ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಬಿರುಕು!

ಪರಿಶೀಲಿಸಿದ ಶಾಸಕರಿಂದ ಕ್ರಮಕ್ಕೆ ಸೂಚನೆ
Last Updated 11 ಜೂನ್ 2020, 13:45 IST
ಅಕ್ಷರ ಗಾತ್ರ

ತೆಲಸಂಗ: ಗ್ರಾಮದ ಹೊರವಲಯದ ತೆಲಸಂಗ ಕ್ರಾಸ್‌ನಿಂದ ಹಾಲಳ್ಳಿ ರಸ್ತೆಯ ಸಮೀಪದವರೆಗೆ ಜಲಸಂಪನ್ಮೂಲ ಇಲಾಖೆಯಿಂದ ಕೈಗೊಂಡಿರುವ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯ 4 ಕಿ.ಮೀ. ಉದ್ದದ ಕಾಲುವೆ ಕಾಮಗಾರಿ ಮುಕ್ತಾಯಗೊಳ್ಳುವ ಮುನ್ನವೇ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

‘ಮೃದು ಮಣ್ಣಿನ ಹೊಲದಲ್ಲಿ ಮಣ್ಣಿನ ಮೇಲೆ ಕೇವಲ ಮೂರು ಇಂಚು ಕಾಂಕ್ರೀಟ್‌ ಹಾಕಲಾಗಿದೆ. ವರ್ಷದ ಮೊದಲ ಮಳೆಗೇ ಈ ಮಣ್ಣು ಕುಸಿಯುತ್ತಿದೆ. ಇದು ಗೊತ್ತಿದ್ದರೂ ಕಾಮಗಾರಿ ಕೈಗೊಂಡಿರುವುದೇಕೆ’ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.

‘ಬೇಸಿಗೆ ಬಿಸಿಲಲ್ಲಿ ಹಾಕಿದ ಕಾಂಕ್ರೀಟ್‌ಗೆ ನೀರು ಹಾಕಲಿಲ್ಲ. ಕಾಮಗಾರಿ ಕಳಪೆ ಆಗಿಬಿಟ್ಟರೆ ಮುಂಬರುವ ದಿನಗಳಲ್ಲಿ ನಮ್ಮ ಹೊಲಗಳಿಗೆ ನೀರು ಹರಿಸುವುದು ಕಷ್ಟಸಾಧ್ಯ. ಈ ಮೃದು ಮಣ್ಣಿನಲ್ಲಿ ಕಾಟಾಚಾರಕ್ಕೆ ನಾಲೆಗೆ ಕಾಂಕ್ರೀಟ್ ಬೆಡ್ ಹಾಕಿದ್ದಾರೆ. 10 ಅಡಿ ಎತ್ತರದ ಕಾಲುವೆ ಕೆಲವೆಡೆ ನಿರ್ಮಿಸಲಾಗುತ್ತಿದೆ. ಮಳೆ ಸುರಿದರೆ ಮಣ್ಣು ಕುಸಿದು ಮುಚ್ಚಿ ಹೋಗುತ್ತದೆ’ ಎಂದು ತಿಳಿಸುತ್ತಾರೆ ಅವರು.

‘ಕಾಮಗಾರಿ ವೀಕ್ಷಿಸಲು ಬಂದಿದ್ದ ಶಾಸಕರು ತಾಕೀತು ಮಾಡಿದ್ದರೂ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ತನಿಖೆ ನಡೆಸಬೇಕು. ಬಳಸಿದ ಸಾಮಗ್ರಿಗಳ ಗುಣಮಟ್ಟದ ಬಗ್ಗೆ ಪರೀಕ್ಷೆ ನಡೆಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಬೇಕಾಗುತ್ತದೆ’ ಎಂದು ತಿಳಿಸಿದರು.

‘ಕಾಮಗಾರಿಯು ಗುಣಮಟ್ಟದಿಂದ ಕೂಡಿರಬೇಕು. ಒಂದು ವೇಳೆ ದೂರು ಬಂದರೆ ಹಣ ಬಿಡುಗಡೆ ಮಾಡುವುದನ್ನು ತಡೆಹಿಡಿಯಲಾಗುವುದು’ ಎಂದು ಶಾಸಕರು ತಾಕೀತು ಮಾಡಿದ್ದರು.

‘ಎಲ್ಲೆಲ್ಲಿ ಬಿರುಕು ಕಾಣಿಸಿಕೊಂಡಿದೆಯೋ ಅಲ್ಲಿ ಮರು ನಿರ್ಮಿಸಲು ಸೂಚಿಸಲಾಗುವುದು. ಒಂದೆರೆಡು ದಿನದಲ್ಲಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ನೋಡಿಕೊಳ್ಳಲಾಗುವುದು’ ಎಂದು ಜಲಸಂ‍ಪನ್ಮೂಲ ಇಲಾಖೆಯ ಎಇಇ ನಾಗಪ್ಪ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT