ಪರಶುರಾಮ ನಂದೇಶ್ವರ
ಅಥಣಿ: ಶಾಸಕ ಲಕ್ಷ್ಮಣ ಸವದಿ ಅವರ ಕನಸಿನ ಕೂಸಾದ ಪಶು ವೈದ್ಯಕೀಯ ಮಹಾವಿದ್ಯಾಲಯ ಉದ್ಘಾಟನೆಗೆ ಸಿದ್ಧಗೊಂಡಿದೆ. ಆ. 11ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಈ ಭಾಗದ ರೈತರ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ದೊರಕಲಿ ಎಂಬ ಉದ್ದೇಶದಿಂದ ಆರಂಭಿಸಿದ ಈ ಕಾಲೇಜು ಹೊಸ ಕನಸುಗಳನ್ನು ಹುಟ್ಟುಹಾಕಿದೆ.
ಜಿಲ್ಲಾ ಕೇಂದ್ರದಲ್ಲಿ ಆಗಬೇಕಾದ ಪಶುವೈದ್ಯಕೀಯ ಮಹಾ ವಿದ್ಯಾಲಯವನ್ನು ಗ್ರಾಮೀಣ ಪ್ರದೇಶಕ್ಕೆ ತರುವಲ್ಲಿ ಲಕ್ಷ್ಮಣ ಸವದಿ ಯಶಸ್ವಿಯಾಗಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಬಿ.ಎಸ್. ಯಡಿಯುರಪ್ಪ ಅವರ ಮೇಲೆ ಒತ್ತಡ ತಂದು ಅಥಣಿ ತಾಲ್ಲೂಕಿನ ಕೊಕಟನೂರಿನಲ್ಲಿ ನಿರ್ಮಾಣಕ್ಕೆ ಹೆಜ್ಜೆ ಇಟ್ಟಿದ್ದರು.
211 ಎಕರೆ ವಿಸ್ತಾರವಾದ ಜಮೀನಿನಲ್ಲಿ 2012ರಲ್ಲಿ ಕಾಮಗಾರಿಗೆ ಚಾಲನೆ ನೀಡಿ, ₹87 ಕೋಟಿ ವೆಚ್ಚ ನಿಗದಿ ಮಾಡಲಾಗಿತ್ತು. ನಂತರ ಕಟ್ಟಡ ಕಾಮಗಾರಿಗೆ ಸುಮಾರು ₹78 ಕೋಟಿ, ವಾಹನ, ಪ್ರಯೋಗಾಲಯ, ಸಾಮಗ್ರಿಗಳು ಹಾಗೂ ಪೀಠೋಪಕರಣ ಸೇರಿದಂತೆ ಇನ್ನುಳಿದ ಅವಶ್ಯಕತೆಗಳಿಗೆ ವೆಚ್ಚ ಹೆಚ್ಚಾಯಿತು. ನಂತರ ಯಾವುದೇ ಅನುದಾನ ಬಾರದೆ ನಾಲ್ಕು ವರ್ಷಗಳ ಕಾಲ ನನೆಗುದಿಗೆ ಬಿದ್ದಿತು. ಮತ್ತೆ 2019ರಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಇತರ ಅಭಿವೃದ್ಧಿ ಕಾಮಗಾರಿಗೆ ₹37 ಕೋಟಿ ಅನುದಾನವನ್ನು ಲಕ್ಷ್ಮಣ ಸವದಿ ಅವರು ಪಡೆದುಕೊಂಡರು.
9 ವರ್ಷಗಳಿಂದ ನಿರ್ಮಾಣ ಹಂತದಲ್ಲಿರುವ ಈ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಈಗ ಉದ್ಘಾಟನೆ ಭಾಗ್ಯ ಬಂದಿದ್ದು ತಾಲ್ಲೂಕಿನ ರೈತರಲ್ಲಿ ಸಂತಸ ಮೂಡಿಸಿದೆ.
ರೈತರ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪಶು ವೈದ್ಯಕೀಯ ಕಾಲೇಜು ಆರಂಭಿಸಿದ್ದೇನೆ. ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ಇದಕ್ಕೆ ಆದ್ಯತೆ ನೀಡಿದ್ದು ಸಮಾಧಾನ ತಂದಿದೆಶಾಸಕ ಲಕ್ಷ್ಮಣ ಸವದಿ ಶಾಸಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.