದನ್ವಯ ನಿರ್ದೇಶಕರ ಸಂಖ್ಯೆ 16 ರಿಂದ 21 ಕ್ಕೆ ಹೆಚ್ಚಾಗಲಿದೆ. ಕಬ್ಬು ನುರಿಸುವ ಸಾಮರ್ಥ್ಯವನ್ನು 9 ಸಾವಿರ ಮೆಟ್ರಿಕ್ ಟನ್‍ಗಳಿಗೆ ಹೆಚ್ಚಿಸಿದ ಪರಿಣಾಮ ಬರುವ ಹಂಗಾಮಿನಲ್ಲಿ ಕಬ್ಬು ನುರಿಸುವ ಗುರಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿದೆ. ಕಾರ್ಖಾನೆಯಲ್ಲಿ ಎಥೆನಾಲ್ ಘಟಕ ಪೂರ್ಣಗೊಂಡಿದ್ದು ಉತ್ಪಾದನೆ ಶೀಘ್ರದಲ್ಲೆ ಪ್ರಾರಂಭವಾಗಲಿದೆ’ ಎಂದರು.
ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ‘ಕಾರ್ಖಾನೆಯನ್ನು ಬಹುರಾಜ್ಯ ದರ್ಜೆಗೇರಿಸಿದ್ದರಿಂದ ಗಡಿಭಾಗದ ರೈತರಿಗೆ ಮತ್ತು ಕಬ್ಬು ಉತ್ಪಾದಕರಿಗೆ ಅನುಕೂಲವಾಗಲಿದೆ. ಕಾರ್ಖಾನೆಯ ಆರ್ಥಿಕ ವಹಿವಾಟು ಹೆಚ್ಚಾಗಲಿದ್ದು ಕಾರ್ಖಾನೆಯು ಸಾಲಮುಕ್ತವಾಗುವ ದಿನಗಳು ಸಮೀಪಿಸಿವೆ’ ಎಂದರು.
ಕಾರ್ಯಾಧ್ಯಕ್ಷ ಸಹಕಾರ ರತ್ನ ಚಂದ್ರಕಾಂತ ಕೋಠಿವಾಲೆ, ವ್ಯವಸ್ಥಾಪಕ ನಿರ್ದೇಶಕ ಶಿವ ಕುಲಕರ್ಣಿ ಮಾತನಾಡಿದರು.
ಬಹುರಾಜ್ಯ ಸ್ಥಾನಮಾನ ದೊರೆತ ಹಿನ್ನೆಲೆಯಲ್ಲಿ ಸದಸ್ಯರು ಕಾರ್ಖಾನೆ ಆವರಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಉಪಕಾರ್ಯಾಧ್ಯಕ್ಷ ಮಲಗೊಂಡಾ ಪಾಟೀಲ, ಸಂಚಾಲಕ ಅಪ್ಪಾಸಾಹೇಬ ಜೊಲ್ಲೆ, ಅವಿನಾಶ ಪಾಟೀಲ, ಪಪ್ಪು ಪಾಟೀಲ, ಸಮಿತ ಸಾಸನೆ, ಮ್ಹಾಳಪ್ಪಾ ಪಿಸೂತ್ರೆ, ಪ್ರತಾಪ ಮೇತ್ರಾಣಿ, ಕಲ್ಲಪ್ಪಾ ನಾಯಿಕ, ಉಜ್ವಲಾ ಶಿಂಧೆ, ಮನಿಷಾ ರಾಂಗೋಳೆ, ಜಯಕುಮಾರ ಖೋತ, ಕಿರಣ ನಿಕಾಡೆ, ಅಮಿತ ರಣದಿವೆ, ಜ್ಯೋತಿಪ್ರಸಾದ ಜೊಲ್ಲೆ, ಪ್ರಕಾಶ ಶಿಂಧೆ, ವೈಭವ ರಾಂಗೋಳೆ, ರಾಜೇಂದ್ರ ಖರಾಬೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.