ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ, ಹಿಂದುತ್ವ ಆಧರಿಸಿ ಚುನಾವಣೆ ಎದುರಿಸುತ್ತೇವೆ; ಲಕ್ಷ್ಮಣ ಸವದಿ ಹೇಳಿಕೆ

ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿಕೆ
Last Updated 28 ಆಗಸ್ಟ್ 2021, 12:44 IST
ಅಕ್ಷರ ಗಾತ್ರ

ಬೆಳಗಾವಿ: ‘ಮಹಾನಗರ ಪಾಲಿಕೆ ಚುನಾವಣೆಯನ್ನು ಬಿಜೆಪಿಯು ಅಭಿವೃದ್ಧಿ ಮತ್ತು ಹಿಂದುತ್ವದ ಆಧಾರದ ಮೇಲೆ ಎದುರಿಸಲಿದೆ’ ಎಂದು ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.

ನಗರದ ಧರ್ಮನಾಥ ಭವನದಲ್ಲಿ ಪಕ್ಷದ ನಗರ ಘಟಕ ಶನಿವಾರ ಹಮ್ಮಿಕೊಂಡಿದ್ದ ಪಾಲಿಕೆ ಚುನಾವಣೆ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈ ಚುನಾವಣೆ ಭಾಷೆ ಆಧಾರದ ಮೇಲೆ ನಡೆಯುತಿತ್ತು. ಈ ವೇಳೆ ಪಕ್ಷದ ಕಾರ್ಯಕರ್ತರು ಕೂಡ ಪಕ್ಷೇತರವಾಗಿ ಸ್ಪರ್ಧಿಸಿ ಗೆಲವು ಸಾಧಿಸುತ್ತಿದ್ದರು. ಈ ಬಾರಿ ಚಿಹ್ನೆಯಲ್ಲಿ ಎದುರಿಸುವ ಪ್ರಯೋಗದಲ್ಲಿ ಯಶಸ್ವಿ ಆಗಲಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನಾಡಿನ ಜನರು ಈ ಚುನಾವಣೆಯನ್ನು ಕುತೂಹಲದಿಂದ ಗಮನಿಸುತ್ತಿದ್ದಾರೆ. ಸ್ವಾಭಿಮಾನದಿಂದ ಬದುಕುತ್ತಿರುವ ಬೆಳಗಾವಿಗರು ಅತ್ಯಂತ ಬುದ್ಧಿವಂತರು. ಅಭಿವೃದ್ಧಿ ಮತ್ತು ಹಿಂದುತ್ವಕ್ಕೆ ಹೆಚ್ಚು ಆದ್ಯತೆ ನೀಡಿ ನಮ್ಮನ್ನು ಗೆಲ್ಲಿಸಲಿದ್ದಾರೆ’ ಎಂದರು.

ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ‘ಇಲ್ಲಿ ಬಿಜೆಪಿ ಮೇಯರ್, ಉಪಮೇಯರ್ ಅಧಿಕಾರ ಸ್ವೀಕರಿಸುವುದು ಖಚಿತ. ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಪ್ರತಿ ವಾರ್ಡ್‌ಗಳ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಮೊದಲ ಆದ್ಯತೆ ನೀಡಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಗರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿವೆ’ ಎಂದರು.

ಬೆಂಗಳೂರಿನ ಶಾಸಕ ಸತೀಶ ರೆಡ್ಡಿ, ‘ಈ ಚುನಾವಣೆಯನ್ನು ಪಕ್ಷದ ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದಾರೆ. ಆದ್ದರಿಂದಲೇ ಸಚಿವರು, ಶಾಸಕರು, ಮುಖಂಡರು ಪ್ರಚಾರದಲ್ಲಿ ತೊಡಗಿದ್ದಾರೆ. ಸಮಗ್ರ ಅಭಿವೃದ್ಧಿ ವಿಷಯದ ಮುಂದಿಟ್ಟುಕೊಂಡು ಪ್ರಚಾರ ಕೈಗೊಂಡಿದ್ದೇವೆ’ ಎಂದು ತಿಳಿಸಿದರು.

ಶಾಸಕ ಅಭಯ ಪಾಟೀಲ, ‘ಇದು ಕಾರ್ಯಕರ್ತರ ಚುನಾವಣೆ ಆಗಿರುವುದರಿಂದ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು.

ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ವಿಧಾನ ಪರಿಷತ್‌ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅನಿಲ ಬೆನಕೆ, ಮಹೇಶ ಕುಮಠಳ್ಳಿ, ಬಿಜೆಪಿ ರಾಜ್ಯ ಘಟಕದ ವಕ್ತಾರ ಎಂ.ಬಿ. ಝಿರಲಿ, ನಗರ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ, ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ಮುಖಂಡರಾದ ರಮೇಶ ದೇಶಪಾಂಡೆ, ರಾಜೇಂದ್ರ ಹರಕುಣಿ ಇದ್ದರು.

ಮನೆ ಬಾಗಿಲಿಗೆ ಮಹಾನಗರಪಾಲಿಕೆ–ಬಿಜೆಪಿ ಸಂಕಲ್ಪ

‘ಮನೆ ಬಾಗಿಲಿಗೆ ಮಹಾನಗರಪಾಲಿಕೆ–ಬಿಜೆಪಿ ಸಂಕಲ್ಪ’ವನ್ನು ಒಳಗೊಂಡ ಪ್ರಣಾಳಿಕೆಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಜನಸ್ನೇಹಿ ಹಾಗೂ ಅಭಿವೃದ್ಧಿ ಪರ ಆಡಳಿತ ನಮ್ಮ ಸಂಕಲ್ಪ ಎಂದು ಹೇಳಿದೆ.

* ಬಾಂಡ್‌ಗಳನ್ನು ನೀಡಿ ಖರೀದಿಸಿದ ಮನೆಗಳ ಸಕ್ರಮಕ್ಕೆ ‍ಪ್ರಾಮಾಣಿಕ ಪ್ರಯತ್ನ.


* ಸ್ವಚ್ಛತೆಗೆ ಆದ್ಯತೆ, ಮನೆ ಮನೆಗಳಿಂದ ಕಸ ಸಂಗ್ರಹಿಸುವ ವ್ಯವಸ್ಥೆ ಜಾರಿ.

* ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲ ನಾಲೆಗಳಿಗೆ ಕಾಂಕ್ರೀಟ್.

* ತ್ಯಾಜ್ಯ ಮುಕ್ತ ನಗರ ನಿರ್ಮಾಣ.

* ಪ್ರವಾಸಿ ತಾಣಗಳು, ಉದ್ಯಾನಗಳು ಮತ್ತು ಕೆರೆ–ಕಟ್ಟೆಗಳ ಸೌಂದರ್ಯೀಕರಣಕ್ಕೆ ಒತ್ತು.

* ಮಲ್ಟಿಲೆವಲ್ ಕಾರ್‌ ಪಾರ್ಕಿಂಗ್‌ ವ್ಯವಸ್ಥೆ.

* ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣ. ಹಾಸಿಗೆಗಳನ್ನು ಸಂಖ್ಯೆ ಹೆಚ್ಚಿಸುವುದು.

* ಉತ್ತಮ ಕ್ರೀಡಾಂಗಣಗಳ ನಿರ್ಮಾಣ.

* ಶವ ಸಂಸ್ಕಾರಕ್ಕೆ ಉಚಿತ ವ್ಯವಸ್ಥೆಗೆ ಕ್ರಮ.

* ಯೋಜನೆಗಳ ಲಾಭ ನೇರವಾಗಿ ಜನರಿಗೆ ತಲುಪುವಂತೆ ನೋಡಿಕೊಳ್ಳಲು ಅತ್ಯಾಧುನಿಕ ತಂತ್ರಜ್ಞಾನ ಬಳಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT