ಮಂಗಳವಾರ, ಮೇ 17, 2022
29 °C
ಬೆಳಗಾವಿಯಲ್ಲಿ 2 ತಿಂಗಳಿಗೊಮ್ಮೆ ಸಚಿವ ಸಂಪುಟ ಸಭೆ ನಡೆಸುವ ಭರವಸೆ ಏನಾಯ್ತು?

PV Web Exclusive: ಮಾತು ಮರೆತ ಯಡಿಯೂರಪ್ಪ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ ಸಿದ್ಧಹಸ್ತರು’ ಎಂಬುದಾಗಿ ತಮ್ಮ ಆಪ್ತವಲಯದಲ್ಲಿ ಹಾಗೂ ಬೆಂಬಲಿಗರಿಂದ ಕರೆಸಿಕೊಳ್ಳುವ ಬಿ.ಎಸ್. ಯಡಿಯೂರಪ್ಪ ಅವರು ಬೆಳಗಾವಿ ವಿಷಯದಲ್ಲಿ ಹಲವು ಮಾತುಗಳನ್ನು ತಪ್ಪಿದ್ದಾರೆ. ಅಧಿಕಾರವಿದ್ದರೂ ಭರವಸೆ ಈಡೇರಿಸಿಲ್ಲ.

ಅವರು ಕೊಟ್ಟಿದ್ದ ‘ವಚನ’ಗಳೇನು? ಇಲ್ಲಿವೆ ನೋಡಿ...

ಅದು 2018ರ ಜುಲೈ 31, ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಈ ಭಾಗದ ವಿವಿಧ ಮಠಗಳ ಪೀಠಾಧಿಪತಿಗಳು ‘ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ’ಗೆ ಆಗ್ರಹಿಸಿ ಬೀದಿಗಿಳಿದು ಬೃಹತ್‌ ಹೋರಾಟ ನಡೆಸಿದರು. ಅಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಆಹ್ವಾನವಿಲ್ಲದಿದ್ದರೂ ಪಾಲ್ಗೊಂಡು, ಸ್ವಾಮೀಜಿಗಳಿಂದ ಮನವಿ ಸ್ವೀಕರಿಸಿ ಅಚ್ಚರಿ ಮೂಡಿಸಿದ್ದರು.

‘ಮುಖ್ಯಮಂತ್ರಿಗೆ ಕಾಳಜಿ ಇದ್ದರೆ, ಇಲ್ಲಿಗೆ ಬಂದು ಹೋರಾಟ ನಿರತ ಸ್ವಾಮೀಜಿಗಳ ಕ್ಷಮೆ ಯಾಚಿಸಬೇಕು. ಆಗಿರುವ ಅನ್ಯಾಯ ಸರಿಪಡಿಸಬೇಕು’ ಎಂದೆಲ್ಲಾ ಗುಡುಗಿದ್ದರು. ‘ನಮ್ಮ ಸರ್ಕಾರ ಬಂದ ಕೂಡಲೇ ರಾಜ್ಯಮಟ್ಟದ ಪ್ರಮುಖ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಲಾಗುವುದು. ವಿಧಾನಮಂಡಲ ಅಧಿವೇಶನ ನಿಯಮಿತವಾಗಿ ನಡೆಯುವಂತೆ ನೋಡಿಕೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದರು. ಆದರೆ, ಅಧಿಕಾರಕ್ಕೆ ಬಂದ ಮೇಲೆ ತಮ್ಮ ಮಾತುಗಳನ್ನು ಅವರು ಮರೆತಿದ್ದಾರೆ.


ಸಿಎಂ ಬಿ.ಎಸ್‌.ಯಡಿಯೂರಪ್ಪ

ಅಧಿಕಾರಕ್ಕೆ ಬಂದ ಮೇಲೆ...

ಬೆಳಗಾವಿಯವರೇ ಆದ ಹೆಚ್ಚಿನ ಶಾಸಕ ‘ಬೆಂಬಲ’ ಪಡೆದು ಸರ್ಕಾರ ರಚಿಸಿದ ಮೇಲೆ ಬೆಂಗಳೂರಿನಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ‘ಸುವರ್ಣ ವಿಧಾನಸೌಧದಲ್ಲಿ ಪ್ರತಿ 2 ತಿಂಗಳಿಗೊಮ್ಮೆ ಸಚಿವ ಸಂಪುಟ ಸಭೆ ನಡೆಸಲಾಗುವುದು’ ಎಂದು ಭರವಸೆ ನೀಡಿದ್ದರು. ಆ ಹೇಳಿಕೆ ನೀಡಿ ವರ್ಷವೇ ಉರುಳಿದೆ. ಆದರೆ, ಒಮ್ಮೆಯೂ ಸುವರ್ಣ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಲೇ ಇಲ್ಲ; ಅತ್ತ ಸುಳಿಯಲೂ ಇಲ್ಲ!  

ಬರೋಬ್ಬರಿ ₹438 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುವರ್ಣ ವಿಧಾನಸೌಧ ವರ್ಷದಲ್ಲಿ ಕೆಲವೇ ದಿನಗಳಷ್ಟೇ ಬಳಕೆಯಾಗುತ್ತಿದೆ. 2019ರಲ್ಲಿ ‘ನೆರೆ ಪರಿಹಾರ ಕಾರ್ಯದಲ್ಲಿ ಅಧಿಕಾರಿಗಳು ತೊಡಗಿಕೊಳ್ಳಬೇಕು’ ನೆಪವೊಡ್ಡಿ ವಿಧಾನಮಂಡಲ ಚಳಿಗಾಲದ ಅಧಿವೇಶನವನ್ನೂ ಇಲ್ಲಿ ನಡೆಸಲಿಲ್ಲ. 2020ರಲ್ಲಿ ಕೋವಿಡ್ ಕಾರಣದಿಂದ ಅಧಿವೇಶನ ನಡೆಸಲಿಲ್ಲ. ಆಗಾಗ, ಕೆಲವು ಇಲಾಖೆಗಳಿಂದ ಕಾರ್ಯಾಗಾರ, ವಿಚಾರಸಂಕಿರಣಗಳಷ್ಟೇ ನಡೆದಿವೆ. ಕೆಲವು ಜಿಲ್ಲಾ ಮಟ್ಟದ ಕಚೇರಿಗಳನ್ನಷ್ಟೇ ಸ್ಥಳಾಂತರಿಸಲಾಗಿದೆ. ಪರಿಣಾಮ, ಈ ಸೌಧ ಉತ್ತರ ಕರ್ನಾಟಕದ ಶಕ್ತಿಸೌಧವಾಗಬೇಕು ಎನ್ನುವ ಇಲ್ಲಿನ ಜನರ ಬೇಡಿಕೆ ಇನ್ನೂ ಬೇಡಿಕೆಯಾಗಿಯೇ ಉಳಿದಿದೆ. ಹೀಗಿರುವಾಗ, ‘2 ತಿಂಗಳಿಗೊಮ್ಮೆ ಸಚಿವ ಸಂಪುಟ ಸಭೆಯನ್ನು  ಸೌಧದಲ್ಲಿ ನಡೆಸಲಾಗುವುದು’ ಎಂಬ ಮುಖ್ಯಮಂತ್ರಿ ಪ್ರಸ್ತಾವ ಯಾವಾಗ ಅನುಷ್ಠಾನಕ್ಕೆ ಬರುತ್ತದೆ ಬಗ್ಗೆ ಜನರು ಆಸೆಗಣ್ಣಿನಿಂದ ಎದುರು ನೋಡುತ್ತಿದ್ದಾರೆ. 

ಅಧಿವೇಶನ ಸಂದರ್ಭದಲ್ಲಿ ಮಾತ್ರ ಒಮ್ಮೆ ಸಚಿವ ಸಂಪುಟ ಸಭೆಯನ್ನು ಇಲ್ಲಿ ನಡೆಸಲಾಗುತ್ತಿತ್ತು. ನಿಯಮಿತವಾಗಿನ ನಡೆಸುವುದರಿಂದ, ಈ ಭಾಗದ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎನ್ನುವ ಜನರ ನಿರೀಕ್ಷೆ ಹುಸಿಯಾಗಿದೆ.‌

ಕಚೇರಿಗಳು ಬರಲಿಲ್ಲ

ಗಡಿ, ನೀರಾವರಿ ಯೋಜನೆಗೆ ಸಂಬಂಧಿಸಿದ ಕಚೇರಿಗಳು ಸೇರಿದಂತೆ ಪ್ರಮುಖ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸಬೇಕು ಎನ್ನುವ ಬೇಡಿಕೆ ಬಗ್ಗೆಯೂ ಕೂಡಲೇ ಗಮನಹರಿಸುವುದಾಗಿ ಮುಖ್ಯಮಂತ್ರಿ ನೀಡಿದ್ದ ಭರವಸೆ ಭರವಸೆಯಾಗಿಯೇ ಉಳಿದಿದೆ. ಆ ಬಗ್ಗೆ ಅವರು ತುಟಿ ಬಿಚ್ಚುತ್ತಿಲ್ಲವೇಕೆ?!


ಸುವರ್ಣ ವಿಧಾನಸೌಧ

‘ಅಭಿವೃದ್ಧಿ ದೃಷ್ಟಿಯಲ್ಲಿ ನೋಡಿದರೆ, ಸುವರ್ಣ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸುವುದು ವಿಧಾನಮಂಡಲ ಅಧಿವೇಶನಕ್ಕಿಂತಲೂ ಹೆಚ್ಚು ಪ್ರಯೋಜನಕಾರಿ ಆಗಲಿದೆ. ಪ್ರಮುಖ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವುದಕ್ಕೆ ಹೆಚ್ಚು ಸಹಕಾರಿಯಾಗಲಿದೆ. ಅಲ್ಲಿನ ತೀರ್ಮಾನಗಳು ಅನುಷ್ಠಾನಕ್ಕೆ ಬರಲೇಬೇಕಾಗುತ್ತವೆ. ಆಗ ಹಲವು ಸಮಸ್ಯೆಗಳು ಬಗೆಹರಿಯತ್ತವೆ. ನನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಜೀವ ಬರುತ್ತದೆ. ಆದರೆ, ಈ ಕೆಲಸ ನಡೆಯದಿರುವುದು ವಿಷಾದನೀಯ’ ಎನ್ನುತ್ತಾರೆ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ.

‘ಅಧಿವೇಶನದಲ್ಲಿ ರಾಜಕೀಯ ಕಾರಣಗಳಿಗಾಗಿ ಗಲಾಟೆ, ಗೊಂದಲಗಳು ಸಾಮಾನ್ಯ ಎನ್ನುವಂತಾಗಿ ಹೋಗಿವೆ. ಆಗ, ನೀರಾವರಿ ಸೇರಿದಂತೆ ಈ ಭಾಗದ ಅಭಿವೃದ್ಧಿ ಯೋಜನೆಗಳು ಮತ್ತು ಜನರ ಆಶೋತ್ತರಗಳ ಬಗ್ಗೆ ಆದ್ಯತೆ ಸಿಗುವುದಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಪ್ರಾಧಾನ್ಯತೆ ಸಿಗುತ್ತದೆ. ಇಡೀ ಉತ್ತರ ಕರ್ನಾಟಕದ ಸಮಸ್ಯೆಗಳ ‍ಪರಿಹಾರಕ್ಕೆ ಒತ್ತು ಕೊಡಬೇಕು. ಮುಖ್ಯಮಂತ್ರಿ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು’ ಎನ್ನುವ ಆಗ್ರಹ ಜನರದು.

ವಿಶೇಷವೆಂದರೆ, ವಿಧಾನಸಭೆ ಉಪಸಭಾಧ್ಯಕ್ಷ (ಆನಂದ ಮಾಮನಿ) ಹಾಗೂ ವಿಧಾನಪರಿಷತ್ ಮುಖ್ಯಸಚೇತಕ (ಮಹಾಂತೇಶ ಕವಟಗಿಮಠ) ಇಲ್ಲಿಯವರೇ ಆಗಿದ್ದರೂ, ಸಚಿವರ ಸಂಪುಟ ನಡೆಸುವ ಘೋಷಣೆ ಬಗ್ಗೆ ಸೊಲ್ಲೆತ್ತಿಲ್ಲ!

ಈ ಭಾಗದ ಪ್ರಮುಖ ಬೇಡಿಕೆ ಮಹದಾಯಿ ನದಿ ನೀರು ಪಡೆಯುವುದು ಕೂಡ ಇನ್ನೂ ಸಾಧ್ಯವಾಗಿಲ್ಲ. ‘ಈ ಭಾಗದ ಜನರಿಗೆ ಸಿಹಿ ಸುದ್ದಿ’ ಕೊಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದರು. ಆದರೆ, ನ್ಯಾಯಮಂಡಳಿ ಹೈತೀರ್ಪು ನೀಡಿದ ನಂತರವೂ ನಮ್ಮ ಪಾಲಿನ ನೀರು ಸಿಕ್ಕಿಲ್ಲ! ಕೇಂದ್ರ, ರಾಜ್ಯ ಹಾಗೂ ಗೋವಾದಲ್ಲೂ ಬಿಜೆಪಿ ಸರ್ಕಾರಗಳೇ ಇದ್ದರೂ ವಿವಾದ ಬಗೆಹರಿದಿಲ್ಲ. ಸರ್ಕಾರವು ಉತ್ತರ ಕರ್ನಾಟಕ ಅಭಿವೃದ್ಧಿ ಕಡೆಗಣಿಸುತ್ತಿದೆಯೇ? ಜನರ ಉತ್ತರ– ‘ಹೌದು’.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು