ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ| ನೇಗಿನಹಾಳದ ಗುರು ಮಡಿವಾಳೇಶ್ವರ ಸ್ವಾಮೀಜಿ ಮಠದಲ್ಲೇ ಆತ್ಮಹತ್ಯೆ

ಮಠದಲ್ಲೇ ನೇಣಿಗೆ ಶರಣಾದ ಪೀಠಾಧಿಪತಿ
Last Updated 5 ಸೆಪ್ಟೆಂಬರ್ 2022, 19:19 IST
ಅಕ್ಷರ ಗಾತ್ರ

ನೇಗಿನಹಾಳ(ಬೆಳಗಾವಿ ಜಿಲ್ಲೆ): ಬೈಲಹೊಂಗಲ ತಾಲ್ಲೂಕಿನ ನೇಗಿನಹಾಳದ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಬಸವಸಿದ್ಧಲಿಂಗ ಸ್ವಾಮೀಜಿ (53) ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಠದಲ್ಲಿ ತಾವು ಮಲಗುವ ಕೋಣೆಯಲ್ಲಿ ನೇಣು ಹಾಕಿಕೊಂಡಿ‌ದ್ದಾರೆ. ಬೆಳಿಗ್ಗೆ ಅವರ ಸೇವಕ ಶ್ರೀಗಳನ್ನು ಎಬ್ಬಿಸಲು ಹೋದಾಗ ಘಟನೆ ಗೊತ್ತಾಗಿದೆ.

ಭಾನುವಾರ ರಾತ್ರಿ 12ರವರೆಗೆ ಭಕ್ತರೊಂದಿಗೆ ಮಾತನಾಡಿದ್ದ ಸ್ವಾಮೀಜಿ ನಂತರ ಕೋಣೆಗೆ ಹೋಗಿ ಮಲಗಿದ್ದರು. ಸೋಮವಾರ ನಸುಕಿನಲ್ಲಿ ಮಠದ ಆವರ ಣದಲ್ಲಿ ವಾಯುವಿಹಾರ ಮಾಡಿದ್ದರು. 6 ಗಂಟೆ ಸುಮಾರಿಗೆ ವಿಶ್ರಾಂತಿ ತೆಗೆದುಕೊಳ್ಳುವುದಾಗಿ ಹೇಳಿ ಮತ್ತೆ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡರು. ಎರಡು ತಾಸಿನ ನಂತರವೂ ಶ್ರೀಗಳು ಹೊರಬರದಿದ್ದಾಗ ಅವರ ಸೇವಕ ಬಾಗಿಲು ಬಡಿದರು. ಒಳಗಡೆಯಿಂದ ಚಿಲಕ ಹಾಕಿತ್ತು. ಕಿಟಕಿಗಳನ್ನು ನೂಕಿ ನೋಡಿದಾಗ ಸ್ವಾಮೀಜಿ ನೇಣಿನಲ್ಲಿ ನೇತಾಡುತ್ತಿರುವುದು ಗೊತ್ತಾಯಿತು.

‘ಬಸವಸಿದ್ಧಲಿಂಗ ಸ್ವಾಮೀಜಿ 2007ರಲ್ಲಿ ಪೀಠ ಅಲಂಕರಿಸಿದ್ದರು. ಗ್ರಾಮದ ಜನರನ್ನು ಮಕ್ಕಳಂತೆ ಕಾಣುತ್ತಿದ್ದ ಅವರ ಸಾವು ದಿಗಿಲುಗೊಳಿಸಿದೆ’ ಎಂದು ಶ್ರೀಗಳ ಆಪ್ತರೊಬ್ಬರು ಹೇಳಿದರು. ಬಸವಸಿದ್ಧಲಿಂಗರ ಶಿಕ್ಷಣ ಹಾಗೂ ಅಧ್ಯಾತ್ಮ ಬೋಧನೆ ಚಿತ್ರದುರ್ಗದ ಮುರುಘಾಮಠದಲ್ಲಿ ಆಗಿದೆ. ಸೆ. 6ರಂದು ಮಧ್ಯಾಹ್ನ ಅವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಹಿರಿಯರು ತಿಳಿಸಿದ್ದಾರೆ.

ಮಹಿಳೆಯರ ಬಂಧನಕ್ಕೆ ಪಟ್ಟು: ‘ಹಲವು ಸ್ವಾಮೀಜಿಗಳು ಲೈಂಗಿಕ ಸಂಬಂಧ ಹೊಂದಿದ್ದಾರೆ’ ಎಂದು ಇಬ್ಬರು ಮಹಿಳೆಯರು ಮಾತನಾಡಿದ್ದ ಆಡಿಯೊ ಈಚೆಗೆ ವೈರಲ್ ಆಗಿತ್ತು. ಅದರಲ್ಲಿ ನೇಗಿನಹಾಳದ ಶ್ರಿಗಳ ಹೆಸರೂ ಇತ್ತು. ಇದರಿಂದ ಶ್ರೀಗಳು ನೊಂದಿದ್ದರೆಂದು ಅವರ ಶಿಷ್ಯರು ಹೇಳಿದ್ದಾರೆ.

‘ಆಡಿಯೊ ಕುರಿತು ಬೈಲಹೊಂಗಲ ಡಿವೈಎಸ್ಪಿ ಕಚೇರಿಯಲ್ಲಿ ಮಹಿಳೆಯರ ವಿರುದ್ಧ ದೂರು ನೀಡಿದ್ದೇವೆ. ಶ್ರೀಗಳು ಮೃದು ಸ್ವಭಾವದವರು. ಇಂಥ ವಿಷಯ ದಲ್ಲಿ ಹೆಸರು ಪ್ರಸ್ತಾಪವಾಯಿತು ಎಂದು ಜೀವವನ್ನೇ ಕೊಟ್ಟಿದ್ದಾರೆ. ಈ ಸಾವಿಗೆ ಆ ಇಬ್ಬರು ಮಹಿಳೆಯರೇ ಕಾರಣ. ತಕ್ಷಣ ಅವರನ್ನು ಬಂಧಿಸಬೇಕು. ಅಲ್ಲಿಯವರೆಗೆ ಶ್ರೀಗಳನ್ನು ಮುಟ್ಟಲು ಬಿಡುವುದಿಲ್ಲ’ ಎಂದು ಗ್ರಾಮದ ಮಹಿಳೆಯರು ಧರಣಿ ಕುಳಿತರು. ನಂತರ ಊರಿನ ಹಿರಿಯರು, ‍ಪೊಲೀಸ್‌ ಅಧಿಕಾರಿಗಳು, ವಿವಿಧ ಮಠಾಧೀಶರು ಸಮಾಧಾನ ಮಾಡಿದರು.

ಶ್ರೀಗಳ ದೇಹವನ್ನು ಮಧ್ಯಾಹ್ನ ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಲಾಯಿತು.

ಡೆತ್‌ನೋಟ್‌ ಪತ್ತೆ

ಬಸವಸಿದ್ಧಲಿಂಗ ಸ್ವಾಮೀಜಿ ಮೃತಪಟ್ಟಿದ್ದ ಕೋಣೆಯಲ್ಲಿ ಅವರು ಬರೆದಿದ್ದಾರೆ ಎನ್ನಲಾದ ಡೆತ್‌ನೋಟ್‌ ಪತ್ತೆಯಾಗಿದೆ.

‘ಕ್ಷಮಿಸಿಬಿಡಿ ಭಕ್ತರೆ. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಸಾವಿಗೆ ನಾನೇ ಕಾರಣ. ಯಾರನ್ನೂ ವಿಚಾರಣೆಗೆ ಒಳಪಡಿ ಸಬೇಡಿ. ಲೋಕದ ಗೊಡವೆ ಸಾಕು. ನಾ ಈ ದಾರಿ ಹಿಡಿದಿದ್ದೇನೆ. ಶ್ರೀಮಠದ ಭಕ್ತರು ಹಾಗೂ ನೇಗಿನಹಾಳ ಗ್ರಾಮಸ್ಥರು ಸೇರಿ ಶ್ರೀಮಠವನ್ನು ಮುನ್ನಡೆಸಿ. ಹಡೆದ ತಾಯಿ ನನ್ನನ್ನು ಕ್ಷಮಿಸಿಬಿಡು. ಶ್ರೀಮಠದ ಮಕ್ಕಳೇ ನನ್ನನ್ನು ಕ್ಷಮಿಸಿ. ನನ್ನ ಪಯಣ ಬಸವ ಮಡಿವಾಳೇಶ್ವರನೆಡೆಗೆ. ಜೈ ಬಸವೇಶ, ಜೈ ಮಡಿವಾಳೇಶ. ಶರಣು ಶರಣಾರ್ಥಿ’ ಎಂದು ಇದರಲ್ಲಿ ಬರೆದಿದೆ. ಆದರೆ, ಇದರಲ್ಲಿ ಶ್ರೀಗಳ ಸಹಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT