ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಲ್‌ಇ ಆಸ್ಪತ್ರೆ: 24x7 ತುರ್ತು ಸ್ಪಂದನೆ

Last Updated 28 ಜನವರಿ 2021, 12:04 IST
ಅಕ್ಷರ ಗಾತ್ರ

ಬೆಳಗಾವಿ: ಅಪಘಾತದಲ್ಲಿ ಗಾಯಗೊಂಡವರು ಮತ್ತು ತುರ್ತು ಸಂದರ್ಭದಲ್ಲಿ ಜನರಿಗೆ ಸ್ಪಂದಿಸಲು ಅನುಕೂಲವಾಗುವ ದೃಷ್ಟಿಯಿಂದ ಇಲ್ಲಿನ ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಆರಂಭಿಸಿರುವ ‘ಶುಲ್ಕರಹಿತ 1099’ ಸಹಾಯವಾಣಿ ಸೇವೆಯನ್ನು ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಉದ್ಘಾಟಿಸಿದರು.

ಕೇಂದ್ರದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಚಾಲನೆ ನೀಡಿದ ಅವರು, ‘ಕೆಎಲ್‌ಇ ಸಂಸ್ಥೆಯ ಆಸ್ಪತ್ರೆಗಳು ಕೋವಿಡ್ -19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ 8 ತಿಂಗಳಿಂದ ಸಾವಿರಾರು ರೋಗಿಗಗಳಿಗೆ ಜೀವದಾನ ನೀಡಿವೆ. ಕೋವಿಡ್ ಸಾಂಕ್ರಾಮಿಕ ಎಂದು ಗೊತ್ತಾದ ಕೂಡಲೆ ಅದನ್ನು ಪರೀಕ್ಷಿಸುವ ವ್ಯವಸ್ಥೆ ಕಲ್ಪಿಸಲಾಯಿತು. 35ಸಾವಿರ ಜನರನ್ನು ತಪಾಸಣೆಗೆ ಒಳಪಡಿಸಲಾಯಿತು. 2ಸಾವಿರ ಜನರಿಗೆ ಚಿಕಿತ್ಸೆ ನೀಡಿ ಅವರನ್ನು ಪ್ರಾಣಾಪಾಯದಿಂದ ಪಾರು ಮಾಡಿದರೆ, ಕೇವಲ ಶೇ.2ರಷ್ಟು ಜನರು ಮಾತ್ರ ಜೀವ ಕಳೆದುಕೊಂಡರು’ ಎಂದು ತಿಳಿಸಿದರು.

‘ಪಿಪಿಇ ಕಿಟ್ ಹಾಕಿಕೊಂಡು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಚಿಕಿತ್ಸೆ ನೀಡುವುದು ತೀವ್ರ ತೊಂದರೆ. ಆದರೆ ವೈದ್ಯಕೀಯ ಸಿಬ್ಬಂದಿ ಅತ್ಯಂತ ಕಾಳಜಿಪೂರ್ವಕವಾಗಿ ರೋಗಿಗಳ ಸೇವೆ ನೀಡಿರುವುದು ಅಭಿನಂದನಾರ್ಹ’ ಎಂದರು.

ಮರಾಠಾ ಲಘು ಪದಾತಿ ದಳ (ಎಂಎಲ್‌ಐಆರ್‌ಸಿ) ಉಪ ಕಮಾಂಡೆಂಟ್ ಸ್ವಪ್ನಿಲ್‌ ತ್ರಿಭುವನ್ ಮಾತನಾಡಿ, ‘ಗಡಿಯಲ್ಲಿ ನಾವು ನಮ್ಮ ವೈರಿಗಳ ವಿರುದ್ಧ ಹೋರಾಡುತ್ತೇವೆ. ಅವರು ನಮ್ಮ ಕಣ್ಣ ಮುಂದೆ ಇರುತ್ತಾರೆ. ಆದರೆ, ನಿಮ್ಮ ಕಣ್ಣಿಗೆ ಕಾಣಿಸದ ಕೊರೊನಾ ಎಂಬ ಮಹಾಮಾರಿ ವಿರುದ್ಧ ಹೋರಾಡಿ ದೇಶ ರಕ್ಷಣೆ ಮಾಡುತ್ತೀರಿ. ಸಮವಸ್ತ್ರದಾರಿಗಳು ಯಾವಾಗಲೂ ಯೋಧರೆ. ಈಗ ಮತ್ತೆ ಸವಾಲು ಎದುರಾಗಿದೆ. ಭವಿಷ್ಯದಲ್ಲಿ ನಾವು ಇನ್ನೂ ಗಟ್ಟಿಯಾಗಬೇಕಾಗಿದೆ. ವೈದ್ಯಕೀಯ ಯೋಧರ ಸೇವೆ ಅತ್ಯಂತ ಸ್ಮರಣೀಯ’ ಎಂದು ಹೇಳಿದರು.

ಇದೇ ವೇಳೆ, ಆಸ್ಪತ್ರೆಯು ಪ್ರಕಟಿಸುವ ‘ಫೋಕಸ್’ ಅನ್ನು ಪ್ರಭಾಕರ ಕೋರೆ, ‘ಮಧುಮೇಹ ವೈದ್ಯ’ವನ್ನು ಕುಲಪತಿ ಡಾ.ವಿವೇಕ ಸಾವೋಜಿ, ‘ಲೈಫ್ ಲೈನ್’ ಅನ್ನು ಸ್ವಪ್ನಿಲ್ ತ್ರಿಭುವನ್‌ ಬಿಡುಗಡೆ ಮಾಡಿದರು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ ಸ್ವಾಗತಿಸಿದರು. ಜೆಎನ್ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯೆ ಡಾ.ನಿರಂಜನಾ ಎಸ್. ಮಹಾಂಶೆಟ್ಟಿ, ಡಾ.ವಿ.ಡಿ. ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT