ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಗೋವಾ ರಸ್ತೆ ಬಂದ್‌, ಕೋಟೆ ಕೆರೆ ಭರ್ತಿ

ಮಳೆಯಿಂದ ವಿವಿಧೆಡೆ ಅವಾಂತರ
Last Updated 6 ಆಗಸ್ಟ್ 2019, 13:46 IST
ಅಕ್ಷರ ಗಾತ್ರ

ಬೆಳಗಾವಿ: ಧಾರಾಕಾರ ಮಳೆಯಿಂದ ಮಂಗಳವಾರ ನಗರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಅವಾಂತರ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಇಲ್ಲಿನ ಶಾಸ್ತ್ರಿ ನಗರ, ಓಂ ನಗರ, ಸಮರ್ಥ ನಗರ, ಅನ್ನಪೂರ್ಣೇಶ್ವರಿ ಕಾಲೊನಿ, ಕಪಿಲೇಶ್ವರ ಕಾಲೊನಿ, ಆನಿಗೋಳ, ಗಾಂಧಿ ನಗರ, ಖಾಸಬಾಗ ಸೇರಿ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರಿತಪಿಸುವಂತಾಗಿದೆ.

ಸತತ ಮಳೆಯಿಂದ ಪ್ರತಿದಿನ ನೀರನ್ನು ಹೊರಹಾಕುವುದೇ ನಿವಾಸಿಗಳ ಕಾಯಕವಾಗಿದೆ. ನೀರು ಹೊರಹಾಕಿದರೂ ಕೂಡ ಪ್ರಯೋಜನವಾಗುತ್ತಿಲ್ಲ. ಧಾರಾಕಾರ ಮಳೆಯಿಂದ ಮತ್ತಷ್ಟು ನೀರು ಒಳಬರುತ್ತಿದೆ. ಕೆಲವು ಮನೆಗಳಲ್ಲಿ ಮೋಟಾರ್‌ ಮೂಲಕ ನೀರನ್ನು ಹೊರಹಾಕಲಾಯಿತು.

ಗಾಂಧಿ ನಗರ, ಹಳೇ ಪಿ.ಬಿ. ರಸ್ತೆ, ಖಾಸಬಾಗ ಸೇರಿದಂತೆ ವಿವಿಧೆಡೆ ಕೆಲವು ಮಳಿಗೆಗಳಲ್ಲಿ ಚರಂಡಿ ನೀರು ತುಂಬಿಕೊಂಡು ಸಾಮಗ್ರಿಗಳಿಗೆ ಹಾನಿಯಾಗಿದೆ. ಯಡಿಯೂರಪ್ಪ ರಸ್ತೆಯಲ್ಲಿ ಬಳ್ಳಾರಿ ನಾಲಾ ನೀರು ಹರಿಯುತ್ತಿರುವುದರಿಂದ ರಸ್ತೆ ಸಂಚಾರ ಕಡಿತಗೊಂಡಿದೆ. ಗೋವಾ ರಸ್ತೆ ಬಂದ್‌ ಆಗಿರುವುದರಿಂದ ನಗರದ ಮೂಲಕ ಗೋವಾಕ್ಕೆ ತೆರಳುವ ಲಾರಿಗಳು ಹೆದ್ದಾರಿ ಪಕ್ಕದ ಯಡಿಯೂರಪ್ಪ ರಸ್ತೆಯಲ್ಲೇ ನಿಂತಿವೆ.

ಕೋಟೆ ಕೆರೆ ಭರ್ತಿ: ನಗರದ ಹೃದಯಭಾಗದಲ್ಲಿರುವ ಕೋಟೆ ಕೆರೆ ಸಂಪೂರ್ಣ ಭರ್ತಿಯಾಗಿದೆ. ಇನ್ನೂ ಕೆಲವು ದಿನ ಮಳೆ ಇದೇ ರೀತಿ ಮುಂದುವರೆದರೆ ರಸ್ತೆಯ ಮೇಲೆ ನೀರು ಹರಿಯುವ ಸಾಧ್ಯತೆ ಇದೆ. ಕೆರೆಯ ಹಿಂಭಾಗದ ಬೃಹದಾಕಾರದ ಚರಂಡಿ ತುಂಬಿ ಹರಿದು ಶಿವಾಜಿ ನಗರ ಹಾಗೂ ವೀರಭದ್ರ ನಗರದಲ್ಲಿನ ಮನೆಯ ಆವರಣ ಹಾಗೂ ರಸ್ತೆಗಳಲ್ಲಿ ನೀರು ನಿಂತಿದೆ.ಶಾಸಕ ಅನಿಲ ಬೆನಕೆ ಭೇಟಿ ನೀಡಿ ಪರಿಶೀಲಿಸಿದರು.

ಕಾಕತಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ (NH-4) ಮೊಣಕಾಲುದ್ದ ನೀರು ನಿಂತಿದ್ದರಿಂದ ರಸ್ತೆ ಸರೋವರದಂತಾಗಿತ್ತು.ಮುಂಜಾಗ್ರತಾ ಕ್ರಮವಾಗಿ ಸಂಚಾರ ಸ್ಥಗಿತಗೊಳಿಸಲಾಗಿದೆ.

ರಕ್ಕಸಕೊಪ್ಪ ಜಲಾಶಯ ತುಂಬಿ ಹರಿಯುತ್ತಿದ್ದು, ಬೆನಕನಹಳ್ಳಿ ಸೇತುವೆ ಜಲಾವೃತಗೊಂಡಿದೆ. ಇದರಿಂದ ರಕ್ಕಸಕೊಪ್ಪ ಮತ್ತು ಬೆಳಗುಂದಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸುತ್ತಲಿನ ಹೊಲ–ಗದ್ದೆಗಳಲ್ಲೂ ನೀರು ಆವರಿಸಿದೆ. ಕಡೋಲಿಯಲ್ಲಿ ಮಾರ್ಕಂಡೇಯ ನದಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಕಡೋಲಿ–ಅಲತಗಾ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಯಳ್ಳೂರ, ಧಾಮಣೆ ರಸ್ತೆಗಳಲ್ಲಿಯೂ ಸಂಚಾರ ಕಡಿತಗೊಂಡಿದೆ.

ಚರಂಡಿ ಸ್ವಚ್ಛಗೊಳಿಸಿದ ಶಾಸಕ: ಶಾಸಕ ಅಭಯ ಪಾಟೀಲ ವಡಗಾವಿ ಹಾಗೂ ಶಹಾಪುರದ ವಿವಿಧ ಬಡಾವಣೆಗಳಲ್ಲಿ ಸ್ಥಳೀಯರೊಂದಿಗೆ ಹರಿಯುವ ನೀರಿನಲ್ಲೇ ಸಂಚರಿಸಿ, ನೀರು ಹರಿದುಹೋಗಲು ಅನುಕೂಲವಾಗುವಂತೆ ಸಲಕಿಯಿಂದ (ಪೌಡೆ) ಚರಂಡಿಯಲ್ಲಿನ ತ್ಯಾಜ್ಯ ತೆಗೆದರು.

ರೈಲ್ವೆ ನಿಲ್ದಾಣ ಆವರಣದಲ್ಲಿನ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಮಳೆ ನೀರು ನುಗ್ಗಿತ್ತು. ಸಿಬ್ಬಂದಿ ನೀರು ಹೊರಹಾಕಲು ಹರಸಾಹಸ ಪಟ್ಟರು. ಶಾಹೂ ನಗರ ಮತ್ತು ಕಂಗ್ರಾಳಿ ಬಿ.ಕೆ. ರಸ್ತೆಯಲ್ಲಿ ಮಳೆಯಿಂದಾಗಿ 3 ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT