ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಬಿಜೆಪಿ: ಬಣಗಳ ಭಿನ್ನಮತ ಶಮನಕ್ಕೆ ರಂಗ ಪ್ರವೇಶಿಸಿದ ವರಿಷ್ಠರು

ಉಪ ಚುನಾವಣೆ ಕಾರಣ; ಹೈಕಮಾಂಡ್ ನಿರ್ದೇಶನ
Last Updated 30 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ಅನಿರೀಕ್ಷಿತವಾಗಿ ಎದುರಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯ ಬಿಜೆಪಿ ನಾಯಕರ ನಡುವೆ ‘ಸಮನ್ವಯ’ ಮೂಡಿಸುವ ಕಾರ್ಯಕ್ಕೆ ಹೈಕಮಾಂಡ್ ತಂತ್ರ ರೂಪಿಸಿದೆ. ಇದರ ಮೊದಲ ಭಾಗವಾಗಿ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಅವಿರೋಧ ಆಯ್ಕೆ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿದೆ.

ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಒಂದು ಬಣ, ಹುಕ್ಕೇರಿ ಶಾಸಕ ಉಮೇಶ ಕತ್ತಿ ಹಾಗೂ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಮತ್ತೊಂದು ಬಣ ಸೃಷ್ಟಿಯಾಗಿದ್ದು ಹಾಗೂ ತಮ್ಮವರನ್ನು ಗೆಲ್ಲಿಸಿಕೊಳ್ಳಲು ಮುಂದಾಗಿದ್ದುದು ಇಲ್ಲಿನ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಮುನ್ಸೂಚನೆ ಅರಿತು:

ಕತ್ತಿ ಸಹೋದರರು (ಉಮೇಶ ಕತ್ತಿ, ಡಿಸಿಸಿ ಬ್ಯಾಂಕ್ ಹಾಲಿ ಅಧ್ಯಕ್ಷ ರಮೇಶ ಕತ್ತಿ) ಹಾಗೂ ಬಾಲಚಂದ್ರ ಇದ್ದ ಬಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಬೆಂಬಲ ಘೋಷಿಸಿದ್ದರು. ‘ಅವರ ನಿರ್ಧಾರಕ್ಕೆ ಬದ್ಧವಿದ್ದೇನೆ’ ಎಂದು ತಿಳಿಸಿದ್ದರು. ‘ದೊಡ್ಡ ಹುದ್ದೆಯಲ್ಲಿರುವವರು ಸಣ್ಣ ತ್ಯಾಗಗಳನ್ನು ಮಾಡಬೇಕಾಗುತ್ತದೆ’ ಎಂಬ ಹೇಳಿಕೆ ನೀಡಿ ಪರೋಕ್ಷವಾಗಿ ಸವದಿಗೆ ಸಂದೇಶ ರವಾನಿಸಿದ್ದರು. ಇದನ್ನು ಉಪ ಮುಖ್ಯಮಂತ್ರಿಯೂ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರು. ಹೀಗಾಗಿ, ಬಣಗಳ ಜಗಳ ಉಲ್ಬಣಗೊಳ್ಳುವ ಸೂಚನೆ ಅರಿತು ಆರ್‌ಎಸ್‌ಎಸ್‌ ಮುಖಂಡರು ಹಾಗೂ ಬಿಜೆಪಿ ರಾಜ್ಯ ನಾಯಕರು ಮಧ್ಯಪ್ರವೇಶಿಸಿದರು ಎನ್ನುತ್ತವೆ ಪಕ್ಷದ ಮೂಲಗಳು.

ಡಿಸಿಸಿ ಬ್ಯಾಂಕ್‌ ಚುನಾವಣೆ ವಿಷಯದಲ್ಲಿ ಜಿಲ್ಲಾ ನಾಯಕರ ಮಟ್ಟದಲ್ಲಿ ಸಂಬಂಧ ಹಳಸಿದರೆ, ಮುಂಬರುವ ಲೋಕಸಭಾ ಉಪ ಚುನಾವಣೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಬಹುದು ಎನ್ನುವ ಸುಳಿವು ಸಿಕ್ಕಿದ್ದರಿಂದ ವರಿಷ್ಠರು, ಮುಖಂಡರಲ್ಲಿ ಒಗ್ಗಟ್ಟು ತರಲು ಸದ್ಯಕ್ಕೆ ಯಶಸ್ವಿಯಾಗಿದ್ದಾರೆ. ಮುಂದೆಯೂ ಒಗ್ಗಟ್ಟಾಗಿ ಹೋಗಬೇಕು, ಭಿನ್ನಾಭಿಪ್ರಾಯಗಳನ್ನು ಪಕ್ಷದ ಬೆಳವಣಿಗೆಗಾಗಿ ಮರೆಯಬೇಕು ಎಂಬ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ಚಿವುಟಿ ಹಾಕಲು:

ಹಿಂದಿನ ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಿಡಿ ಹೊತ್ತಿಕೊಂಡಿದ್ದೇ ಇಲ್ಲಿನ ಪಿಎಲ್‌ಡಿ ಬ್ಯಾಂಕ್‌ ವಿಚಾರವಾಗಿ ಆ ಪಕ್ಷಗಳ ನಾಯಕರಲ್ಲಿ ಉಂಟಾಗಿದ್ದ ವೈಮನಸ್ಸು ಹಾಗೂ ಭಿನ್ನಮತದಿಂದಾಗಿ. ಹೀಗಾಗಿ, ಡಿಸಿಸಿ ಬ್ಯಾಂಕ್‌ ವಿಚಾರದಲ್ಲಿ ಭಿನ್ನಮತ ಕಾಣಿಸಿಕೊಳ್ಳುವುದು ಬೇಡ ಎಂಬ ನಿರ್ಧಾರಕ್ಕೆ ಬಂದಬಿಜೆಪಿ ಮುಖಂಡರು, ಮೊಳಕೆಯಲ್ಲೇ ಚಿವುಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಐದು ವರ್ಷಗಳ ಹಿಂದೆ ಇದೇ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮುಖಂಡರ ಸಂಬಂಧಗಳು ಹಾಳಾಗಿದ್ದವು. ಇದು ಪುನರಾವರ್ತನೆಯಾದರೆ ಮುಂಬರುವ ಇತರ ಚುನಾವಣೆಗಳ ವೇಳೆ ಪಕ್ಷ ಬೆಲೆ ತೆರಬೇಕಾಗುತ್ತದೆ ಎಂದು ವರಿಷ್ಠರು ಎಚ್ಚೆತ್ತುಕೊಂಡರು ಎನ್ನಲಾಗುತ್ತಿದೆ.

‘ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮುಂದಿರುವಾಗ, ಭಿನ್ನಾಭಿಪ್ರಾಯಗಳು ಉಲ್ಬಣಗೊಂಡು ಒಡಕಿನ ಲಾಭವನ್ನು ಕಾಂಗ್ರೆಸ್ ಬಳಸಿಕೊಳ್ಳಬಹುದು ಎಂಬ ಲೆಕ್ಕಾಚಾರದಿಂದ ಇಲ್ಲಿನ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಸಲಹೆಯಂತೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಖಾಡಕ್ಕೆ ಇಳಿಯಬೇಕಾಯಿತು. ಬಣಗಳ ನಡುವಿನ ಪ್ರತಿಷ್ಠೆ ಮತ್ತು ಒಳ ಜಗಳವನ್ನು ತಾತ್ಕಾಲಿಕವಾಗಿಯಾದರೂ ಶಮನಗೊಳಿಸಲು ಮುಂದಾಗಬೇಕಾಯಿತು’ ಎಂದು ವಿಶ್ಲೇಷಿಸಲಾಗುತ್ತಿದೆ.

ಇತರ ಮುಖಂಡರು ಒಗ್ಗೂಡಿದಂತೆ ಕಂಡುಬಂದರೂ, ರಮೇಶ ಜಾರಕಿಹೊಳಿ–ಲಕ್ಷ್ಮಣ ಸವದಿ ನಡುವಿನ ಮುನಿಸು ಶಮನವಾಗಿಲ್ಲ. ಇದು ವರಿಷ್ಠರ ತೆಲೆನೋವಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT