ಸೋಮವಾರ, ಜುಲೈ 4, 2022
25 °C

ಬೆಳಗಾವಿಯ 50 ವಾರ್ಡ್‌ಗಳಲ್ಲಿ ಬಿಜೆಪಿಗೆ ಜಯ: ಸಚಿವ ಗೋವಿಂದ ಕಾರಜೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ನಗರದಲ್ಲಿ ಬಿಜೆಪಿ ಶಾಸಕರು ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ವಿಶೇಷವಾಗಿ ಕೊಳೆಗೇರಿ ಮಂಡಳಿಯಿಂದ ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಟ್ಟಿದ್ದಾರೆ. ಇದರಿಂದಾಗಿ, ಮಹಾನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 50 ಸ್ಥಾನಗಳನ್ನು ಗೆಲ್ಲಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ವೇಳೆ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿದರು.

‘ಬಿಜೆಪಿ ಅಭ್ಯರ್ಥಿಗಳಿಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಸ್ಥಳೀಯ ಚುನಾವಣೆಗಳನ್ನೂ ಪಕ್ಷ ಗಂಭೀರವಾಗಿ ತೆಗೆದುಕೊಂಡಿದೆ. ಇವು ಪಕ್ಷದ ಅಡಿಪಾಯ ಮತ್ತು ಕಾರ್ಯಕರ್ತರ ಬಲ ಹೆಚ್ಚಿಸುತ್ತವೆ. ಬೆಂಗಳೂರಿನಿಂದ ಹಲವು ಮುಖಂಡರು ಪ್ರಚಾರಕ್ಕೆ ಬಂದಿದ್ದಾರೆ’ ಎಂದು ತಿಳಿಸಿದರು.

ದಕ್ಷಿಣ ಮತಕ್ಷೇತ್ರದ ನಾಥ್ ಪೈ ವೃತ್ತದಿಂದ ಆರಂಭಿಸಿದ ಸಚಿವರು, ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ಯಾಚಿಸಿದರು. ಬಸವೇಶ್ವರ ವೃತ್ತ, ಖಾಸಬಾಗ್‌ ಮಾರುತಿ ಗಲ್ಲಿ, ಹಳೇ ಪಿ.ಬಿ. ರಸ್ತೆಯ ಪಾಟೀಲ, ವಡಗಾವಿ ಡೋರ ಗಲ್ಲಿ ಮೊದಲಾದ ಕಡೆಗಳಲ್ಲಿ ಪ್ರಚಾರ ನಡೆಸಿದರು. ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಜೊತೆಗಿದ್ದರು.

ಡೋರಗಲ್ಲಿಯ ದುರ್ಗಾದೇವಿ ದೇವಸ್ಥಾನದಲ್ಲಿ ಪ್ರಚಾರ ಸಭೆ ನಡೆಸಿದರು. ‘ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ಆಡಳಿತಕ್ಕೆ ಜಗತ್ತಿನಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅವರ ಯೋಜನೆಗಳು ಜನಮನ ಗೆದ್ದಿವೆ. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಅಭಿವೃದ್ಧಿಗೆ ಹೆಚ್ಚು ವೇಗ ದೊರೆಯಲಿದೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು