ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಪಾಲಿಕೆ ಚುನಾವಣೆ| ಬಿಜೆಪಿಗೆ ದಿಗ್ವಿಜಯ: ಎಂಇಎಸ್ ಧೂಳಿಪಟ

ಮಹಾನಗರಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಸಾಧನೆ
Last Updated 6 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸುವ ಮೂಲಕ ಕಮಲ ಅರಳಿದೆ. ಹಿಂದಿನಿಂದಲೂ ಇಲ್ಲಿ ಅಧಿಕಾರದ ಸವಿ ಉಂಡಿದ್ದ ಎಂಇಎಸ್(ಮಹಾರಾಷ್ಟ್ರ ಏಕೀಕರಣ ಸಮಿತಿ) ಧೂಳಿಪಟವಾಗಿದೆ. ಕಾಂಗ್ರೆಸ್‌ ಪಕ್ಷದಿಂದ ಕಳಪೆ ಸಾಧನೆ ಕಂಡುಬಂದಿದೆ.

58 ಸದಸ್ಯ ಬಲದ ಇಲ್ಲಿನ ಚುನಾವಣೆಯನ್ನು ಬಿಜೆಪಿಯವರು ಬಹಳ ಗಂಭೀರವಾಗಿ ಪರಿಗಣಿಸಿದ್ದರು. ಅದರಂತೆ ರಣತಂತ್ರ ರೂಪಿಸಿದ್ದರು. ಅದನ್ನು ಅನುಷ್ಠಾನ ಮಾಡುವಲ್ಲೂ ದೊಡ್ಡ ಮಟ್ಟದಲ್ಲಿ ಕ್ಷೇತ್ರ ಕಾರ್ಯ ನಡೆಸಿದರು. ಪ್ರಚಾರಕ್ಕೆ ಕೆಲವೇ ದಿನಗಳು ಲಭ್ಯವಾಗಿದ್ದರೂ ಅದನ್ನೇ ಬಳಸಿಕೊಂಡು ಮನೆ ಮನೆಗಳನ್ನು ತಲುಪುವ ನಿಟ್ಟಿನಲ್ಲಿ ‘ತಂಡವಾಗಿ’ ಹಾಗೂ ಬಿರುಸಿನಿಂದ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಿದರು. ಅವರಿಗೆ ಮುಖಂಡರ ‘ದಂಡು’ ವರವಾಗಿ ಪರಿಣಮಿಸಿದೆ. ಹಿಂದುತ್ವ ಹಾಗೂ ಅಭಿವೃದ್ಧಿಯ ಕಾರ್ಯಸೂಚಿಯನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸಿ, ಅಧಿಕಾರದ ಗದ್ದುಗೆಗೆ ಏರುವಲ್ಲಿ ಆ ಪಕ್ಷದವರು ಯಶಸ್ಸು ಗಳಿಸಿದ್ದಾರೆ.

ಅವಕಾಶ ಇಲ್ಲದಂತಾಗಿದೆ:

‘ಗೆದ್ದವರೆಲ್ಲ ನಮ್ಮವರೇ’ ಎಂದು ಹೇಳಿಕೊಂಡು ಬರುತ್ತಿದ್ದ ಎಂಇಎಸ್‌ಗೆ ಈ ಬಾರಿ ಅವಕಾಶ ಇಲ್ಲದಂತಾಯಿತು. ರಾಜಕೀಯ ಪಕ್ಷಗಳು ರಂಗಪ್ರವೇಶ ಮಾಡಿದ್ದರಿಂದ ಮಂಕಾಗಿದ್ದ ಆ ಸಮಿತಿಯ ಬೇರುಗಳು ಎಲ್ಲ ಕಡೆಗಳಲ್ಲೂ ಅಭ್ಯರ್ಥಿಗಳನ್ನು ಹಾಕಲಾಗದೆ ಅಲುಗಾಡಿದ್ದವು. ಈಗ ಮತದಾರರಿಂದಲೂ ತಿರಸ್ಕೃತಗೊಂಡಿದ್ದಾರೆ.

ಇಲ್ಲಿ ಹಿಂದಿನಿಂದಲೂ ಕನ್ನಡ, ಮರಾಠಿ ಹಾಗೂ ಉರ್ದು ಭಾಷೆಗಳ ಆಧಾರದ ಮೇಲೆ ಚುನಾವಣೆ ನಡೆಯುತ್ತಿತ್ತು. ಈ ಬಾರಿ ಮತದಾರರು ಭಾಷಾ ರಾಜಕಾರಣಕ್ಕೆ ಬಹುತೇಕ ತಿಲಾಂಜಲಿ ಹಾಡಿದ್ದಾರೆ. ಮರಾಠಿ ಭಾಷಿಕರ ಮತವನ್ನು ಸೆಳೆಯುವಲ್ಲಿ ಬಿಜೆಪಿಯವರು ಯಶಸ್ವಿಯಾಗಿದೆ. ಎಂಇಎಸ್‌ನವರು ಪ್ರಯೋಗಿಸಿದ್ದ ‘ಎಂ ಪ್ಲಸ್ ಎಂ’ (ಮರಾಠಿ ಮತ್ತು ಮುಸ್ಲಿಂ) ಸೂತ್ರಕ್ಕೆ ಮತದಾರರು ಮನ್ನಣೆ ನೀಡಿಲ್ಲ. ಜೊತೆಗೆ, ಅಭಿವೃದ್ಧಿ ಕಾರ್ಯಸೂಚಿಯ ಜೊತೆಗಿರುತ್ತೇವೆ ಎನ್ನುವ ಸಂದೇಶವನ್ನೂ ರವಾನಿಸಿದ್ದಾರೆ. ಇದು, ಭಾಷೆಯ ಮೇಲೆ ರಾಜಕೀಯ ಮಾಡುತ್ತಿದ್ದವರಿಗೆ ಸ್ಪಷ್ಟ ಎಚ್ಚರಿಕೆಯನ್ನು ನೀಡಿದೆ. ಈ ಫಲಿತಾಂಶವು ಸ್ಥಳೀಯ ರಾಜಕಾರಣದ ವ್ಯಾಖ್ಯೆಯನ್ನು ಕೂಡ ಬದಲಿಸಿದೆ.

‘ಈ ಚುನಾವಣೆಯನ್ನು, ಪಕ್ಷದ ಕಾರ್ಯಕರ್ತರಿಗಾಗಿ ಗಂಭೀರವಾಗಿ ಪರಿಗಣಿಸಿದ್ದೇವೆ’ ಎಂದು ಹೇಳಿದ್ದ ಬಿಜೆಪಿಯವರು ಅದೇ ರೀತಿ ಸಾಂಘಿಕ ಹೋರಾಟ ನಡೆಸಿ ಬಹಳಷ್ಟು ಹೊಸ ಮುಖಗಳನ್ನು ಹಾಗೂ ಯುವಕರನ್ನು ನಗರಪಾಲಿಕೆ ಸದಸ್ಯರನ್ನಾಗಿ ಮಾಡಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಾದರೂ ಇಲ್ಲಿಗೆ 2 ಬಾರಿ ಬಂದಿದ್ದ ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರು, ಚುನಾವಣಾ ಕಾರ್ಯತಂತ್ರವನ್ನು ರೂಪಿಸಿದ್ದರು.

ಕಾರ್ಯತಂತ್ರ:

ಸ್ಥಳೀಯ ಜನಪ್ರತಿನಿಧಿಗಳಾದ ಅಭಯ ಪಾಟೀಲ, ಅನಿಲ ಬೆನಕೆ ಮೊದಲಾದವರಿಗೆ ಜವಾಬ್ದಾರಿ ನೀಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೇರಿದಂತೆ ಹಲವರು ಪ್ರಚಾರ ನಡೆಸಿದ್ದರು. ವಾರ್ಡ್‌ನಲ್ಲಿ ಯಾವ ಸಮಾಜದ ಮತದಾರರು ಹೆಚ್ಚಿದ್ದಾರೋ ಆ ಸಮಾಜಕ್ಕೆ ಸೇರಿದ ಮುಖಂಡರಿಗೆ ಪ್ರಚಾರದ ಹೊಣೆ ನೀಡಲಾಗಿತ್ತು. ಅದು, ಸಾಕಷ್ಟು ಸಕಾರಾತ್ಮಕ ಪರಿಣಾಮವನ್ನು ಆ ಪಕ್ಷದ ಅಭ್ಯರ್ಥಿಗಳಿಗೆ ಬೀರಿದೆ.

ಹಿಂದುತ್ವದ ವಿಷಯವನ್ನು ಮುಂದಿಟ್ಟಿದ್ದ ಬಿಜೆಪಿಯವರು, ಮರಾಠಿ ಭಾಷಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ‘ಬಾಂಡ್‌ಗಳ ಆಧಾರದ ಮೇಲೆ ನಿವೇಶನ ಖರೀದಿಸಿ ಕಟ್ಟಿರುವ ಮನೆಗಳನ್ನು ಸಕ್ರಮಗೊಳಿಸಲು ಸರ್ಕಾರದ ಮಟ್ಟದಲ್ಲಿ ಕ್ರಮ ವಹಿಸಲಾಗುವುದು’ ಎಂದು ಬಿಜೆಪಿಯವರು ನೀಡಿದ್ದ ಭರವಸೆ ನಂಬಿ ಜನರು ಬೆಂಬಲ ನೀಡಿರುವುದು ಸ್ಪಷ್ಟವಾಗಿದೆ.

‘ತಕ್ಕ ಪಾಠ ಕಲಿಸಿದ್ದಾರೆ’

‘60 ವರ್ಷಗಳಿಂದ ಗಡಿ ಭಾಗದಲ್ಲಿ ಭಾಷೆ ಮತ್ತು ಗಡಿಯ ಹೆಸರಿನಲ್ಲಿ ಕಿಡಿಯನ್ನು ಹೊತ್ತಿಸುವ ಮೂಲಕ ತನ್ನ ಬೇಳೆಯನ್ನು ಬೇಯಿಸಿಕೊಂಡು ಬಂದಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌)ಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಅಲ್ಲದೇ ಇಲ್ಲಿದ್ದರೂ ಮಹಾರಾಷ್ಟ್ರವಾದಿಗಳನ್ನು ರಾಜಕೀಯ ಕಾರಣಗಳಿಗಾಗಿ ಬೆಂಬಲಿಸುತ್ತಾ ಬಂದಿರುವ ಮಹಾರಾಷ್ಟ್ರ ನಾಯಕರಿಗೂ ಮರಾಠಿ ಮತದಾರರು ತಮ್ಮ ಕರ್ನಾಟಕದ ಪರ ಮತ್ತು ಅಭಿವೃದ್ಧಿ ಪರವಾದ ನಿಲುವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ವಿಶ್ಲೇಷಿಸಿದರು.

‘1984ರಲ್ಲಿ ಮಹಾನಗರ ಪಾಲಿಕೆಯ ಅಸ್ತಿತ್ವದಲ್ಲಿ ಬಂದ ನಂತರ ಎಂಇಎಸ್‌ ತನ್ನ ಚಟುವಟಿಕೆಯ ಮೂಲಕ ಅಶಾಂತಿ ಉಂಟು ಮಾಡುವ ಮೂಲಕ ಭಾಷಾ ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುತ್ತಲೇ ಬಂದಿತ್ತು. ಮಹಾನಗರ ಪಾಲಿಕೆಯನ್ನು ತನ್ನ ಚಟುವಟಿಕೆಗಳ ಕೇಂದ್ರಬಿಂದುವನ್ನಾಗಿ ಮಾಡಿಕೊಂಡಿದ್ದ ಆ ಸಮಿತಿಗೆ ಈ ಚುನಾವಣೆಯ ಫಲಿತಾಂಶವು ಮರ್ಮಾಘಾತವನ್ನೂ ಉಂಟು ಮಾಡಿದೆ’ ಎಂದಿದ್ದಾರೆ.

ಕಾಂಗ್ರೆಸ್‌ ಸೋಲಿಗೆ ಕಾರಣವೇನು

* ಚುನಾವಣೆಯನ್ನು ಲಘುವಾಗಿ ಪರಿಗಣಿಸಿದ್ದು.

* ನಾಯಕರು ಸಂಘಟಿತ ಪ್ರಯತ್ನ ಮಾಡದಿರುವುದು.

* ವ್ಯವಸ್ಥಿತವಾಗಿ ಪ್ರಣಾಳಿಕೆ ಬಿಡುಗಡೆ ಮಾಡದಿರುವುದು.

* ಸ್ಥಳೀಯ ನಾಯಕರಲ್ಲಿನ ವೈಮನಸ್ಸು.

* ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಸದಿರುವುದು.

* ಅಲ್ಲಲ್ಲಿ ಎದುರಾದ ಬಂಡಾಯದಿಂದ ವ್ಯತಿರಿಕ್ತ ಪರಿಣಾಮ.

* ಕೆಲವೆಡೆ ಪಕ್ಷೇತರ ಅಭ್ಯರ್ಥಿಗಳಿಗೆ ಹಾದಿ ಸುಗಮ ಮಾಡಿಕೊಡಲು ಪ್ರಯತ್ನಿಸಿದ್ದು.

ತಿಲಾಂಜಲಿ ಹಾಡಬೇಕು

ಸ್ಪಷ್ಟ ಬಹುಮತ ಪಡೆದಿರುವ ಬಿಜೆಪಿಯು ಮುಂದಿನ ದಿನಗಳಲ್ಲಿ ನಾಡು, ನುಡಿ, ಗಡಿಯ ಪರವಾಗಿ ದೃಢವಾದ ನಿಲುವು ತಳೆಯುವ ಮೂಲಕ ಭಾಷಾಧಾರಿತ ರಾಜಕಾರಣಕ್ಕೆ ತಿಲಾಂಜಲಿ ಹಾಡಬೇಕು.

–ಅಶೋಕ ಚಂದರಗಿ, ಅಧ್ಯಕ್ಷ, ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT