ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಣಧೋಳಿ: ಮಳೆಗಾಗಿ ಗ್ರಾಮೀಣರಿಂದ ಪ್ರಾರ್ಥನೆ, ಕತ್ತೆಗಳ ಮದುವೆ

Published 16 ಜೂನ್ 2023, 23:52 IST
Last Updated 16 ಜೂನ್ 2023, 23:52 IST
ಅಕ್ಷರ ಗಾತ್ರ

ಬಾಲಶೇಖರ ಬಂದಿ

ಮೂಡಲಗಿ: ಮಳೆ ಇಲ್ಲದೆ ಬಿತ್ತನೆ ಮಾಡದೆ ಕಂಗಾಲಾಗಿರುವ ತಾಲ್ಲೂಕಿನ ಸುಣಧೋಳಿ ಗ್ರಾಮದ ರೈತಾಪಿ ಜನರು ಕತ್ತೆಗಳ ಮದುವೆ ಮಾಡಿ ವರುಣದೇವನನ್ನು ಪ್ರಾರ್ಥಿಸಿದರು.

ಮಳೆ ಇಲ್ಲದೆ ಭೂಮಿಗಳೆಲ್ಲ ಬಣಗುಡುತ್ತಿಲಿವೆ. ಘಟಪ್ರಭಾ ನದಿಯೆಲ್ಲ ಬತ್ತಿಹೋಗಿದೆ. ಬಾವಿ ಮತ್ತು ಕೊಳವೆ ಬಾವಿಗಳು ಸಹ ನೀರಿಲ್ಲದೆ ಕುಡಿಯುವ ನೀರಿಗೂ ಹಾಹಾಕಾರ ತಲೆದೋರಿದೆ. ಮಳೆ ಇವತ್ತು ಬರಬಹುದು, ನಾಳೆ ಬರಬಹುದು ಎಂದು ರೈತರು ಚಾತಕ ಪಕ್ಷಿಯಂತೆ ಮುಗಿಲು ನೋಡುತ್ತಿದ್ದಾರೆ. ಕತ್ತೆಗಳಿಗೆ ಮದುವೆ ಮಾಡಿಸಿ ವರುಣದೇವನಿಗೆ ಮಳೆಗಾಗಿ ಪ್ರಾರ್ಥಿಸಿದರು.

ಕತ್ತೆ, ಕಪ್ಪೆಗಳ ಮದುವೆ ಮಾಡಿದರೆ ಮಳೆಯಾಗುತ್ತದೆ ಎನ್ನುವ ಪೂರ್ವಜರು ಮಾಡಿಕೊಂಡು ಬಂದಿರುವ ಸಂಪ್ರದಾಯ ಎನ್ನುವುದು ಜನರ ನಂಬಿಕೆ. ಸುಣಧೋಳಿ ಗ್ರಾಮದ ಗಣೇಶ ನಗರ ಕಾಲುವೆ ಸಮುದಾಯದ ಜನ ಮತ್ತು ಗಜಾನನ ಯುವಕ ಸಂಘದವರು ಸೇರಿ ಮಳೆಗಾಗಿ ಕತ್ತೆಗಳ ಮದುವೆಯನ್ನು ಮಾಡಿದ್ದು ಗಮನಸೆಳೆಯಿತು.

ಮದುವೆ ಶಾಸ್ತ್ರ: ಗ್ರಾಮದಲ್ಲಿರುವ ಗಂಡು ಮತ್ತು ಹೆಣ್ಣು ಕತ್ತೆಯನ್ನು ಹುಡುಕಿ ತಂದು ಗಂಡು ಕತ್ತೆಗೆ ಹೊಸ ಪಂಚೆ, ಟವಲು ತೊಡಿಸಿದರೆ ಹೆಣ್ಣು ಕತ್ತೆಗೆ ಸೀರೆ, ಖಣ ತೊಡಿಸಿದರು. ಅರಿಷಿಣ, ಸುರಗಿ ಶಾಸ್ತ್ರವನ್ನು ಮಹಿಳೆಯರು ನೆರವೇರಿಸಿದರು. ಗಂಡು ಮತ್ತು ಹೆಣ್ಣು ಕತ್ತೆಗೆ ಬಾಸಿಂಗ ಕಟ್ಟಿ, ಕೊರಳಿಗೆ ಹೂಮಾಲೆ ಹಾಕಿ ಮದುಮಕ್ಕಳಂತೆ ಸಿಂಗರಿಸಿದ್ದರು. ತಾಳಿ ಕಟ್ಟುವ ಶಾಸ್ತ್ರವೂ ನಡೆಯಿತು.

‘ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುವಾ’ ಎಂದು ಸ್ವಾಮಿಯೊಬ್ಬರು ಮದುವೆ ಮಂತ್ರ ಹೇಳಿದರು. ಜನರು ಅಕ್ಷತೆ ಹಾಕಿ ಮುತ್ತೈದೆಯರು ಸೋಬಾನೆ ಹಾಡು ಹೇಳಿ ಆರತಿ ಮಾಡಿ ಹರಿಸಿದರು. ಬಾಜಾ ಭಜಂತ್ರಿಯೊಂದಿಗೆ ಅಬ್ಬರದಿಂದ ಗ್ರಾಮದಲ್ಲಿ ಮೆರವಣಿಗೆ ಮಾಡಿದರು. ಕತ್ತೆಗಳ ಮದುವೆಯಲ್ಲಿ ಭಾಗಿಯಾದವರಿಗೆಲ್ಲ ಅನ್ನ, ಸಾರು ಭೋಜನ ವ್ಯವಸ್ಥೆ ಮಾಡಲಾಗಿತ್ತು.

ಗ್ರಾಮದ ಹಟ್ಟಿ ಬಂಧುಗಳು, ಹುಣಶ್ಯಾಳ, ಫಾಸಿ, ನಾಯ್ಕ, ಜಿಡ್ಡಿಮನಿ ಮತ್ತು ಹಿರೇಮಠ ಬಂಧುಗಳೆಲ್ಲ ಮದುವೆಗೆ ಸಾಕ್ಷಿಯಾಗಿದ್ದರು.

ಕತ್ತೆಗಳಿಗೂ ವಸ್ತ್ರ ಸಿಂಗಾರ ಮುತ್ತೈದೆಯರಿಂದ ಆರತಿ ಭಾಗಿಯಾದವರಿಗೆ ಭೋಜನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT