ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ | ವನಿತೆಯರು ಹುಟ್ಟುಹಾಕಿದ ‘ಕಾತರ’

ಅಭ್ಯರ್ಥಿಗಳ ನಿದ್ದೆಗೆಡಿಸಿದ ಮಹಿಳಾ ಮತದಾರರು; ಗೃಹಲಕ್ಷ್ಮಿ ಆಶೀರ್ವಾದ ಯಾರಿಗೆಂಬುದೇ ಕುತೂಹಲ
Published 4 ಜೂನ್ 2024, 3:54 IST
Last Updated 4 ಜೂನ್ 2024, 3:54 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಮಹಿಳಾ ಮತದಾರರು ಅಭ್ಯರ್ಥಿಗಳ ನಿದ್ದೆಗೆಡಿಸಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಈ ಬಾರಿ ಹಿಂದೆಂದಿಗಿಂತ ಹೆಚ್ಚು ಮಹಿಳೆಯರು ಹಕ್ಕು ಚಲಾಯಿಸಿದ್ದಾರೆ. ಈ ಚುನಾವಣೆಯಲ್ಲಿ ಯಾರೇ ಗೆದ್ದರೂ ಅವರ ಹಿಂದೆ ‘ವನಿತಾ ಸೈನ್ಯ’ ಇದೆ ಎಂದೇ ಅರ್ಥ.

‘ಮತದಾನ ಪ್ರಮಾಣ ಹೆಚ್ಚಳವಾದರೆ ಬಿಜೆಪಿಗೆ ಲಾಭ’ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ. 2014 ಹಾಗೂ 2019ರ ಚುನಾವಣೆಗಳಲ್ಲಿ ಇದು ನಿಜವೂ ಆಯಿತು. ಈ ಬಾರಿ ಕೂಡ ಮತದಾನ ಪ್ರಮಾಣ ಹಿಂದಿಗಿಂತಲೂ ಉತ್ತಮವಾಗಿದೆ. ಹಾಗಾಗಿ, ಬಿಜೆಪಿಗೆ ಗೆಲುವು ಸಿಗಲಿದೆ ಎಂಬ ಉಮೇದು ಕಾರ್ಯಕರ್ತರದ್ದು. ಆದರೆ, ಇದಕ್ಕೆ ಕಾಂಗ್ರೆಸ್‌ ನಾಯಕರು ಹೇಳುವ ತರ್ಕವೇ ಬೇರೆ.

ಈ ಹಿಂದಿನ ಚುನಾವಣೆಗಳಲ್ಲಿ 18 ವರ್ಷದ ತುಂಬಿದ ಬಹುಪಾಲು ಯುವಜನರನ್ನು ಮತದಾರ ಪಟ್ಟಿಗೆ ಸೇರಿಸಲಾಯಿತು. ಯುವಜನರು ನರೇಂದ್ರ ಮೋದಿ ಪ್ರಭಾವಕ್ಕೆ ಒಳಗಾಗಿ ಬಿಜೆಪಿಗೆ ಮತ ಹಾಕಿದ್ದರು. ಆದರೆ, ಈ ಬಾರಿ ಮತದಾನ ಪ್ರಮಾಣ ಹೆಚ್ಚಳವಾಗಿದ್ದು ಮಹಿಳೆಯರಿಂದ ಹೊರತು; ಯುವಜನರಿಂದ ಅಲ್ಲ. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳೇ ಮಹಿಳೆಯರಿಗೆ ಪ್ರೇರಣೆ. ಈ ಬಾರಿಯ ಉತ್ತಮ ಮತದಾನವು ಕಾಂಗ್ರೆಸ್‌ಗೆ ವರದಾನ ಎಂಬುದು ಅವರ ವಿಶ್ವಾಸ.

ಇತ್ತ ಮೋದಿ ಪ್ರಭಾವಳಿ– ಅತ್ತ ಕಾಂಗ್ರೆಸ್‌ ಗ್ಯಾರಂಟಿ; ಎರಡರ ಮಧ್ಯೆಯೇ ಈ ಚುನಾವಣೆ ನಡೆಯಿತು ಎಂಬಷ್ಟರ ಮಟ್ಟಿಗೆ ಎರಡೂ ಪಕ್ಷದವರು ‍ಪ್ರಚಾರ ಮಾಡಿದರು.

‘ರಾಮ ಮಂದಿರ ನಿರ್ಮಾಣ ಮಾಡುವ ಮೂಲಕ ನರೇಂದ್ರ ಮೋದಿ ಅವರು ಭಾರತೀಯರ 450 ವರ್ಷಗಳ ಬಯಕೆಯನ್ನು ಈಡೇರಿಸಿದ್ದಾರೆ. ಜನ ಅವರನ್ನು ಮೂರನೇ ಬಾರಿ ಪ್ರಧಾನಿ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ, ಬಿಜೆಪಿ ಅಭ್ಯರ್ಥಿಗಳ ಗೆಲುವು ಸುಲಭ’ ಎಂಬುದು ಕೆಲವರ ಹೇಳಿಕೆ.

‘ಕೋವಿಡ್‌, ಬರ, ಬೆಲೆ ಏರಿಕೆಯಿಂದ ಜನ ಕಂಗೆಟ್ಟಿದ್ದಾರೆ. ಗ್ಯಾರಂಟಿ ಯೋಜನೆಗಳು ಜೀವನಾಸರೆ ಆಗಿವೆ. ಮೇಲಾಗಿ, ಗೃಹಲಕ್ಷ್ಮಿ, ಗೃಹಭಾಗ್ಯ, ಅನ್ನಭಾಗ್ಯ ಯೋಜನೆಗಳು ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬಿವೆ. ಹೀಗಾಗಿ, ಹೆಣ್ಣುಮಕ್ಕಳ ಆಶೀರ್ವಾದ ತಮಗೇ ಸಿಗಲಿದೆ’ ಎಂಬ ಭರವಸೆ ಕಾಂಗ್ರೆಸ್ಸಿಗರದ್ದು.

ಕ್ಷಣಗಣನೆ: ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಮಂಗಳವಾರ (ಜೂನ್‌ 4) ಸಂಜೆಯ ಹೊತ್ತಿಗೆ ಹಣೆಬರಹ ಗೊತ್ತಾಗಲಿದೆ. ನಾಲ್ವರೂ ಅಭ್ಯರ್ಥಿಗಳು ಗೆಲುವು ತಮ್ಮದೇ ಎಂಬ ಉಮೇದಿನಲ್ಲಿರುವುದು ಸಹಜ. ಆದರೆ, ತಳಮಳ ತಪ್ಪಿದ್ದಲ್ಲ. ಮತದಾನೋತ್ತರ ಸಮೀಕ್ಷೆಗಳಂತೂ ಮತ್ತಷ್ಟು ನಿದ್ದೆಗೆಡುವಂತೆ ಮಾಡಿವೆ. ಎರಡೂ ಕ್ಷೇತ್ರಗಳಲ್ಲಿ ನೇರಾನೇರ ಸ್ಪರ್ಧೆ ಏರ್ಪಟ್ಟಿದ್ದರಿಂದ ಕಾರ್ಯಕರ್ತರೂ ತುದಿಗಾಲ ಮೇಲೆ ನಿಲ್ಲುವಂತಾಗಿದೆ.

ಬಿಜೆಪಿಯ ಅನುಭವಿ ಅಭ್ಯರ್ಥಿಗಳಾದ ಜಗದೀಶ ಶೆಟ್ಟರ್‌ ಹಾಗೂ ಅಣ್ಣಾಸಾಹೇಬ ಜೊಲ್ಲೆ ಎದುರು ಕಾಂಗ್ರೆಸ್‌ ಹೊಸ ತಂತ್ರ ಹೂಡಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪುತ್ರ ಮೃಣಾಲ್‌ ಹಾಗೂ ಸಚಿವ ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಅವರಂಥ ಯುವ ರಾಜಕಾರಣಿಗಳನ್ನು ಕಣಕ್ಕಿಳಿಸಿದೆ. ಈ ಪ್ರಯೋಗದ ಕಾರಣಕ್ಕೆ ಬೆಳಗಾವಿ– ಚಿಕ್ಕೋಡಿ ಕ್ಷೇತ್ರಗಳು ರಾಜ್ಯದ ಗಮನ ಸೆಳೆದಿವೆ.

ಮೃಣಾಲ್‌ ಹೆಬ್ಬಾಳಕರ
ಮೃಣಾಲ್‌ ಹೆಬ್ಬಾಳಕರ
ಅಣ್ಣಾಸಾಹೇಬ ಜೊಲ್ಲೆ
ಅಣ್ಣಾಸಾಹೇಬ ಜೊಲ್ಲೆ
ಪ್ರಿಯಾಂಕಾ ಜಾರಕಿಹೊಳಿ
ಪ್ರಿಯಾಂಕಾ ಜಾರಕಿಹೊಳಿ
ಮತದಾನ ದಿನವಾದ ಮೇ 7ರಂದು ಬೈಲಹೊಂಗಲದಲ್ಲಿ ಸಾಲಿನಲ್ಲಿ ನಿಂತಿದ್ದ ವನಿತೆಯರು / ಸಾಂದರ್ಭಿಕ ಚಿತ್ರ
ಮತದಾನ ದಿನವಾದ ಮೇ 7ರಂದು ಬೈಲಹೊಂಗಲದಲ್ಲಿ ಸಾಲಿನಲ್ಲಿ ನಿಂತಿದ್ದ ವನಿತೆಯರು / ಸಾಂದರ್ಭಿಕ ಚಿತ್ರ

ಎಲ್ಲಿ ಎಷ್ಟು ಮಹಿಳೆಯರ ಮತದಾನ? ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 966134 ಮಹಿಳಾ ಮತದಾರರು ಇದ್ದಾರೆ. ಇವರಲ್ಲಿ 677914 ಮಂದಿ ಹಕ್ಕು ಚಲಾಯಿಸಿದ್ದಾರೆ. ಶೇ 70.17ರಷ್ಟು ಸಾಧನೆ ತೋರಿದ್ದಾರೆ. ಚಿಕ್ಕೋಡಿ ಕ್ಷೇತ್ರದಲ್ಲಿ 876414 ಮಹಿಳಾ ಮತದಾರರು ಇದ್ದು 680617 ಮಂದಿ ಮತ ಹಾಕಿದ್ದಾರೆ. ಒಟ್ಟು 78.66ರಷ್ಟು ಮತದಾನ ಪ್ರಮಾಣ ಕಂಡುಬಂದಿದೆ. ಎರಡೂ ಕಡೆ ಮಹಿಳಾ ಮತದಾರರಿಗಿಂತ ಪುರುಷರ ಸಂಖ್ಯೆ ತುಸು ದೊಡ್ಡದಿದೆ. ಆದರೆ ಚಲಾವಣೆ ಪ್ರಮಾಣದಲ್ಲಿ ಮಹಿಳೆಯರು ಮೇಲುಗೈ ಸಾಧಿಸಿದ್ದು ಗಮನಾರ್ಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT