ಬೆಳಗಾವಿ: ‘ಸಚಿವ ಸತೀಶ ಜಾರಕಿಹೊಳಿ ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿ ಇದ್ದಾರೆ. ಅವರೇ ಸಿ.ಎಂ ಆದರೆ ಸ್ವಾಗತ‘ ಎಂದು ಖಾನಾಪುರ ಕ್ಷೇತ್ರದ ಬಿಜೆಪಿ ಶಾಸಕ ವಿಠ್ಠಲ ಹಲಗೇಕರ ಹೇಳಿದರು.
ಇಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸತೀಶ ಜಾರಕಿಹೊಳಿ ಮುಖ್ಯಮಂತ್ರಿಯಾದರೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಲಿದೆ. ಅವರು ಪಕ್ಷಾತೀತವಾಗಿ ಕೆಲಸ ಮಾಡಲಿದ್ದಾರೆ.
ನಾನು ಪ್ರತಿನಿಧಿಸುವ ಖಾನಾಪುರ ಕ್ಷೇತ್ರವನ್ನು ಸಮೀಪದಿಂದ ನೋಡಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗಿಯೂ ಇಡೀ ಜಿಲ್ಲೆ ಓಡಾಡಿದ್ದಾರೆ. ಅವರು ಮುಖ್ಯಮಂತ್ರಿಯಾದರೆ, ಪಕ್ಷದಿಂದ ಅಲ್ಲ; ವೈಯಕ್ತಿಕವಾಗಿ ನಾನು ಸ್ವಾಗತಿಸುತ್ತೇನೆ’ ಎಂದರು.
‘ಸತೀಶ ಸಿ.ಎಂ ಆಗಲು ನೀವು ಬೆಂಬಲ ನೀಡುತ್ತೀರಾ’ ಎಂಬ ಪ್ರಶ್ನೆಗೆ, ‘ಕಾಂಗ್ರೆಸ್ ಪಕ್ಷದಲ್ಲೇ 136 ಜನರು ಶಾಸಕರು ಇದ್ದಾರೆ. ಅವರು ಮುಖ್ಯಮಂತ್ರಿಯಾಗಲು ನಮ್ಮ ಪಕ್ಷದ ಬೆಂಬಲ ಬೇಕಿಲ್ಲ’ ಎಂದು ಉತ್ತರಿಸಿದರು