ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಅರಿವಿನ ಕೊರತೆ; ಹೆಚ್ಚುತ್ತಿರುವ ರಸ್ತೆ ಅಪಘಾತ

ಸಂಚಾರ ನಿಯಮ ಉಲ್ಲಂಘನೆ, ಜಿಲ್ಲೆಯಲ್ಲಿ ಹೆಚ್ಚಿದ ಬೈಕ್‌ ಅಪಘಾತಗಳು, ಪೊಲೀಸ್‌ ಇಲಾಖೆಯಿಂದ ಅರಿವು– ದಂಡ
ಸಂತೋಷ ಈ. ಚಿನಗುಡಿ
Published 8 ಜನವರಿ 2024, 5:22 IST
Last Updated 8 ಜನವರಿ 2024, 5:22 IST
ಅಕ್ಷರ ಗಾತ್ರ

ಬೆಳಗಾವಿ:

l ಬೆಳಗಾವಿ ರೈಲ್ವೆ ಮೂರನೇ ಗೇಟ್‌ ಬಳಿ ಬೈಕಿಗೆ ಕಾರ್ ಡಿಕ್ಕಿ; ಯುವತಿ ಸ್ಥಿತಿ ಗಂಭೀರ

l ಹಿರೇಬಾಗೇವಾಡಿ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಬೈಕ್‌ ಜಾರಿಬಿದ್ದು ಯುವಕರಿಬ್ಬರು ಸ್ಥಳದಲ್ಲೇ ಸಾವು

l ಕಮಕಾರಟ್ಟಿ ಸೇತುವೆ ಮೇಲಿಂದ ಬಿದ್ದ ಬೈಕ್‌: ಯುವಕರು ಸ್ಥಳದಲ್ಲೇ ಸಾವು

l ಅಥಣಿಯಲ್ಲಿ ಬೈಕ್‌ ಅಪಘಾತ: ಯೋಧ ಸ್ಥಳದಲ್ಲೇ ಸಾವು

l ಚಿಕ್ಕೋಡಿಯಲ್ಲಿ ಬೈಕ್‌ ಡಿಕ್ಕಿ ಹೊಡೆಸಿದ ಪಾನಮತ್ತ ಯುವಕರು; ವೃದ್ಧ ಸ್ಥಳದಲ್ಲೇ ಸಾವು..

 – ಈ ಮೇಲಿನ ಎಲ್ಲ ಅಪಘಾತಗಳಲ್ಲೂ ಮೂರು ವಿಷಯಗಳು ಸಾಮಾನ್ಯವಾಗಿವೆ. ಮೊದಲನೇಯದು ಬೈಕ್‌ ಸವಾರರು ಹೆಲ್ಮೆಟ್‌ ಧರಿಸಿರಲಿಲ್ಲ, ಎರಡನೇಯದ್ದು ಕೆಲವರು ಪಾನಮತ್ತರಾಗಿ ಬೈಕ್‌ ಓಡಿಸಿದ್ದರು, ಮೂರನೇಯದ್ದು ಸತ್ತವರೆಲ್ಲ ಯುವಕರೇ!

ಜಿಲ್ಲೆಯಲ್ಲಿ ಬೈಕ್‌ ಅವಘಡಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಅದರಲ್ಲೂ ವರ್ಷದಿಂದ ವರ್ಷಕ್ಕೆ ಲೆಕ್ಕ ಹಾಕಿದರೆ ಸಾವು– ನೋವುಗಳ ಸಂಖ್ಯೆ ವಿಪರೀತ ಹೆಚ್ಚುತ್ತಿದೆ. ಈ ಎಲ್ಲ ಅಪಘಾತಗಳಲ್ಲಿ ಸತ್ತವರು ಅಥವಾ ಗಾಯಗೊಂಡವರಲ್ಲಿ ಯುವಜನರೇ ಹೆಚ್ಚು. ಅಲ್ಲದೇ, ಇತರರ ಸಾವಿಗೆ ಕಾರಣರಾದವರೂ ಯುವಕರೇ ಆಗಿದ್ದಾರೆ.

ಜೀವದ ಮಹತ್ವ ಹಾಗೂ ರಸ್ತೆ ಸುರಕ್ಷತೆಯ ಬಗ್ಗೆ ಎಷ್ಟೇ ಅರಿವು ಮೂಡಿಸಿದರೂ ಅಪಘಾತಗಳು ಮಾತ್ರ ಕಡಿಮೆ ಆಗುತ್ತಿಲ್ಲ. ಅರಿವಿನ ಕೊರತೆಯೇ ಇದಕ್ಕೆ ಕಾರಣ ಎಂಬುದು ಎಲ್ಲ ಪ್ರಕರಣಗಳಲ್ಲೂ ಕಂಡುಬರುವ ಸತ್ಯ.

ಒಳ್ಳೆಯ ರಸ್ತೆಗಳೂ ಕಾರಣ:

ದಶಕದ ಹಿಂದೆ ಜಿಲ್ಲೆಯ ರಸ್ತೆಗಳು ಅಷ್ಟಾಗಿ ಸುಧಾರಣೆ ಕಂಡಿರಲಿಲ್ಲ. ಆದರೆ, ಈಗ ಪುಣೆ– ಬೆಂಗಳೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ, ಬೆಳಗಾವಿ– ಬಾಗಲಕೋಟೆ ಮಾರ್ಗದ ರಾಜ್ಯ ಹೆದ್ದಾರಿ, ನೆರೆ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕೂಡ ದುರಸ್ತಿಯಾಗಿವೆ. ನುಣುಪಾದ ಡಾಂಬರ್‌ ಹಾಗೂ ಸಿಮೆಂಟ್‌ ರಸ್ತೆಗಳು ಕೂಡ ಅಪಘಾತಕ್ಕೆ ಪರೋಕ್ಷ ಕಾರಣವಾಗಿವೆ.

ರಸ್ತೆಗಳು ಚೆನ್ನಾಗಿವೆ ಎಂಬ ಕಾರಣಕ್ಕೆ ಬೈಕ್‌ ಸವಾರರು ಮಿತಿಮೀರಿ ವೇಗದಲ್ಲಿ ಓಡಿಸುತ್ತಾರೆ. ಹಲವು ಬಾರಿ ಸ್ಕಿಡ್‌ ಆಗಿ ಅಪಘಾತಕ್ಕೆ ತುತ್ತಾಗಿದ್ದಾರೆ. ಹೀಗಾಗಿ, ಬೈಕುಗಳ ವೇಗದ ಮಿತಿ ಮೇಲೂ ಕಣ್ಣಿಡಬೇಕಾದ ಜವಾಬ್ದಾರಿ ಪೊಲೀಸ್‌ ಹಾಗೂ ಆರ್‌ಟಿಒ ಅಧಿಕಾರಿಗಳ  ಮೇಲಿದೆ ಎನ್ನುವುದು ಸಾರ್ವಜನಿಕರ ಆಗ್ರಹ.

ಅವೈಜ್ಞಾನಿಕ ಕಾಮಗಾರಿ:

ಜಿಲ್ಲೆಯಲ್ಲಿ ಹಾದುಹೋಗಿರುವ ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿಯ ಕೆಲವು ಕಡೆಗಳಲ್ಲಿ ಅವೈಜ್ಞಾನಿಕ ಕಾಮಗಾರಿ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ನಿರ್ಮಿಸಬೇಕಾದ ಊರ ದಾರಿಗಳು ಸಮರ್ಪಕವಾಗಿಲ್ಲ. ಅದೇ ರೀತಿ ರಾಜ್ಯ ಹೆದ್ದಾರಿಯನ್ನು ವಿಸ್ತರಣೆ ಮಾಡಿದ ಮೇಲೆ ಅಕ್ಕಪಕ್ಕದ ಮಳಿಗೆ, ಮನೆಗಳನ್ನು ತೆರವು ಮಾಡಿಲ್ಲ. ಮಾರ್ಗಮಧ್ಯದಲ್ಲೇ ವಾಹನ ನಿಲ್ಲಿಸುವವರ ಮೇಲೆ ಕ್ರಮ ವಹಿಸುತ್ತಿಲ್ಲ ಎಂಬ ಕೂಗು ಪದೇಪದೇ ಕೇಳಿಬರುತ್ತಿದೆ.

ಕಿತ್ತೂರಿನಿಂದ– ಯಮಕನಮರಡಿವರೆಗೆ ರಾಷ್ಟ್ರೀಯ ಹೆದ್ದಾರಿ ವಿಶಾಲವಾಗಿದೆ ಎಂದು ವಾಹನ ಸವಾರರು ಹೊರಟರೆ ದಿಢೀರನೆ ದ್ವಿಪಥ ರಸ್ತೆ ಎದುರಾಗುತ್ತದೆ. ಅಲ್ಲಿ ಮೊದಲು ಎಚ್ಚರಿಕೆ ಫಲಕಗಳನ್ನು ಸಹ ಪ್ರದರ್ಶನ ಮಾಡಿರಲಿಲ್ಲ. ಕೆಲವು ಅಮಾಯಕ ಜೀವಿಗಳು ಬಲಿಯಾದ ನಂತರ ಈ ನಾಮಫಲಕಗಳು ಈಗ ಕಂಡುಬರುತ್ತಿವೆ. ಹೆದ್ದಾರಿ ಪ್ರಾಧಿಕಾರ ಮತ್ತು ಉಸ್ತುವಾರಿ ನೋಡಿಕೊಳ್ಳುವ ಗುತ್ತಿಗೆದಾರರಿಗೆ ಜನರ ಜೀವದ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ’ ಎಂದು ಸುತ್ತಲಿನ ಗ್ರಾಮಗಳ ಜನ ಕಿಡಿ ಕಾರುತ್ತಾರೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಬೂದಿಗೊಪ್ಪ ಕ್ರಾಸ್‌ ಬಳಿ ಡಿಕ್ಕಿಯಾಗಿ ನಜ್ಜುಗುಜ್ಜಾದ ವಾಹನಗಳು (ಸಂಗ್ರಹ ಚಿತ್ರ)
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಬೂದಿಗೊಪ್ಪ ಕ್ರಾಸ್‌ ಬಳಿ ಡಿಕ್ಕಿಯಾಗಿ ನಜ್ಜುಗುಜ್ಜಾದ ವಾಹನಗಳು (ಸಂಗ್ರಹ ಚಿತ್ರ)
ಗೋಕಾಕದಲ್ಲಿ ಈಚೆಗೆ ಸಂಚಾರ ನಿಯಮ ಪಾಲನೆ ಕುರಿತ ಜಾಗೃತಿ ಜಾಥಾಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಚಾಲನೆ ನೀಡಿದರು
ಗೋಕಾಕದಲ್ಲಿ ಈಚೆಗೆ ಸಂಚಾರ ನಿಯಮ ಪಾಲನೆ ಕುರಿತ ಜಾಗೃತಿ ಜಾಥಾಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಚಾಲನೆ ನೀಡಿದರು
ಎ‌.ಎಂ ಕೋಟಿ
ಎ‌.ಎಂ ಕೋಟಿ
ಕುಬೇರ ಕ್ಯಾತನವರ
ಕುಬೇರ ಕ್ಯಾತನವರ
ಪ್ರವೀಣ ಗಂಗೋಳ
ಪ್ರವೀಣ ಗಂಗೋಳ
ಡಾ.ಭೀಮಾಶಂಕರ ಗುಳೇದ
ಡಾ.ಭೀಮಾಶಂಕರ ಗುಳೇದ

ಇವರೇನಂತಾರೆ..? ಜಿಲ್ಲೆಯಲ್ಲಿ ಬೈಕ್‌ ಸೀಜ್‌... ಜಿಲ್ಲೆಯಲ್ಲಿ ಅಪಘಾತಗಳನ್ನು ನಿಯಂತ್ರಣ ಮಾಡಲು ಜಿಲ್ಲಾ ಪೊಲೀಸ್‌ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಇದಕ್ಕೂ ಮುನ್ನ ಒಂದು ವಾರ ಎಲ್ಲೆಡೆ ಮಾರ್ಗದರ್ಶನ ಅರಿವು ಜಾಗೃತಿ ಕಾರ್ಯಕ್ರಮ ಮಾಡಲಾಗಿದೆ. ಮೇಲಿಂದ ಮೇಲೆ ಅರಿವು ಮೂಡಿಸಿದ ಮೇಲೂ ಹಾಗೂ ದಂಡ ಹಾಕಿದರೂ ಬೈಕ್‌ ಸವಾರರು ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ಯಾರು ಹೆಲ್ಮೆಟ್‌ ಧರಿಸದೇ ಬರುತ್ತಾರೋ ಅವರ ಬೈಕನ್ನು ಸ್ಥಳದಲ್ಲೇ ಸೀಜ್‌ ಮಾಡಲಾಗುತ್ತದೆ. ಅವರು ಹೆಲ್ಮೆಟ್‌ ಖರೀದಿಸಿ ಅದರ ರಸೀದಿ ತೋರಿಸಿದ ಬಳಿಕವೇ ಬೈಕ್‌ ನೀಡಲಾಗುತ್ತದೆ. ಬದುಕು ಅತ್ಯಂತ ಅಮೂಲ್ಯವಾದುದು. ನಿರ್ಲಕ್ಷ್ಯ ಮಾಡಿ ಅದನ್ನು ಕಳೆದುಕೊಳ್ಳಬಾರದು. ಮಕ್ಕಳಿಗೆ ಪಾಲಕರೂ ಬುದ್ಧಿ ಹೇಳಬೇಕು. ಶಾಲೆ– ಕಾಲೇಜುಗಳಲ್ಲೂ ಅರಿವು ಮೂಡಿಸಬೇಕು. ಇಲಾಖೆಯಿಂದ ಕೂಡ ನಿರಂತರ ಜಾಗೃತಿ ಮಾಡಲಾಗುತ್ತದೆ. –ಡಾ.ಭೀಮಾಶಂಕರ ಗುಳೇದ ಎಸ್ಪಿ ಜಾಗೃತಿ– ದಂಡ ನಿರಂತರ ಹೆಲ್ಮೆಟ್ ಇಲ್ಲದೆ ಬೈಕ್ ಸವಾರರು ಇತ್ತೀಚಿನ ದಿನಗಳಲ್ಲಿ ಪ್ರಾಣ ಕಳೆದುಕೊಂಡ ಮತ್ತು ಗಂಭೀರವಾಗಿ ಗಾಯಗೊಂಡ ಪ್ರಕರಣಗಳು ಹೆಚ್ಚಾಗಿ ಜರುಗುತ್ತಿವೆ. ಸವಾರನ ಹಿಂದೆ ಇಡೀ ಕುಟುಂಬವೇ ಇರುತ್ತದೆ. ಹೀಗಾಗಿ ಎಸ್ಪಿ ಅವರ ಮಾರ್ಗದರ್ಶನದಲ್ಲಿ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಹೆಲ್ಮೆಟ್ ಧರಿಸದ ಚಾಲನೆಗೆ ದಂಡ ವಿಧಿಸಲಾಗುತ್ತದೆ -ಪ್ರವೀಣ ಗಂಗೋಳ ಪಿಎಸ್‌ಐ ಚನ್ನಮ್ಮನ ಕಿತ್ತೂರು ಪೊಲೀಸರ ಕ್ರಮ ಸ್ವಾಗತಾರ್ಹ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ನಮ್ಮ ಜೀವ ಉಳಿಸುವ ಸಲುವಾಗಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದನ್ನು ಸಾರ್ವಜನಿಕರಾದ ನಾವೆಲ್ಲ ಸ್ವಾಗತಿಸಬೇಕು. ಅವರ ವಿರುದ್ಧ ಮೊಂಡು ವಾದ ಮಾಡುವುದು ಬೇಡ. ಇಲಾಖೆ ಸೂಚನೆ ಪಾಲಿಸೋಣ ನಮ್ಮ ಜೀವ ಉಳಿಸಿಕೊಳ್ಳೋಣ - ಕುಬೇರ ಕ್ಯಾತನವರ ಬೈಕ್ ಸವಾರ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ. ಬಹಳಷ್ಟು ಅಪಘಾತ ಪ್ರಕರಣಗಳಲ್ಲಿ ಯುವಕರು ಗಾಯಗೊಳ್ಳುವುದು ಮತ್ತು ಮರಣ ಹೊಂದಿರುವುದು ಕಂಡುಬಂದಿದೆ. ಯುವ ಜನತೆಯಲ್ಲಿ ಸಾರಿಗೆ ನಿಯಮಗಳನ್ನು ಪಾಲಿಸುವ ಕುರಿತು ಹೆಲ್ಮೆಟ್ ಸೀಟ್ ಬೆಲ್ಟ್ ಧರಿಸಿ ವಾಹನ ಚಾಲನೆ ಮಾಡುವ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ. –ಎ‌.ಎಂ ಕೋಟಿ ನಂದಗಡ ಗ್ರಾಮಸ್ಥರು.

ಇದೆಂಥ ವಿಚಿತ್ರ ನಡೆ ಸ್ವಾಮೀ..! * ಲಕ್ಷ–ಲಕ್ಷ ಹಣ ಸುರಿದು ಬೈಕ್‌ ಖರೀದಿಸುತ್ತಾರೆ. ಆದರೆ ಐನೂರು ರೂಪಾಯಿ ಖರ್ಚು ಮಾಡಿ ಹೆಲ್ಮೆಟ್‌ ತೆಗೆದುಕೊಳ್ಳುವುದಿಲ್ಲ! * ₹10 ಸಾವಿರದ ಮೊಬೈಲ್‌ಗೆ ರಕ್ಷಾ ಕವಚ ಹಾಕುತ್ತಾರೆ. ತಮ್ಮ ತಲೆ ಕಾಪಾಡಿಕೊಳ್ಳಲು ಹೆಲ್ಮೆಟ್‌ ಹಾಕುವುದಿಲ್ಲ! * ಒಂದು ಬಾರಿ ಹೇರ್‌ಸೆಲ್ಯೂನ್‌ಗೆ ಹೋದರೆ ಸಾವಿರ ರೂಪಾಯಿ ಕೊಟ್ಟು ಬರುತ್ತಾರೆ. ಕೂದಲಿನ ಸಲುವಾಗಿ ಇಷ್ಟು ಹಣ ಸುರಿಯುವ ಯುವಕ– ಯುವತಿಯರು ತಲೆ ಉಳಿಸಿಕೊಳ್ಳಲು ಜಾಗೃತಿ ವಹಿಸುತ್ತಿಲ್ಲ! * ಟಿವಿಗಳ ಮುಂದೆ ಸಿನಿಮಾ ಥೇಟರ್‌ಗಳಲ್ಲಿ ಮಾಲ್‌ಗಳಲ್ಲಿ ಗೆಳೆಯರ ಬಳಗದಲ್ಲಿ ತಾಸುಗಟ್ಟಲೇ ಸಮಯ ಕಳೆಯುತ್ತಾರೆ. ಆದರೆ ಟ್ರಾಫಿಕ್‌ ಸಿಗ್ನಲ್‌ನಲ್ಲಿ 60 ಸೆಕೆಂಡ್‌ ಕಾಯಲು ಸಿದ್ಧರಿಲ್ಲ! –ಇದೆಂಥ ವಿಚಿತ್ರ ನಡೆ. ಯುವಜನರು ಹೀಗೇಕೆ ಯೋಚನೆ ಮಾಡುತ್ತಾರೆ ಎಂಬ ಪ್ರಶ್ನೆ ಕಾಡುತ್ತಲೇ ಇರುತ್ತದೆ ಎನ್ನುತ್ತಾರೆ ಸಂಚಾರ ಠಾಣೆಯ ಸಿಬ್ಬಂದಿ ಬಸವರಾಜ. ನಾವು ವಾಹನ ಖರೀದಿಸಲು ಕಾರಣವೇನು? ನಮ್ಮ ಕೆಲಸಗಳು ಸುಗಮವಾಗಿ ಆಗಬೇಕು. ಬದುಕಿಗೆ ಅನುಕೂಲ ಆಗಬೇಕು ಎಂಬುದು. ಆದರೆ ಅದೇ ಬೈಕ್‌ ನಮ್ಮ ಜೀವಕ್ಕೆ ಎರವಾಗಿ ಬದುಕಿಗೆ ಹೊರೆಯಾಗುವಂತೆ ಏಕೆ ಓಡಿಸಬೇಕು? ವೇಗದಿಂದ ಓಡಿಸಿದರೆ ಒಂದೆರಡು ನಿಮಿಷ ಬೇಗ ತಲುಬಹುದು ಅಷ್ಟೇ. ಅದು ಕೂಡ ಅಪಘಾತವಾಗದೇ ಇದ್ದರೆ. ವೇಗದ ಚಾಲನೆಯಿಂದ ಸ್ವಯಂ ಅಪಘಾತವಾಗುವುದು ಮಾತ್ರವಲ್ಲ; ಇತರರ ಜೀವಕ್ಕೂ ಕುತ್ತು ತರುತ್ತೇವೆ ಎಂಬ ಅರಿವು ಹೊಂದುವುದು ಮುಖ್ಯ ಎನ್ನುತ್ತಾರೆ ಅವರು.

ಬೇಕು ಎಚ್ಚರಿಕೆ ಫಲಕ ಜಿಲ್ಲೆಯಲ್ಲಿ ಸುಮಾರು 160ಕ್ಕೂ ಹೆಚ್ಚು ಸ್ಥಳಗಳನ್ನು ಅಪಘಾತ ವಲಯಗಳು ಎಂದು ದಶಕದ ಹಿಂದೆಯೇ ಗುರುತಿಸಲಾಗಿದೆ. ಈ ಎಲ್ಲ ಸ್ಥಳಗಳಲ್ಲೂ ‘ಎಚ್ಚರಿಕೆ’ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕಿದೆ. ರಾಷ್ಟ್ರೀಯ ಹೆದ್ದಾರಿ ಮೇಲೆ ಇಟಗಿಕ್ರಾಸ್ ಯಮಕನಮರಡಿ ಕ್ರಾಸ್‌ ಹತ್ತರಗಿ ಕ್ರಾಸ್‌ ಕಾಕತಿ ಹೊನಗಾ ಹಲಗಾ ಭೂತರಾಮನಹಟ್ಟಿ ಮುತ್ನಾಳ ದಾಸ್ತಿಕೊಪ್ಪ ಇಟಗಿ ಕ್ರಾಸ್‌ ತಿಮ್ಮಾಪುರ ತಮನಾ‍ಪುರ ಎಂ.ಕೆ.ಹುಬ್ಬಳ್ಳಿ ಹಿರೇಬಾಗೇವಾಡಿ ಹೆಬ್ಬಾಳ ಸಂಕೇಶ್ವರ ಸ್ಥವನಿಧಿ ಘಾಟ್‌ ಕೂಗನೊಳ್ಳಿ... ಹೀಗೆ ಎಲ್ಲ ಕಡೆಯೂ ಅಪಘಾತಗಳು ಸಾಮಾನ್ಯವಾಗಿ ಸಂಭವಿಸುತ್ತವೆ. ಇಂಥ ಕಡೆ ಸವಾರರಿಗೆ ಎಚ್ಚರಿಕೆ ನೀಡುವ ಫಲಕಗಳ ಅಗತ್ಯವಿದೆ ಎಂಬುದು ಜನರ ಬೇಡಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT