ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ | ಬಿಜೆಪಿ ಮತ್ತೆ ಅಧಿಕಾರಕ್ಕೆ: ಶಾಸಕ ಬಾಲಚಂದ್ರ ವಿಶ್ವಾಸ

Published 20 ಜನವರಿ 2024, 5:33 IST
Last Updated 20 ಜನವರಿ 2024, 5:33 IST
ಅಕ್ಷರ ಗಾತ್ರ

ಗೋಕಾಕ: ‘ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದ್ದು, ನರೇಂದ್ರ ಮೋದಿ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ’ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿನ ಎನ್ಎಸ್ಎಫ್ ಕಚೇರಿಯಲ್ಲಿ ಗುರುವಾರ ನಡೆದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನರೇಂದ್ರ ಮೋದಿ ಅವರು ಇಡೀ ದೇಶಕ್ಕೆ ಉತ್ತಮ ಆಡಳಿತ ನೀಡಿದ್ದಾರೆ. ಈ ಹಿಂದೆ ಭಾರತ ಎಂದರೆ ಅಸಡ್ಡೆ ತೋರುತ್ತಿದ್ದ ಜಗತ್ತಿನ ಪ್ರಬಲ ರಾಷ್ಟ್ರಗಳು ಇಂದು ಮೋದಿ ಸಲಹೆ ಪಡೆದು ಮುನ್ನಡೆಯುತ್ತಿವೆ. ಕೆಲವೇ ದಿನಗಳಲ್ಲಿ ಭಾರತ ವಿಶ್ವಗುರುವಾಗಲಿದೆ’ ಎಂದರು.

‘ಇತ್ತೀಚೆಗೆ ನಡೆದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನ್ಯಾಯಯುತವಾಗಿದೆ. ಹೊಸದಾಗಿ ಆಯ್ಕೆಯಾದವರು ಬೆಳಗಾವಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಗೆಲುವಿಗೆ ನಿರಂತರವಾಗಿ ಶ್ರಮಿಸಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಪಕ್ಷವನ್ನು ಬಲಪಡಿಸಬೇಕು’ ಎಂದು ಕರೆ ನೀಡಿದರು.

‘ಅಯೋಧ್ಯೆಯಲ್ಲಿ ಜ.22ರಂದು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಇದರ ಅಂಗವಾಗಿ ಅರಭಾವಿ ಕ್ಷೇತ್ರದ ಪ್ರತಿ ಗ್ರಾಮದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಯೋಧ್ಯೆ ಕಾರ್ಯಕ್ರಮ ವೀಕ್ಷಿಸಲು ವಿವಿಧೆಡೆ ಬೃಹತ್ ಎಲ್ಇಡಿ ಪರದೆಗಳನ್ನು ಅಳವಡಿಸಲಾಗುತ್ತಿದೆ’ ಎಂದು ಹೇಳಿದರು.

ಪಕ್ಷದ ಬೆಳಗಾವಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಮೂಡಲಗಿ ತಾಲ್ಲೂಕಿನ ಅವರಾದಿಯ ಸುಭಾಷ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಮೂಡಲಗಿ ತಾಲ್ಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಬಸನಗೌಡ ಪಾಟೀಲ, ರಾಜು ಭೈರುಗೋಳ, ಕೆಂಚನಗೌಡ ಪಾಟೀಲ, ಶಿವನಗೌಡ ಪಾಟೀಲ, ಬಿ.ಡಿ.ಪಾಟೀಲ, ಎಂ.ಎಂ.ಪಾಟೀಲ, ಮಹಾದೇವ ಶೆಕ್ಕಿ, ಅಶೋಕ ನಾಯಿಕ, ಬಸವರಾಜ ಕೋಟಗಿ, ಅಪ್ಪಯ್ಯ, ಶಂಕರ ಬಿಲಕುಂದಿ, ಸುಭಾಷ ಕುರಬೇಟ, ಪರಸಪ್ಪ ಬಬಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT