ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕೋಡಿ: ಮಹಡಿ ಮನೆ ಮೊರೆ ಹೋದ ಜನರು

ನದಿ ತೀರದ ಗ್ರಾಮಸ್ಥರಿಗೆ ಬೆಂಬಿಡದ ಪ್ರವಾಹ ಭೀತಿ
ಚಂದ್ರಶೇಖರ ಎಸ್. ಚಿನಕೇಕರ
Published 28 ಆಗಸ್ಟ್ 2024, 4:11 IST
Last Updated 28 ಆಗಸ್ಟ್ 2024, 4:11 IST
ಅಕ್ಷರ ಗಾತ್ರ

ಚಿಕ್ಕೋಡಿ: ಮೇಲಿಂದ ಮೇಲೆ ಬರುವ ನದಿ ಪ್ರವಾಹ ಭೀತಿಯಿಂದ ಹೊರ ಬರಲು ನದಿ ತೀರದ ಬಹುತೇಕ ಜನರು ಮಹಡಿ ಮನೆಗಳ ಮೊರೆ ಹೋಗಿದ್ದಾರೆ. ತೋಟದ ವಸತಿ ಪ್ರದೇಶದಲ್ಲೂ ಮಹಡಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ.

ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ ಕೃಷ್ಣಾ ಹಾಗೂ ಉಪ ನದಿಗಳಲ್ಲಿ ಪ್ರತಿ ವರ್ಷ ಮಳೆಗಾಲ ಬಂದರೆ ಸಾಕು ನದಿ ತೀರದ ಜನರು ಜೀವ ಕೈಯಲ್ಲಿ ಹಿಡಿದು ದಿನ ದೂಡಬೇಕಾಗುತ್ತದೆ. ಅದರಲ್ಲೂ ಕೃಷ್ಣಾ ನದಿ ತೀರದ ಚಿಕ್ಕೋಡಿ ತಾಲ್ಲೂಕಿನ ಮಾಂಜರಿ, ಇಂಗಳಿ, ಯಡೂರ, ಚಂದೂರ, ಕಲ್ಲೋಳ, ಅಂಕಲಿ ಸೇರಿ ಅನೇಕ ಗ್ರಾಮಗಳು ಕೃಷ್ಣಾ ನದಿ ತೀರಕ್ಕೆ ಹೊಂದಿಕೊಂಡಿವೆ.

2019ರಲ್ಲಿ ಪ್ರವಾಹ ಭೀತಿಯಂತೂ ಈ ಗ್ರಾಮಗಳಲ್ಲಿ ದೊಡ್ಡ ಆಘಾತವನ್ನೇ ಉಂಟು ಮಾಡಿತ್ತು. ಹೀಗಾಗಿ ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ 4 ಸಾವಿರಕ್ಕೂ ಹೆಚ್ಚು ಮನೆಗಳು ಮಂಜೂರಾಗಿದ್ದವು. ಪೂರ್ಣ ಬಿದ್ಧ ಮನೆಗೆ ಪರಿಹಾರವಾಗಿ ₹5 ಲಕ್ಷ ರಾಜೀವ್ ಗಾಂಧಿ ವಸತಿ ನಿಗಮದಿಂದ ನೀಡಲಾಗಿತ್ತು. ಈಗಾಗಲೇ 3600ಕ್ಕೂ ಹೆಚ್ಚು ಮನೆಗಳನ್ನು ಸಂತ್ರಸ್ತರು ನಿರ್ಮಿಸಿಕೊಂಡಿದ್ದು, ಇವರಲ್ಲಿ ಶೇ 30 ರಷ್ಟು ಸಂತ್ರಸ್ತರು ಮಹಡಿ ಮನೆಯನ್ನು ಕಟ್ಟಿಕೊಂಡಿದ್ದಾರೆ.

ಒಂದು ಸಾವಿರಕ್ಕೂ ಹೆಚ್ಚು ಮಹಡಿ ಮನೆಗಳನ್ನು ಕೃಷ್ಣಾ ನದಿ ತೀರದ ಗ್ರಾಮದ ಸಂತ್ರಸ್ತರು ನಿರ್ಮಿಸಿಕೊಂಡಿದ್ದು, ಪ್ರವಾಹ ಭೀತಿ ಬಂದರೂ ಕೂಡ ಮಹಡಿ ಮನೆಯಲ್ಲಿ ಸಾಮಾನು ಸರಂಜಾಮುಗಳನ್ನು ಇಟ್ಟು ಕಾಳಜಿ ಕೇಂದ್ರ ಸೇರಿದಂತೆ ಸುರಕ್ಷಿತ ಪ್ರದೇಶಕ್ಕೆ ತೆರಳಲು ಅನುಕೂಲವಾಗುತ್ತಿದೆ. ಕೆಳಗಿನ ಮನೆಗೆ ಪ್ರವಾಹದಿಂದ ನೀರು ಹೊಕ್ಕರೂ ಕೂಡ ಮೇಲಿನ ಮನೆಗಳಲ್ಲಿ ವಾಸ ಮಾಡಲು ಅನುಕೂಲವಾಗುತ್ತದೆ ಎಂಬ ಕಾರಣದಿಂದ ಹೀಗೆ ಮಹಡಿ ಮನೆಗಳ ನಿರ್ಮಾಣದ ಮೊರೆ ಹೋಗಿದ್ದು ಕಂಡು ಬರುತ್ತಿದೆ.

ಮಹಡಿ ಮನೆಗಳು ಅಂದರೆ ಭಾರೀ ದೊಡ್ಡ ಪ್ರಮಾಣದ ಮನೆಗಳು ಇವುಗಳಲ್ಲ. ನೆಲ ಮಹಡಿಯಲ್ಲಿ ಎರಡು ಕೋಣೆಗಳು. 1ನೇ ಮಹಡಿಯಲ್ಲಿ ಎರಡು ಚಿಕ್ಕದಾದ ಕೊಠಡಿಗಳನ್ನು ನಿರ್ಮಿಸಿಕೊಂಡು ಸಂತ್ರಸ್ತರು ವಾಸವಾಗಿದ್ದರೆ. ಇನ್ನು ಕೆಲವರಂತೂ ಕೆಳಗಡೆ ಒಂದು ಕೊಠಡಿ, ಮೇಲೊಂದು ಕೊಠಡಿ ನಿರ್ಮಾಣ ಮಾಡಿಕೊಂಡೂ ವಾಸವಿದ್ದಾರೆ. ಹೀಗೆ ಮಹಡಿ ಮನೆ ಕಟ್ಟಿಕೊಂಡಿದ್ದು ಸಾಕಷ್ಟು ಜನರಿಗೆ ಪ್ರವಾಹ ಬಂದ ಸಂದರ್ಭದಲ್ಲಿ ಅನುಕೂಲವಾಗಿದೆ.

ನೆರೆ ಪೀಡಿತ ಗ್ರಾಮಗಳನ್ನು ಶಾಶ್ವತ ಸ್ಥಳಾಂತರ ಮಾಡಬೇಕೆಂಬ ಸಂತ್ರಸ್ತರ ಕೂಗು ಅರಣ್ಯರೋಧನವಾಗಿದೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಂತ್ರಸ್ತರು ಅಭಿಪ್ರಾಯ ಪಟ್ಟರೆ ಸ್ಥಳಾಂತರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಸಂತ್ರಸ್ತರು ನಿರ್ಮಿಸಿಕೊಂಡ ಚಿಕ್ಕದಾದ ಮಹಡಿ ಮನೆ.
ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಸಂತ್ರಸ್ತರು ನಿರ್ಮಿಸಿಕೊಂಡ ಚಿಕ್ಕದಾದ ಮಹಡಿ ಮನೆ.
ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಮಹಡಿ ಮನೆಯ ಹೊರನೋಟ
ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಮಹಡಿ ಮನೆಯ ಹೊರನೋಟ
ಕಳೆದ ಜುಲೈನಲ್ಲಿ ಪ್ರವಾಹದಿಂದ ಬಹುತೇಕರು ಕಾಳಜಿ ಕೇಂದ್ರ ಸೇರಿದಂತೆ ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು. ಮಹಡಿ ಮನೆ ಕಟ್ಟಿಕೊಂಡವರು ಮನೆಯೊಳಗೆ ಉಳಿದುಕೊಂಡಿದ್ದರು
ಶ್ರೀಕಾಂತ ಅಸೋದೆ ಸಂತ್ರಸ್ತರು ಮಾಂಜರಿ
ರ್ಕಾರ ನೀಡಿದ ಸಹಾಯ ಧನವೂ ಸೇರಿದಂತೆ ಸ್ವಂತ ಹಣವೊಂದಿಷ್ಟು ಹಾಕಿ ಕೆಲವರು ಮಹಡಿ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ತೋಟದಲ್ಲೂ ಮಹಡಿ ಮನೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ
ಸುಭಾಷ ಸಂಪಗಾವಿ ಉಪ ವಿಭಾಗಾಧಿಕಾರಿ ಚಿಕ್ಕೋಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT