ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಲಹೊಂಗಲ: ಬೆಳವಡಿ ಮಲ್ಲಮ್ಮ ಉತ್ಸವಕ್ಕೆ ಚಾಲನೆ

Published 29 ಫೆಬ್ರುವರಿ 2024, 5:37 IST
Last Updated 29 ಫೆಬ್ರುವರಿ 2024, 5:37 IST
ಅಕ್ಷರ ಗಾತ್ರ

ಬೈಲಹೊಂಗಲ: ಮಹಿಳಾ ಸಮಾಜಕ್ಕೆ ಬಹುದೊಡ್ಡ ಪ್ರೇರಣೆಯಾಗಿರುವ ವೀರವನಿತೆ ಬೆಳವಡಿ ಮಲ್ಲಮ್ಮಳ ಶೌರ್ಯ, ಸಾಹಸ, ನಾಡಪ್ರೇಮವನ್ನು ಮಕ್ಕಳಿಗೆ ಪರಿಚಯಿಸಿಕೊಡಬೇಕೆಂಬ ಸದುದ್ದೇಶದಿಂದ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ತಾಲ್ಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮನ ಉತ್ಸವ– 2024ರ ಜಾನಪದ ಕಲಾವಾಹಿನಿಗೆ ಬುಧವಾರ ಅದ್ದೂರಿಯಾಗಿ ಚಾಲನೆ ನೀಡಲಾಯಿತು.

ಗ್ರಾಮದ ಮಲ್ಲಮ್ಮನ ವೃತ್ತದಲ್ಲಿ ಬಿಸಿಲಿನ ಝಳದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ ಗ್ರಾಮಸ್ಥರು, ಮಲ್ಲಮ್ಮನ ಅಭಿಮಾನಿಗಳಿಂದ ವೀರವನಿತೆ ಬೆಳವಡಿ ಮಲ್ಲಮ್ಮ, ರಾಜಾ ಈಶಪ್ರಭು, ಗ್ರಾಮದ ಅಧಿ ದೇವರಾದ ವೀರಭದ್ರ ಸ್ವಾಮೀಗೆ ಜಯಘೋಷಗಳು ಮೊಳಗಿದವು.

ಉತ್ಸವದ ಮೊದಲ ದಿನ ಆರಂಭಗೊಂಡ ಜಾನಪದ ಕಲಾವಾಹಿನಿ ಭವ್ಯ ಮೆರವಣಿಗೆಯಲ್ಲಿ ಕಲಾ ತಂಡಗಳು ಬೆಳವಡಿ ಮಲ್ಲಮ್ಮನ ಶೌರ್ಯ, ಸಾಹಸ, ಸ್ವಾಭಿಮಾನ, ಹಿಂದೂ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರ ಜೊತೆ ಹೋರಾಟ ನಡೆಸಿ ಸಹೋದರತ್ವದ ಪ್ರೀತಿ ಸಂಪಾಧಿಸಿದ್ದನ್ನು ನೆನಪಿಸಿದವು.

ಮಲ್ಲಮ್ಮನ ಸಾಹಸ ವಿಶ್ವದೆಲ್ಲೆಡೆ ಪಸರಿಸಲಿ: ಮಲ್ಲಮ್ಮನ ವೃತ್ತದಲ್ಲಿ ಶಾಸಕ ಮಹಾಂತೇಶ ಕೌಜಲಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ‘ನಾಡಿನ ವೀರರಾಣಿಯರಲ್ಲಿ ಮಲ್ಲಮ್ಮನವರ ಕೀರ್ತಿ, ಹೆಸರು ಅಜರಾಮರವಾಗಿದೆ. ಆ ಮಹಾತಾಯಿ ಆದರ್ಶ, ನಾಡ ಪ್ರೇಮ, ಸ್ವಾಭಿಮಾನವನ್ನು ಮಕ್ಕಳಿಗೆ ಪರಿಚಯಿಸಿ. ಮಲ್ಲಮ್ಮನ ಸಾಹಸ ವಿಶ್ವದೆಲ್ಲೆಡೆ ಪಸರಿಸಲಿ’ ಎಂದರು.

ನಂತರ ಶಾಸಕ ಮಹಾಂತೇಶ ಕೌಜಲಗಿ, ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ, ತಹಶೀಲ್ದಾರ್ ಸಚ್ಚಿದಾನಂದ ಕುಚನೂರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರಯ್ಯ ಕಾರಿಮನಿ ಡೊಳ್ಳು ಬಾರಿಸುವ ಮೂಲಕ ಜಾನಪದ ಕಲಾ ಮೇಳಕ್ಕೆ ಚಾಲನೆ ನೀಡಿದರು. ಕಲಾ ತಂಡಗಳ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ಮಲ್ಲಮ್ಮ ವೃತ್ತಕ್ಕೆ ಬಂದು ತಲುಪಿತು.

ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ಕಂದಕೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಪಿಡಿಒ ಅವಿನಾಶ ಅಂಗರಗಟ್ಟಿ, ತಾಲ್ಲೂಕು ವೈದ್ಯಾಧಿಕಾರಿ ಸಂಜಯ ಸಿದ್ದನ್ನವರ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಸಂಗೀತ ಕಿನೇಕರ, ಹಿರಿಯರಾದ ಎಂ.ಎಂ.ಕಾಡೇಶನವರ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಈರಣ್ಣಾ ಕರೀಕಟ್ಟಿ, ಸಮಾಜ ಸೇವಕ ಪ್ರಕಾಶ ಹುಂಬಿ, ಶಂಕರ ಕರೀಕಟ್ಟಿ, ಎಂ.ಯು.ಉಪ್ಪಿನ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ಯುವಕ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಮಹಿಳಾ ಸ್ತ್ರೀ ಶಕ್ತಿ ಸಂಘಟನೆ ಸದಸ್ಯರುಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ರಂಜಿಸಿದ ಜಾನಪದ ಕಲಾವಾಹಿನಿ
ಜಾನಪದ ಕಲಾ ವಾಹಿನಿಯಲ್ಲಿ ಭಾಗಿಯಾದ ಕಲಾ ತಂಡಗಳು  ನೋಡುಗರನ್ನು ರಂಜಿಸಿದವು. ಮೂಡಲಗಿ ಕಲಾವಿದ ಗೂಳಪ್ಪ ವಿಜಯ ನಗರದ ಪುರವಂತಿಕೆ ಶಿವನಪ್ಪ ಚಂದರಗಿ ಡೊಳ್ಳು ಕುಣಿತ ಅಥಣಿ ಶಶಿಧರ ಭಜಂತ್ರಿ ಮಹಿಳಾ ಡೊಳ್ಳು ಕುಣಿತ ರಾಮದುರ್ಗ ಶಂಕರೆವ್ವ ಮುಗಳಿ ಮಹಿಳಾ ಡೊಳ್ಳು ಕುಣಿತ ಗಂಗಪ್ಪ ಮೂಡಲಗಿ ಪುರವಂತಿಕೆ ಮಾರುತಿ ಪ್ಯಾಟಿ ಜಗ್ಗಲಗಿ ಭೀಮಪ್ಪ ನೆಜಕರ ಕರಡಿ ಮಜಲು ಲಕ್ಷ್ಮಣ ಮುಗಳಿ ಗೊಂಬೆ ಕುಣಿತ ಮಹಾಂತೇಶ ಹೂಗಾರ ಸಂಬಳ ವಾದನ ಮಿಲಿಂದ ಸಂಗನ್ನವರ ಹಲಿಗೆ ವಾದನ ಯಮನಪ್ಪ ಬೆಳಗಂಟಿ ಹೆಜ್ಜೆ ಮೇಳ ಸೇರಿದಂತೆ ವಿವಿಧ ಕಲಾವಿದರ ಕಲೆಗಳು ರಂಜಿಸಿದವು. ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಯುವಕರು ಡಿಜೆ ಸಂಗೀತ ನಾದಕ್ಕೆ ಕುಣಿದು ಕುಪ್ಪಳಿಸಿದರು. ಸುಮಾರು 23ಕ್ಕೂ ಹೆಚ್ಚು ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಗ್ರಾಮಸ್ಥರು ಹಣೆಗೆ ತಿಲಕ ಪೇಠ ತೊಟ್ಟು ಮೆರವಣಿಗೆಯಲ್ಲಿ ಸಾಗಿದರು. ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿ ಕಲಾಮೇಳದ ಮೆರುಗು ಹೆಚ್ಚಿಸಿದರು. ಉತ್ಸವದ ಮುಖ್ಯ ವೇದಿಕೆ ಪಕ್ಕದಲ್ಲಿ ವಸ್ತು ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT