ಶುಕ್ರವಾರ, ಜನವರಿ 22, 2021
24 °C
ಮುಂದೆ ನಾನೇ ಗೆಲ್ಲಿಸ್ತೀನಿ: ರಮೇಶ ಜಾರಕಿಹೊಳಿ ಹೇಳಿಕೆ

ಬೆಳಗಾವಿ ಗ್ರಾಮೀಣ ಕ್ಷೇತ್ರ: ನನ್ನಿಂದಾಗಿ ಸೋತ ಬಿಜೆಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ನನ್ನ ತಪ್ಪಿನಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಸೋಲನುಭವಿಸಿತು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿ ಭಗವಾಧ್ವಜ ಹಾರಾಡುವಂತೆ ನಾನೇ ಮಾಡುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ತಾಲ್ಲೂಕಿನ ನಾವಗೆ ಬಳಿಯ ಗಣೇಶ ಬಾಗ್ ತೋಟದಲ್ಲಿ ಧನಂಜಯ ಜಾಧವ ಮಿತ್ರ ಪರಿವಾರದಿಂದ ಭಾನುವಾರ ಆಯೋಜಿಸಿದ್ದ ‘ಹಿಂದುತ್ವದ ಏಕತೆಗಾಗಿ ಹಿಂದೂ ಕಾರ್ಯಕರ್ತರ ಸ್ನೇಹ ಭೋಜನ’ ಕಾರ್ಯಕ್ರಮದಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯ್ತಿ ಸದಸ್ಯರನ್ನು ಸನ್ಮಾನಿಸಿ ಅವರು ಮಾತನಾಡಿದರು.

‘ಜಿಲ್ಲೆಯ ಎಲ್ಲ 18 ಕ್ಷೇತ್ರಗಳನ್ನೂ ಗೆಲ್ಲುವ ಸಂಕಲ್ಪ ಮಾಡಿದ್ದೇವೆ. ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲೂ ಬಿಜೆಪಿ ಜಯ  ಗಳಿಸಲಿದೆ. ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸಮ ಬಲದ ಹೋರಾಟದಲ್ಲಿ ನಾವೇ ಹೆಚ್ಚು ಗೆದ್ದಿದ್ದೇವೆ. ಬೆರಳೆಣಿಕೆಯಷ್ಟು ಗ್ರಾ.ಪಂ. ಹೊರತುಪಡಿಸಿ ಎಲ್ಲ ಕಡೆಗೂ ನಮ್ಮವರೇ ಗೆದ್ದಿದ್ದಾರೆ. ಎಲ್ಲ ಮುಖಂಡರೂ ಸಂಘಟಿತರಾಗಿ ಕಾರ್ಯನಿರ್ವಹಿಸಬೇಕು’ ಎಂದರು.

ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಮಾತನಾಡಿ, ‘ಯುವಕರನ್ನು ಒಗ್ಗೂಡಿಸಲು ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ಭಾಗದಲ್ಲಿ ಪರಿವರ್ತನೆಗೆ ಮತ್ತು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಈಗಿನಿಂದಲೇ ಕೆಲಸ ಶುರು ಮಾಡಬೇಕಿದೆ’ ಎಂದು ಹೇಳಿದರು.

ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ‘ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ಪ್ರತಿಯೊಬ್ಬರೂ ಸಹಾಯ ಮಾಡಬೇಕು. ಇದು ನನ್ನ ಶ್ರೀರಾಮ ಮಂದಿರ ಎಂಬ ಅಭಿಮಾನ ಭಾರತೀಯರೆಲ್ಲರಲ್ಲೂ ಮೂಡಬೇಕು. ಗ್ರಾಮೀಣದಲ್ಲಿ ಬಿಜೆಪಿ ಗೆಲ್ಲಿಸಬೇಕು’ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ‘ಕಾಂಗ್ರೆಸ್‌ನ ಮುಂದಿನ ಅಧ್ಯಕ್ಷ ಯಾರಾಗುತ್ತಾರೆ ಎಂಬುದನ್ನು ಎಲ್ಲರೂ ಹೇಳಬಹುದು. ಆದರೆ, ಬಿಜೆಪಿಯ ಅಧ್ಯಕ್ಷ ಯಾರಾಗಬಹುದೆಂದು ಊಹಿಸಲು ಸಾಧ್ಯವಿಲ್ಲ. ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಅವಕಾಶ ಸಿಗುತ್ತದೆ’ ಎಂದರು.

‘ಆರ್‌ಎಸ್‌ಎಸ್‌ ಶಾಖೆಗೆ ಉಸ್ತುವಾರಿ ಸಚಿವರು ತಿಂಗಳಿಗೆ ಒಮ್ಮೆ ಬರಬೇಕು. ಸಂಘದಲ್ಲಿ ಯಾರೂ ಸಣ್ಣವರು, ದೊಡ್ಡವರಿಲ್ಲ. ಸಮರ್ಥ ಚಿಂತನಕಾರರಾದ ಅವರು ಶಾಖೆಗೆ ಬಂದರೆ ಹೊಸ ಆಲೋಚನೆಗಳ ಮೂಲಕ ಸಂಘಟನೆ ಗಟ್ಟಿಗೊಳಿಸಲು ಶಕ್ತಿ ಸಿಗುತ್ತದೆ’ ಎಂದು ಆರ್‌ಎಸ್‌ಎಸ್‌ ಪ್ರಮುಖ ಕೃಷ್ಣ ಭಟ್ ಆಹ್ವಾನಿಸಿದರು.

ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಧನಂಜಯ ಜಾಧವ, ಮುಖಂಡರಾದ ಡಾ.ವಿಶ್ವನಾಥ ಪಾಟೀಲ, ಸಂಜಯ ಕುಬಲ್, ಅಶೋಕ ಶಿಂತ್ರಿ, ಕೃಷ್ಣ ಭಟ್,  ಮನೋಹರ ಕಡೋಲಕರ, ಎಂ.ಬಿ. ಝಿರಲಿ, ನಾನಪ್ಪ ಪಾರ್ವತಿ, ಧನಶ್ರೀ ಸರದೇಸಾಯಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು